Viral Video: ಚಿನ್ನ, ಬೆಳ್ಳಿ, ವಜ್ರ ಬಳಸಿ 2.5 ಕೆಜಿ ತೂಕದ ರಾಮ ಮಂದಿರ ತಯಾರಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ
ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದ್ದು, ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ಕುಶಲಕರ್ಮಿಯೊಬ್ಬರು ಚಿನ್ನ ಬೆಳ್ಳಿ ಮತ್ತು ವಜ್ರಗಳನ್ನು ಬಳಸಿಕೊಂಡು ಗುಲಾಬಿ ಮೀನಕರಿ ಕಲಾಪ್ರಕಾದರಲ್ಲಿ ರಾಮ ಮಂದಿರದ ಸುಂದರ ಪ್ರತಿಕೃತಿಯನ್ನು ರಚಿಸಿದ್ದು, ಈ ಕುರಿತ ಸುದ್ದಿಯೊಂದು ಸದ್ಯ ವೈರಲ್ ಆಗುತ್ತಿದೆ.
ರಾಮ ಮಂದಿರ ಉದ್ಘಾಟನೆಗೆ ದಿನ ಗಣನೆ ಶುರುವಾಗಿದೆ. ಇದಾಗಲೇ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ವಾರಣಾಸಿಯ ಗುಲಾಬಿ ಮೀನಕರಿ ಕುಶಲಕರ್ಮಿಯೊಬ್ಬರು ಚಿನ್ನ, ಬೆಳ್ಳಿ ಮತ್ತು ವಜ್ರಗಳನ್ನು ಬಳಸಿಕೊಂಡು ಗುಲಾಮಿ ಮೀನಕರಿಯಲ್ಲಿ ರಾಮ ಮಂದಿರದ ಸುಂದರ ಪ್ರತಿಕೃತಿಯನ್ನು ತಯಾರಿಸಿದ್ದು, ಈ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ವಾರಣಾಸಿಯ ಗಾಯ್ ಘಾಟ್ ನಿವಾಸಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಗುಲಾಬಿ ಮೀನಕರಿ ಕುಶಲಕರ್ಮಿ ಕುಂಜ್ ಬಿಹಾರಿ ಈ ಪ್ರತಿಕೃತಿಯನ್ನು ತಯಾರಿಸಿದ್ದು, ಈ ಪ್ರತಿಕೃತಿಯನ್ನು ಪೂರ್ಣಗೊಳಿಸಲು ಅವರು 108 ದಿನಗಳನ್ನು ತೆಗೆದುಕೊಂಡಿದ್ದಾರೆ. ಮೀನಕರಿ ಕಲಾಕೃತಿಯನ್ನು ರಚಿಸುವಲ್ಲಿ ಪರಿಣಿತಿಯನ್ನು ಹೊಂದಿರುವ ಕುಂಜ್, ಮೊದಲಿಗೆ ಮೀನಕರಿಯಿಂದ ರಾಮ ಮಂದಿರದ ಪ್ರತಿಕೃತಿಯನ್ನು ರಚಿಸಿ, ನಂತರ ಅದರ ಮೇಲ್ಮೈಯನ್ನು ಚಿನ್ನ, ಅನ್ ಕಟ್ ವಜ್ರ ಮತ್ತು ಬೆಳ್ಳಿಯಿಂದ ಅಲಂಕರಿಸಿದ್ದಾರೆ. ಜೊತೆಗೆ ಇವರು ತಯಾರಿಸಿದಂತಹ ರಾಮ ಮಂದಿರದ ಪ್ರತಿಕೃತಿಯ ಒಳ ಭಾಗದಲ್ಲಿ ಚಿನ್ನದಿಂದ ಮಾಡಿದಂತಹ ರಾಮ ಲಲ್ಲಾ ವಿಗ್ರಹವನ್ನು ಸಹ ಇರಿಸಿದ್ದಾರೆ.
ಮೊದಲಿಗೆ ಮೀನಕರಿಯಿಂದ ರಾಮ ಮಂದಿರವನ್ನು ರಚಿಸಿ, ಅದರ ಹೊರ ವಿನ್ಯಾಸವನ್ನು ರಚಿಸಲು ಚಿನ್ನದ ಜೊತೆಗೆ ಬೆಳ್ಳಿಯನ್ನು ಸಹ ಬಳಸಿದ್ದಾರೆ. ಮತ್ತು ಅನ್ ಕಟ್ ವಜ್ರಗಳನ್ನು ಬಳಸಿ ಗೋಪುರವನ್ನು ಅಲಂಕರಿಸಿದ್ದಾರೆ. ಹೀಗೆ ಚಿನ್ನ, ಒಂದುವರೆ ಕಿಲೋ ಬೆಳ್ಳಿ ಮತ್ತು ಅನ್ ಕಟ್ ವಜ್ರಗಳಿಂದ ಮಾಡಲ್ಪಟ್ಟ ಈ ಪ್ರತಿಕೃತಿ 12 ಇಂಚು ಎತ್ತರ, 12 ಇಂಚು ಉದ್ದ ಮತ್ತು 8 ಇಂಚು ಅಗಲವನ್ನು ಹೊಂದಿದ್ದು, ಸುಮಾರು 2.5 ಕೆಜಿ ಯಷ್ಟು ತೂಗುತ್ತದೆ.
#WATCH | Uttar Pradesh | National Award-Winning craftsman, Kunj Bihari Singh from Varanasi has made a replica of Ayodhya’s Ram Temple with gold, silver and diamonds. pic.twitter.com/nZevMwNjwg
— ANI (@ANI) January 17, 2024
ಮಾಧ್ಯಮಗಳೊಂದಿಗೆ ಮಾತನಾಡಿದ ಕುಂಜ್ ಬಿಹಾರಿ, ಶ್ರೀರಾಮನ ಕೃಪೆಯಿಂದ ಈ ವಿಶೇಷ ಪ್ರತಿಕೃತಿಯನ್ನು ತಯಾರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಮೊದಲಿಗೆ ಇವರು ಗುಲಾಬಿ ಮೀನಕರಿಯಿಂದ ರಾಮ ಮಂದಿರದ ಪ್ರತಿಕೃತಿಯನ್ನು ರಚಿಸುವ ಕಾರ್ಯಕ್ಕೆ ಕೈ ಹಾಕಿದಾಗ ಎಷ್ಟೇ ಪ್ರಯತ್ನ ಪಟ್ಟರು ಅದರಲ್ಲಿ ನಿಖರವಾದ ಆಕಾರವನ್ನು ರೂಪಿಸಲು ಅವರಿಗೆ ಸಾಧ್ಯವಾಗಲಿಲ್ಲವಂತೆ. ನಂತರ ಅವರು ಶ್ರೀರಾಮನನ್ನು ನೆನೆಯತ್ತಾ, ರಾಮನ ಸ್ತೋತ್ರಗಳನ್ನು ಕೇಳುವ ಮೂಲಕ ಮತ್ತೊಮ್ಮೆ ಗುಲಾಬಿ ಮೀನಕರಿ ಕಲಾ ಪ್ರಕಾರದಲ್ಲಿ ರಾಮ ಮಂದಿರದ ಪ್ರತಿಕೃತಿಯನ್ನು ರಚಿಸಲು ಆರಂಭಿಸುತ್ತಾರೆ. ಹೀಗೆ ಸತತ 108 ದಿನಗಳ ಪ್ರಯತ್ನದಲ್ಲಿ ಅವರು ಸುಂದರವಾದ ರಾಮ ಮಂದಿರ ಪ್ರತಿಕೃತಿಯನ್ನು ತಯಾರಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದೆಲ್ಲಾ ಶ್ರೀರಾಮನ ಕೃಪೆಯಿಂದ ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಮ ಸ್ತೋತ್ರ ಪಠಿಸುತ್ತಾ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ರಾಮ ಭಕ್ತರು
ಇನ್ನೂ ಗುಲಾಬಿ ಮೀನಕರಿಯ ವಿಷಯಕ್ಕೆ ಬರುವುದಾದರೆ, ಇದೊಂದು ಉತ್ತರ ಪ್ರದೇಶದ ವಾರಣಾಸಿಯ GI-ಟ್ಯಾಗ್ ಮಾಡಲಾದ ಕಲಾ ಪ್ರಕಾರವಾಗಿದೆ. ಈ ಕಲೆಯನ್ನು ಮೊಘಲರು ಭಾರತಕ್ಕೆ ಪರಿಚಯಿಸಿದರು ಎಂದು ಹೇಳಲಾಗುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Thu, 18 January 24