ಮನೆಗೆ ಸರ್ಪ್ರೈಸ್ ಆಗಿ ಬಂತು ಲಕ್ಷಗಟ್ಟಲೆ ಮೌಲ್ಯದ ಪೀಠೋಪಕರಣಗಳು; ಎಲ್ಲಕ್ಕೂ ಕಾರಣ ಈ ಪುಟಾಣಿ ಪೋರನಂತೆ!
ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಏನೂ ಆಗಬಹುದು. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಮನೆ ಬಾಗಿಲಿಗೆ ಲಕ್ಷಗಟ್ಟಲೆ ಮೌಲ್ಯದ ಪೀಠೋಪಕರಣಗಳು ಬಂದಿವೆ. ಎಲ್ಲಕ್ಕೂ ಕಾರಣವಾಗಿದ್ದು, 22 ತಿಂಗಳ ಪುಟಾಣಿ ಪೋರ! ಅಮೇರಿಕಾದಲ್ಲಿ ವರದಿಯಾದ ಘಟನೆ ಇಲ್ಲಿದೆ.
ಸಾಮಾನ್ಯವಾಗಿ ತಜ್ಞರು ಮಕ್ಕಳಿಂದ ಮೊಬೈಲ್ ದೂರವಿಡಿ ಎಂದು ಸಲಹೆ ನೀಡುತ್ತಲೇ ಇರುತ್ತಾರೆ. ಇದಕ್ಕೆ ಆರೋಗ್ಯದ ಹಿತದೃಷ್ಟಿ ಒಂದು ಕಾರಣವಾದರೆ, ಏನಾದರೂ ಎಡವಟ್ಟು ಸಂಭವಿಸಬಹುದು ಎಂಬ ಆತಂಕ ಮತ್ತೊಂದು ಕಾರಣ. ಮಕ್ಕಳ ಕೈಗೆ ಮೊಬೈಲ್ ಸಿಕ್ಕು ಎಡವಟ್ಟಾಗಿರುವ ಉದಾಹರಣೆಗಳು ಅನೇಕ. ಈಗಾಗಲೇ ಅಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ತಾಜಾ ಬೆಳವಣಿಗೆಯೊಂದರಲ್ಲಿ ಪೋರನೊಬ್ಬ ತಾಯಿಯ ಮೊಬೈಲ್ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ. ಮನೆ ಬಾಗಿಲಿಗೆ ಸಾಲುಸಾಲಾಗಿ ವಸ್ತುಗಳು ಬರುವುದನ್ನು ನೋಡಿದ ಪೋಷಕರಿಗೆ ನಿಜ ವಿಷಯ ಅರ್ಥವಾಗಲು ಬಹಳಷ್ಟು ಸಮಯವೇ ಹಿಡಿದಿದೆ. ಅಷ್ಟಕ್ಕೂ ಆಗಿದ್ದೇನು? ಆ ಪೋರ ಆರ್ಡರ್ ಮಾಡಿದ್ದು ಹೇಗೆ? ಎನ್ಬಿಸಿ ವರದಿ ಮಾಡಿದ ಘಟನೆ ಇಲ್ಲಿದೆ.
22 ತಿಂಗಳ ಮಗು ಅಯಾಂಶ್ ಕುಮಾರ್. ಆತ ಇಕಾಮರ್ಸ್ ಸೈಟ್ ಆದ ವಾಲ್ಮಾರ್ಟ್ನಿಂದ ಬರೋಬ್ಬರಿ 2,000 ಡಾಲರ್ ಅರ್ಥಾನ್ ₹ 1.4 ಲಕ್ಷ ಮೊತ್ತದ ಪೀಠೋಪಕರಣಗಳನ್ನು ಖರೀದಿ ಮಾಡಿದ್ದಾನೆ. ಇದನ್ನೇನು ಆತನ ಪೋಷಕರು ಹೀಗೆ ಮಾಡು ಎಂದು ಹೇಳಿಕೊಟ್ಟು ಮಾಡಿದ್ದಲ್ಲ. ಬದಲಾಗಿ ಆತನ ತಾಯಿ ಮೊಬೈಲ್ ನೀಡಿದ್ದರಿಂದ ಆದ ಯಡವಟ್ಟು.
ಹೌದು. ಅಯಾಂಶ್ ಅವರ ತಾಯಿ ವಾಲ್ಮಾರ್ಟ್ ವೆಬ್ಸೈಟ್ನಲ್ಲಿ ಹಲವಾರು ವಸ್ತುಗಳನ್ನು ಕಾರ್ಟ್ನಲ್ಲಿ ಹಾಕಿಟ್ಟಿದ್ದರು. ಅದರಲ್ಲಿ ಕೆಲವನ್ನಷ್ಟೇ ಕೊಳ್ಳುವ ಉದ್ದೇಶ ಅವರದ್ದಾಗಿತ್ತು. ಆದರೆ ಅವರ ಮಗನ ಕಿತಾಪತಿಯಿಂದ ಎಲ್ಲಾ ವಸ್ತುಗಳೂ ಮನೆ ಬಾಗಿಲಿಗೆ ಬಂದಿವೆ. ‘‘ಇದನ್ನು ನಂಬುವುದು ಅಸಾಧ್ಯ. ಆದರೆ ಘಟನೆ ಮಾತ್ರ ಹಾಗೇ ನಡೆದಿದೆ’’ ಎಂದು ವಿವರಿಸಿದ್ದಾರೆ ಅಯಾಂಶ್ ತಂದೆ ಪ್ರಮೋದ್ ಕುಮಾರ್.
ಮನೆ ಬಾಗಿಲಿಗೆ ಪೀಠೋಪಕರಣಗಳು ಸೇರಿದಂತೆ ವಸ್ತುಗಳು ಬಂದಾಗ ಎಲ್ಲರಿಗೂ ಆಶ್ಚರ್ಯವಾಯಿತಂತೆ. ಕೆಲವೊಂದು ವಸ್ತುಗಳು ಎಷ್ಟು ದೊಡ್ಡವಿದ್ದವೆಂದರೆ ಮನೆ ಬಾಗಿಲಿನ ಮೂಲಕ ಅವನ್ನು ಒಳ ತರಲು ಅಸಾಧ್ಯವಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಅಯಾಂಶ್ ಮಾಡಿದ ಆರ್ಡರ್ನಲ್ಲಿ ಕುರ್ಚಿಗಳು, ಹೂ ಇಡಲು ಪಾಟ್ಗಳು ಸೇರಿದಂತೆ ಅನೇಕ ವಸ್ತುಗಳು ಇದ್ದವು.
ಮಗ ಆರ್ಡರ್ ಮಾಡಿದ್ದರ ಕುರಿತು ಪ್ರತಿಕ್ರಿಯೆ ನೀಡಿರುವ ಅಯಾಂಶ್ ತಾಯಿ, ‘ಆತ ಇನ್ನೂ ಪುಟ್ಟ ಹುಡುಗ. ಬಹಳ ಮುದ್ದು. ಅವನೇ ಎಲ್ಲವನ್ನೂ ಆರ್ಡರ್ ಮಾಡಿದ್ದಾನೆ ಎಂದು ತಿಳಿದು ನಾವೆಲ್ಲಾ ನಕ್ಕಿದ್ದೇವೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಯಾಂಶ್ ತಾಯಿ ಹಾಗೂ ಇತರ ಸಂಬಂಧಿಗಳು ಮೊಬೈಲ್ ಬಳಸಿ ವಸ್ತುಗಳನ್ನು ಖರೀದಿಸುವುದನ್ನು ಗಮನಿಸುತ್ತಿದ್ದ ಎಂದು ಎನ್ಬಿಸಿ ವರದಿ ಮಾಡಿದೆ.
ಇನ್ನು ಮುಂದೆ ಮೊಬೈಲ್ ಸ್ಕ್ರೀನ್ ತೆರೆಯಲು ಕಷ್ಟವಾಗುವ ಪಾಸ್ವರ್ಡ್ಗಳು ಹಾಗೂ ಫೇಸ್ಲಾಕ್ ಹಾಕಿಡುವುದಾಗಿ ಅಯಾಂಶ್ ತಂದೆ ವಿವರಿಸಿದ್ದಾರೆ. ಅಲ್ಲದೇ ಮೊಬೈಲ್ಅನ್ನು ಯಾವಾಗಲೂ ಲಾಕ್ ಮಾಡಿಡುವುದಾಗಿ ಅವರು ಹೇಳಿದ್ದಾರೆ. ಈ ಘಟನೆ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:
ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ
Published On - 2:34 pm, Sun, 23 January 22