Viral Video : ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ? ಆ ಲೋಕವೇ ಅಂಥದ್ದು. ಜಗತ್ತನ್ನೇ ಮರೆಸುವಂಥ ಮಾಂತ್ರಿಕತೆ ಅದಕ್ಕಿದೆ. ಆದರೆ ಮಕ್ಕಳನ್ನು ಸಾಕಿ ಪೋಷಿಸಿ ನಿಭಾಯಿಸುವುದು? ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದರಲ್ಲೂ ಮನುಷ್ಯರು ತಾಳ್ಮೆ ಕಳೆದುಕೊಳ್ಳಬಹುದು. ಆದರೆ ಪ್ರಾಣಿ ಪಕ್ಷಿಗಳು ಅತ್ಯಂತ ಜವಾಬ್ದಾರಿಯಿಂದ ತಮ್ಮ ಮರಿಗಳನ್ನು ಪೋಷಿಸುತ್ತವೆ. ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ ಮಹೀಂದ್ರಾ ಆಗಾಗ ಪ್ರಾಣಿ ಪಕ್ಷಿ, ಪ್ರಕೃತಿಗೆ ಸಂಬಂಧಿಸಿದ ಆಸಕ್ತಿಕರ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿರುತ್ತೀರಿ. ಈಗಿವರು ಹಂಚಿಕೊಂಡ ವಿಡಿಯೋದ ಶೀರ್ಷಿಕೆ TT; Ticketless Traveling- ಟಿಕೆಟ್ರಹಿತ ಪ್ರಯಾಣ.
ಗುರುವಾರ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ತಾಯಿಬಾತುಕೋಳಿ ತನ್ನ ಮರಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ವಿಹಾರಕ್ಕೆ ಕರೆದೊಯ್ಯುತ್ತಿದೆ. ಉಳಿದ ಮರಿಗಳನ್ನು ಅದನ್ನು ಹಿಂಬಾಲಿಸುತ್ತಿವೆ. ಕೀ ಕೊಟ್ಟ ಗೊಂಬೆಗಳಂತೆ ಅವು ನೀರ ಮೇಲೆ ಚಲಿಸುವುದನ್ನು ನೋಡಿದಾಗ ಯಾರಿಗೂ ಅಚ್ಚರಿಯಾಗುತ್ತದೆ ಅಲ್ಲವೆ? ಈ ವಿಡಿಯೋ ಸುಮಾರು 6 ಲಕ್ಷ ವೀಕ್ಷಕರನ್ನು ಸೆಳೆದಿದೆ.
ಒಬ್ಬ ಟ್ವಿಟರ್ ಖಾತೆದಾರರು, ‘ಯಶಸ್ಸಿನ ಗುಟ್ಟೆಂದರೆ ಬಾತುಕೋಳಿಯ ಪ್ರಯಾಣದಂತೆಯೇ. ಚಲಿಸುವ ದಾರಿ ಎಂಥ ಮೃದು ಮತ್ತು ಸರಾಗವಾಗಿದೆಯಲ್ಲ? ಅಡೆತಡೆ ಎನ್ನುವುದೇ ಇಲ್ಲಿಲ್ಲ. ಆದರೆ ಕೆಳಗೆ ನಿರಂತರವಾಗಿ ಬಾತುಕೋಳಿ ಪೆಡ್ಲಿಂಗ್ ಮಾಡುವುದು ಯಾರಿಗಾದರೂ ಕಾಣುತ್ತದೆಯಾ?’ ಎಂದಿದ್ದಾರೆ.
In India, that would be called a TT. Ticketless traveler. pic.twitter.com/bNCQ42zO7W
— anand mahindra (@anandmahindra) September 8, 2022
ಬಾತುಕೋಳಿ ನೀರಿನಲ್ಲಿ ನಿರಂತರವಾಗಿ ಪೆಡ್ಲಿಂಗ್ ಮಾಡುತ್ತಲೇ ಇರಬೇಕು. ಆದರೆ ಎಂದೂ ತನಗೆ ಕಷ್ಟವಾಗುತ್ತಿದೆ ಇದೆಲ್ಲ ಎಂದು ಅದು ಮುಖದ ಮೇಲೆ ತೋರ್ಪಡಿಸುವುದೇ ಇಲ್ಲ. ಸದಾ ಶಾಂತ ಮತ್ತು ನೋಡಿದ ಇತರರಿಗೂ ಸಂತೋಷ ನೀಡುವಂಥ ಸ್ನಿಗ್ಧ ಭಾವ. ಈ ಭಾವ ಒಂಟಿಯಾಗಿ ಚಲಿಸುವಾಗಲೂ, ಕುಟುಂಬದೊಂದಿಗೆ ಚಲಿಸುವಾಗಲೂ ಒಂದೇ ಇರುತ್ತದೆ. ಸ್ಥಿತಪ್ರಜ್ಞ ಎನ್ನುತ್ತೇವಲ್ಲ ಅದೇ ಇದು.
ನಮಗೇಕೆ ಇಂಥ ಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಾಗದು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:56 pm, Mon, 12 September 22