Trending : ಅಣ್ಣ ತಮ್ಮ ಅಕ್ಕ ತಂಗಿಯೊಂದಿಗೆ ಚಿಕ್ಕಂದಿನಲ್ಲಿ ತಿಂಡಿಯನ್ನು ಹಂಚಿಕೊಂಡು ತಿನ್ನುವುದಕ್ಕಿಂತ ಕಿಡಿಗೇಡಿತನದಿಂದ ಕದ್ದು ತಿನ್ನುವುದೇ ಹೆಚ್ಚು ರುಚಿ ಎನ್ನಿಸಿರುತ್ತದೆ ಅಲ್ಲವೆ? ಅದೊಂದು ಆಟ. ಸಣ್ಣಪುಟ್ಟ ಆಸೆ, ಖುಷಿ. ಆದರೆ ನಾವು ಪ್ರಾಣಿವರ್ಗದ ಮೂಲದಿಂದಲೇ ಬಂದಿರುವುದು ಎನ್ನುವುದನ್ನು ಮರೆಯಬಾರದು. ಆಟ, ತಂತ್ರ ಎನ್ನುವುದು ಮನುಷ್ಯನಿಂದಲೇ ಸೃಷ್ಟಿಯಾಗಿದ್ದಲ್ಲ. ಪ್ರಕೃತಿಯಲ್ಲಿಯೇ, ಪ್ರಾಣಿ ಮತ್ತು ಜೀವಿಗಳಲ್ಲಿ ಮೂಲದಲ್ಲಿಯೇ ಇರುವಂಥದ್ದು. ಹಾಗಾಗಿ ತಂತ್ರ ಎನ್ನುವುದು ಪ್ರತೀ ಜೀವಿಯ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಿರುವಂಥದ್ದು. ಆಯಾ ವಯಸ್ಸಿನ ನಿರೀಕ್ಷೆಗೆ ತಕ್ಕಂತೆ ಇದು ಒಳಗೊಳ್ಳುತ್ತಾ ಹೋಗುತ್ತದೆ. ಮನುಷ್ಯ ಬುದ್ಧಿಯುಳ್ಳ ಜೀವಿಯಾಗಿದ್ದರಿಂದ ಇದಕ್ಕೆ ನಾನಾ ಅರ್ಥಗಳು ಹೊಮ್ಮುತ್ತವೆ ಎನ್ನುವುದು ಬೇರೆ ಮಾತು. ಈಗ ಈ ವಿಡಿಯೋವನ್ನೇ ಗಮನಿಸಿ. ಅಣ್ಣಗೋರಿಲ್ಲಾ ತನ್ನ ಪಾಡಿಗೆ ತಾನು ಮಲಗಿದೆ. ತಮ್ಮಗೋರಿಲ್ಲಾಗೆ ಅದು ತಂದಿಟ್ಟುಕೊಂಡಿರುವ ತಿಂಡಿಯ ಮೇಲೆ ಕಣ್ಣುಬಿದ್ದಿದೆ. ಅದನ್ನು ಕೇಳಿದರೆ ಅಣ್ಣ ಕೊಡಬಹುದಾ? ಗೊತ್ತಿಲ್ಲ. ಆದರೆ ತನಗದು ಬೇಕು. ತಮ್ಮಗೋರಿಲ್ಲಾ ಈ ಸಮಯವನ್ನೇ ಸಾಧಿಸಿಕೊಂಡು ತಿಂಡಿಯನ್ನು ಕದಿಯಲು ಪ್ರಯತ್ನಿಸುತ್ತಿದೆ.
3.97 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ ಈ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೆಯಾಗಿದೆ. ಗೋರಿಲ್ಲಾಗಳು ಮತ್ತು ಮನುಷ್ಯರ ನಡೆವಳಿಕೆಗಳ ಮಧ್ಯೆ ಅಂಥಾ ವ್ಯತ್ಯಾಸವೇನಿಲ್ಲ ಎನ್ನುವುದನ್ನು ಇಲ್ಲಿ ಕಾಣಬಹುದು. 7,600 ಹೆಚ್ಚೂ ಲೈಕ್ಗಳನ್ನು ಇದು ಪಡೆದುಕೊಂಡಿದೆ.
ಈ ವಿಡಿಯೋದಲ್ಲಿ ಒಬ್ಬರು, ‘ಇವರು ನಮ್ಮಂತೆಯೇ ಇದ್ದಾರೆ’ ಎಂದಿದ್ಧಾರೆ.
ಪಾಪ, ಮನುಷ್ಯನ ಸ್ವಭಾವ ಎಲ್ಲವೂ ತಾನೇ ತನ್ನಿಂದಲೇ ತನಗಾಗಿಯೇ ಎಂದುಕೊಳ್ಳುವುದು!
Published On - 10:11 am, Thu, 4 August 22