ಬಿರಿಯಾನಿ ಸರ್ವ್ ಮಾಡದ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ; ಆರೋಪಿಗಳು ಪೊಲೀಸರ ವಶಕ್ಕೆ

| Updated By: ಶ್ರೀದೇವಿ ಕಳಸದ

Updated on: Nov 11, 2022 | 10:18 AM

Greater Noida : ನೋಯ್ಡಾದ ಮಾಲ್​ ಒಂದರಲ್ಲಿ ಈ ಅಹಿತಕರ ಘಟನೆ ನಡೆದಿದೆ. ಆರ್ಡರ್​ ಮಾಡಿದ ಬಿರಿಯಾನಿ ಖಾಲಿಯಾಗಿದೆ ಎಂದರೂ ಕೇಳದ ಈ ಮೂವರು ಗ್ರಾಹಕರು ರೆಸ್ಟೋರೆಂಟ್​ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಬಿರಿಯಾನಿ ಸರ್ವ್ ಮಾಡದ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ; ಆರೋಪಿಗಳು ಪೊಲೀಸರ ವಶಕ್ಕೆ
Angry Men Mercilessly Thrash Restaurant Staff Over Late Biryani Order In Greater Noida
Follow us on

Viral Video : ಸಾರ್ವಜನಿಕ ಸ್ಥಳಗಳಲ್ಲಿ ಮನುಷ್ಯ ಹೆಚ್ಚು ಪ್ರಜ್ಞೆಯಿಂದ ವರ್ತಿಸಬೇಕಾಗುತ್ತದೆ. ತಾಳ್ಮೆ ಕಳೆದುಕೊಂಡು ಹಕ್ಕು ಸಾಧಿಸಲು ನೋಡಿದರೆ ತಕ್ಕ ಪ್ರತಿಫಲ ಉಣ್ಣಬೇಕಾಗುತ್ತದೆ. ಗ್ರೇಟರ್​ ನೋಯ್ಡಾದ ಅನ್ಸಲ್ ಪ್ಲಾಝಾ ಮಾಲ್​ನ ಝೌಕ್​ ರೆಸ್ಟೋರೆಂಟ್​ನಲ್ಲಿ ನಡೆದ ಈ ಘಟನೆಯ ವಿಡಿಯೋ ನೋಡಿ. ಬಿರಿಯಾನಿ ಖಾಲಿಯಾಗಿದೆ ಎಂದರೂ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಈ ಮೂವರು ಗ್ರಾಹಕರು. ಎಷ್ಟೊತ್ತಾದರೂ ಸರ್ವ್ ಮಾಡದೇ ಇದ್ದಾಗ ಕೋಪಗೊಂಡ ಇವರುಗಳು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.

ರಾತ್ರಿಯ ಊಟಕ್ಕೆಂದು ಸುಮಾರು 10.30ರ ಸುಮಾರಿಗೆ ಈ ಮೂವರೂ ಝೌಕ್ ರೆಸ್ಟೋರೆಂಟ್‌ಗೆ ಬಂದಿದ್ದಾರೆ. ತಡರಾತ್ರಿಯಾದ್ದರಿಂದ ಚಿಕನ್​ ಬಿರಿಯಾನಿ ಲಭ್ಯವಿಲ್ಲ ಎಂದು ರೆಸ್ಟೋರೆಂಟ್​ ಸಿಬ್ಬಂದಿ ಹೇಳಿದರೂ ಕೇಳದೆ ಕಾಯುತ್ತ ಕುಳಿತಿದ್ದಾರೆ. ನಂತರ ಇದ್ದಕ್ಕಿದ್ದಂತೆ ಒಬ್ಬನು ಎದ್ದು ಬಂದು ಸಿಬ್ಬಂದಿಯನ್ನು ಥಳಿಸಲು ಶುರು ಮಾಡಿದ್ದಾನೆ. ಇದು ಅಷ್ಟಕ್ಕೇ ಮುಗಿಯದೇ ಮೂರೂ ಗ್ರಾಹಕರು ಆ ಸಿಬ್ಬಂದಿಯನ್ನು ರೆಸ್ಟೋರೆಂಟ್​ನಿಂದ ಹೊರಗೆ ಕರೆದೊಯ್ದು ಹಲ್ಲೆ ಮುಂದುವರಿಸಿದ್ದಾರೆ. ನಂತರ ರೆಸ್ಟೋರೆಂಟ್ ಸಿಬ್ಬಂದಿ ಈ ಮೂವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿ ಆರೋಪಿಗಳಾದ ರಾವೇಶ್​, ಮನೋಜ್​, ಕ್ರಿಷ್​ ಅವರನ್ನು ಬಂಧಿಸಲಾಗಿದೆ.

‘ಈ ಮೂವರು ಆರೋಪಿಗಳು ಬುಧವಾರ ರಾತ್ರಿ ಊಟಕ್ಕೆಂದು ರೆಸ್ಟೋರೆಂಟ್​ಗೆ ಹೋಗಿದ್ದರು. ಬಿರಿಯಾನಿ ಆರ್ಡರ್​ ಮಾಡಿದರು. ರೆಸ್ಟೋರೆಂಟ್ ಸಿಬ್ಬಂದಿ ಅಲ್ತಾಫ್ ಬಿರಿಯಾನಿ ಖಾಲಿಯಾಗಿದೆ ಎಂದನು. ಆಗ ತಾಳ್ಮೆ ಕಳೆದುಕೊಂಡ ಗ್ರಾಹಕ ರೆಸ್ಟೋರೆಂಟ್​ ಸಿಬ್ಬಂದಿಯ ಕಾಲರ್ ಹಿಡಿದು ಎಳೆದಾಡಿ ಹೊಡೆದ’ ಎಂದು ನೋಯ್ಡಾದ ಎಸಿಪಿ ಮಹೇಂದ್ರ ದೇವ್​ ತಿಳಿಸಿದ್ದಾರೆ.

ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಹಲ್ಲೆ ಮಾಡಿದ್ದಕ್ಕಾಗಿ ವಿಧಿಸಲಾಗುವ ಶಿಕ್ಷೆ) ಮತ್ತು 147 (ಗಲಭೆ ಮಾಡಿದ್ದಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ