Trending : ಅಪಾರ್ಟ್ಮೆಂಟ್ ಬೆಡ್ರೂಮ್ನಲ್ಲಿ ಸಿಸಿ ಕ್ಯಾಮೆರಾ ಪತ್ತೆ
CC Camera : ಕೆನಡಾದ Airbnb ಗೆಸ್ಟ್ ಅಪಾರ್ಟ್ಮೆಂಟ್ನ ಬೆಡ್ರೂಮಿನಲ್ಲಿ ಸಿಸಿ ಕ್ಯಾಮೆರಾ ಪತ್ತೆಹಚ್ಚಿದ ಅತಿಥಿಯೊಬ್ಬರು, ತಮ್ಮ ಖಾಸಗಿ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ ಎಂದು ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ.
Trending : ಕೆನಡಾದ ಬ್ರಾಂಪ್ಟನ್ನಲ್ಲಿರುವ Airbnb- ಕಾಟೇಜ್, ಅಪಾರ್ಟ್ಮೆಂಟ್, ಹಾಸ್ಟೆಲ್, ಹೋಟೆಲ್ ರೂಮುಗಳನ್ನು ಬಾಡಿಗೆ ಆಧಾರದ ಮೇಲೆ ಆತಿಥ್ಯ ಕಲ್ಪಿಸಿಕೊಡುವ ವ್ಯಾಪಾರೀ ಸಂಸ್ಥೆ. ಇದು ಆರಂಭಗೊಂಡಿದ್ದು 2008ರಲ್ಲಿ. ಕಡಿಮೆ ಬೆಲೆಯಲ್ಲಿ ಅಲ್ಪಕಾಲಿಕ ವಸತಿಗಾಗಿ ಹೋಟೆಲ್ ರೂಮು ಪಡೆಯಲು ಜನರು ಹುಡುಕಾಡಲು ತೊಡಗಿದಾಗ ಈ ಕಂಪೆನಿಯು ದಿಢೀರನೇ ಜನಪ್ರಿಯತೆ ಗಳಿಸಿತು. ಒಂದು ವರದಿಯ ಪ್ರಕಾರ ಪ್ರಪಂಚದಾದ್ಯಂತ, Airbnb ಸಂಸ್ಥೆಯಡಿ ಈಗ ಸುಮಾರು 2.9 ಮಿಲಿಯನ್ ಅತಿಥಿಗೃಹಗಳಿವೆ. ಪ್ರತೀ ತಿಂಗಳು 14,000 ಅತಿಥಿಗೃಹಗಳು ಹೊಸದಾಗಿ ಸೇರ್ಪಡೆಯಾಗುತ್ತವೆ. 2022ರಲ್ಲಿ 220 ದೇಶ ಮತ್ತು ಪ್ರದೇಶಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸುವ ನಿರೀಕ್ಷೆಯನ್ನು ಈ ಸಂಸ್ಥೆಯು ಹೊಂದಿದೆ. ಇಂಥ ದೊಡ್ಡಮಟ್ಟದಲ್ಲಿ ತನ್ನ ವ್ಯಾಪಾರಜಾಲವನ್ನು ವಿಸ್ತರಿಸಿಕೊಂಡಿರುವುದು ಅಚ್ಚರಿಯೇ ಸರಿ. ಅಲ್ಲದೆ ಸಂಸ್ಥೆಯ ವಸತಿಗೃಹಗಳು, ಹೋಮ್ಸ್ಟೇಗಳು ವಿವಾದಮುಕ್ತ ಪರಿಸರದಿಂದ ಕೂಡಿವೆ ಎಂಬ ನಿರೀಕ್ಷೆಯು ಈಗ ಹುಸಿಗೊಂಡಿದೆ. ಕಾರಣ, ಗೆಸ್ಟ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಕುಟುಂಬವೊಂದು ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದೆ. ಬೆಡ್ರೂಮ್ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಇದರಿಂದ ತಮ್ಮ ಖಾಸಗಿ ಹಕ್ಕಿಗೆ ಧಕ್ಕೆ ಉಂಟಾಗಿದೆ ಎಂದು ಈ ಕುಟುಂಬ ಸಾಕ್ಷಿ ಸಮೇತ ಹೇಳಿಕೆ ನೀಡಿದೆ.
ತನ್ನ ಮೂವರು ಸೋದರಸಂಬಂಧಿಗಳೊಂದಿಗೆ Airbnb ಅಪಾರ್ಟ್ಮೆಂಟ್ನಲ್ಲಿ ತಂಗಿದ್ದ ಜಸ್ ಗ್ರೆವಾಲ್ ಈ ಆಘಾತಕಾರಿ ವಿಷಯವನ್ನು ಹೊರಗೆಡವಿದ್ದಾರೆ. ಗ್ರೆವಾಲ್ ಸಿಟಿನ್ಯೂಸ್ ನೋಡಲೆಂದು HDMI ಕೇಬಲ್‌ಗಾಗಿ ಹುಡುಕುತ್ತಿರುವಾಗ ಬೀಗ ಹಾಕಿದ ಕ್ಯಾಬಿನೆಟ್‌ನಲ್ಲಿ ಸಿಸಿ ಕ್ಯಾಮೆರಾದ ಲೆನ್ಸ್ ಕಂಡಿದೆ. ‘ಇನ್ನಷ್ಟು ಹತ್ತಿರದಿಂದ ನೋಡಲು ಹೋದಾಗ ಸಿಸಿ ಕ್ಯಾಮೆರಾ ಇದ್ದ ಕ್ಯಾಬಿನೆಟ್ ಅನ್ನು ಲಾಕ್ ಮಾಡಿರುವುದು ತಿಳಿಯಿತು. ಅಂತೂ ಸಿಸಿ ಕ್ಯಾಮೆರಾ ಇದೆ ಎನ್ನುವುದು ದೃಢವಾಯಿತು. ಅದು ಹಾಸಿಗೆಗೆ ಅಭಿಮುಖವಾಗಿಯೇ ಇತ್ತು’ ಎಂದು ಜಾಸ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಘಟನೆಯ ನಂತರ Airbnb, ಅತಿಥಿಗಳ ಖಾಸಗಿ ಹಕ್ಕನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪ್ರತ್ಯುತ್ತರ ನೀಡಿದೆ. ಅಲ್ಲದೆ, ಸಂಸ್ಥೆಯು ಗ್ರೆವಾಲ್ ಸೋದರ ಸಂಬಂಧಿಗಳಿಗೆ ಸಂಪೂರ್ಣ ಹಣವನ್ನು ಮರುಪಾವತಿ ಮಾಡಿದೆ.