Viral Video: ಕಲಾವಿದ ಬಿಡಿಸಿದ ತನ್ನ ಚಿತ್ರ ಕಂಡು ಭಾವುಕರಾದ ಬಸ್ ಕಂಡಕ್ಟರ್; ಹೃದಯಸ್ಪರ್ಶಿ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನೋಡುಗರ ಕಣ್ಣಂಚಲಿ ನೀರು ತರಿಸುತ್ತವೆ. ಸದ್ಯ ಅಂತಹದೊಂದು ಹೃದಯಸ್ಪರ್ಶಿ ವಿಡಿಯೋ ಇದೀಗ ವೈರಲ್ ಆಗಿದೆ. ಬಸ್ಸಿನಲ್ಲಿ ಕುಳಿತು ಚಿತ್ರ ಕಲಾವಿದರೊಬ್ಬರು ಬಸ್ ನಿರ್ವಾಹಕನ ಸುಂದರ ಚಿತ್ರ ಬಿಡಿಸಿದ್ದು, ಕಲಾವಿದ ಬಿಡಿಸಿದ ತನ್ನ ಚಿತ್ರವನ್ನು ಕಂಡು ಕಂಡಕ್ಟರ್ ಭಾವುಕರಾಗಿದ್ದಾರೆ. ಸದ್ಯ ಈ ಸುಂದರ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಪ್ರತಿಯೊಬ್ಬ ಮನುಷ್ಯನಿಗೂ ಕೆಲಸ, ಸಂಸಾರ, ಮಕ್ಕಳು ಅನ್ನೋ ಜವಬ್ದಾರಿ ಇದ್ದೇ ಇದೆ. ಈ ಎಲ್ಲಾ ಜವಬ್ದಾರಿಗಳು ಹೆಗಲೇರಿದಾಗ, ಒತ್ತಡ ಹೆಚ್ಚಾದಾಗ ಒಬ್ಬಂಟಿಯಾಗಿರುವ ಸಮಯದಲ್ಲಿ ನಾವು ಏನನ್ನೋ ಯೋಚಿಸುತ್ತಾ ಸುಮ್ಮನೆ ಕುಳಿತು ಬಿಡುತ್ತೇವೆ. ಅದೇ ರೀತಿ ಇಲ್ಲೊಬ್ಬ ಬಸ್ ಕಂಡಕ್ಟರ್ ಕೂಡಾ ಬಸ್ ಹೊರಡುವ ಮುನ್ನ ಏನನ್ನೋ ಯೋಚಿಸುತ್ತಾ ಬೇಸರದಿಂದ ಕುಳಿತಿದ್ದರು. ಈ ದೃಶ್ಯವನ್ನು ಕಂಡ ಚಿತ್ರ ಕಲಾವಿದರೊಬ್ಬರು ಕಂಡಕ್ಟರ್ ಮುಖದಲ್ಲಿ ನಗು ತರಿಸಬೇಕೆಂದು ಬಸ್ಸಿನಲ್ಲಿ ಕುಳಿತು ಅವರ ಚಿತ್ರವನ್ನು ಬಿಡಿಸಿದ್ದಾರೆ. ಕಲಾವಿದ ಬಿಡಿಸಿದ ತನ್ನ ಚಿತ್ರವನ್ನು ಕಂಡು ಕಂಡಕ್ಟರ್ ಮೊಗದಲ್ಲಿ ನಗು ಮೂಡಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಸುಂದರ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಈ ವಿಡಿಯೋವನ್ನು ಚಿತ್ರ ಕಲಾವಿದ ಆಕಾಶ್ ಸೆಲ್ವರಸು (imaginelife_official) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಚಿತ್ರ ಕಲಾವಿದ ಆಕಾಶ್ ಏನೋ ಯೋಚಿಸುತ್ತಾ ಬೇಸರದಲ್ಲಿದ್ದ ಬಸ್ ಕಂಡಕ್ಟರ್ ಒಬ್ಬರ ಸುಂದರ ಚಿತ್ರವನ್ನು ಬಿಡಿಸುವ ದೃಶ್ಯವನ್ನು ಕಾಣಬಹುದು. ಚಿತ್ರ ಬಿಡಿಸಿದ ಬಳಿಕ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಈ ಸುಂದರ ಚಿತ್ರವನ್ನು ನೋಡಿ ಬಹಳ ಸಂತೋಷಪಟ್ಟರು. ಕೊನೆಯಲ್ಲಿ ಕಂಡಕ್ಟರ್ ತನ್ನ ಚಿತ್ರವನ್ನು ಕಂಡು ಭಾವುಕರಾಗಿ ಮನಸ್ಪೂರ್ವಕವಾಗಿ ನಕ್ಕಿದ್ದಾರೆ.
View this post on Instagram
ಇದನ್ನೂ ಓದಿ: ಯಾವಾಗ ಮದುವೆ ಎಂದು ಪದೇ ಪದೇ ಕೇಳುತ್ತಿದ್ದ ಪಕ್ಕದ ಮನೆಯ ವೃದ್ದನನ್ನೇ ಕೊಂದ ವ್ಯಕ್ತಿ
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಂಡೆಕ್ಟರ್ ಸಾಹೆಬ್ರ ಆ ಒಂದು ನಗು ನಮ್ಮೆಲ್ಲರ ಮೊಗದಲ್ಲೂ ನಗು ತರಿಸಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಕಲೆಯಿಂದ ಒಬ್ಬರ ಮುಖದಲ್ಲಿ ನಗು ತರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ