Viral: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

ಬೆಂಗಳೂರಿನ ಆಟೋ ಚಾಲಕನೊಬ್ಬ 150ರೂ. ಡಿಜಿಟಲ್ ಪಾವತಿ ಬದಲಿಗೆ ತಪ್ಪಾಗಿ ವರ್ಗಾವಣೆಯಾದ 15,682ರೂ. ಹಣವನ್ನು ಪ್ರಾಮಾಣಿಕವಾಗಿ ಪ್ರಯಾಣಿಕನಿಗೆ ಮರಳಿಸಿದ್ದಾನೆ. ಈ ಮಾನವೀಯ ಕಥೆ ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ಅಪ್ಪಟ ಪ್ರಾಮಾಣಿಕತೆಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತನ್ನದಲ್ಲದ ಹಣ ತನಗೆ ಬೇಡ ಎಂಬ ಚಾಲಕನ ಈ ನಿರ್ಧಾರ ಸಾಕಷ್ಟು ಜನರಿಗೆ ಮಾದರಿಯಾಗಿದೆ.

Viral: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ
ಆಟೋ ಚಾಲಕನ ಪ್ರಮಾಣಿಕತೆ
Image Credit source: Pinterest

Updated on: Jun 06, 2026 | 10:56 AM

ಬೆಂಗಳೂರು: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎಂಬುದೇ ಇಲ್ಲ ಎಂಬ ಮಾತುಗಳ ನಡುವೆ, ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಅಪ್ಪಟ ಪ್ರಾಮಾಣಿಕತೆಯಿಂದ ಇಡೀ ಇಂಟರ್ನೆಟ್ ಜಗತ್ತಿನ ಮನ ಗೆದ್ದಿದ್ದಾನೆ. ಆಟೋ ಬಾಡಿಗೆಯಾಗಿ ಕೇವಲ 150 ರೂಪಾಯಿ ಡಿಜಿಟಲ್ ಪಾವತಿ ಮಾಡಬೇಕಿದ್ದ ಪ್ರಯಾಣಿಕನೊಬ್ಬ, ಆತುರದಲ್ಲಿ ಆಕಸ್ಮಿಕವಾಗಿ ಬರೋಬ್ಬರಿ 15,682 ರೂಪಾಯಿಗಳನ್ನು ಚಾಲಕನ ಖಾತೆಗೆ ವರ್ಗಾಯಿಸಿ ಆತಂಕಕ್ಕೊಳಗಾಗಿದ್ದನು. ಆದರೆ, ಪ್ರಯಾಣಿಕನ ತಪ್ಪು ಅರಿವಾದ ತಕ್ಷಣವೇ ಯಾವುದೇ ಹಿಂಜರಿಕೆಯಿಲ್ಲದೆ ಇಡೀ ಮೊತ್ತವನ್ನು ಪ್ರಾಮಾಣಿಕವಾಗಿ ಮರಳಿ ನೀಡುವ ಮೂಲಕ ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ. ತನಗಲ್ಲದ ಹಣ ಬೇಡ ಎಂಬ ಚಾಲಕನ ಈ ಉದಾತ್ತ ಗುಣದ ಕುರಿತು ಪ್ರಯಾಣಿಕ ಲಿಂಕ್ಡ್‌ಇನ್ (LinkedIn) ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಹೃದಯಸ್ಪರ್ಶಿ ಕಥೆ ನೆಟ್ಟಿಗರ ಅಪಾರ ಪ್ರಶಂಸೆಗೆ ಪಾತ್ರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಸಲಿಗೆ ನಡೆದಿದ್ದೇನು?

ಸಾಮಾನ್ಯ ದಿನದಂತೆ ಪ್ರಯಾಣಿಕನೊಬ್ಬ ಆಟೋದಲ್ಲಿ ಪ್ರಯಾಣಿಸಿದ್ದನು. ಪ್ರಯಾಣ ಮುಗಿದ ಬಳಿಕ ಆಟೋ ಬಾಡಿಗೆಯನ್ನು ಆನ್‌ಲೈನ್ (Digital Payment) ಮೂಲಕ ಪಾವತಿಸುವಾಗ, ಆ ಪ್ರಯಾಣಿಕನಿಂದ ದೊಡ್ಡದೊಂದು ಎಡವಟ್ಟಾಗಿದೆ. ಚಾಲಕನಿಗೆ ಕಳುಹಿಸಬೇಕಾದ ಸಣ್ಣ ಮೊತ್ತ ಅಂದರೆ 156ರೂ. ಬದಲಿಗೆ, ಆಕಸ್ಮಿಕವಾಗಿ ಬರೋಬ್ಬರಿ 15,682ರೂ. ಹಣವನ್ನು ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ.

ಟ್ರಾನ್ಸಾಕ್ಷನ್ ಪೂರ್ಣಗೊಂಡ ಮೇಲೆಯೇ ಪ್ರಯಾಣಿಕನಿಗೆ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ. ಅಪರಿಚಿತ ಆಟೋ ಚಾಲಕನಿಂದ ಇಷ್ಟು ದೊಡ್ಡ ಮೊತ್ತದ ಹಣ ಮರಳಿ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಆತ ಚಾಲಕನನ್ನು ಸಂಪರ್ಕಿಸಲು ಯತ್ನಿಸಿದ್ದಾನೆ.

ತಕ್ಷಣ ಹಣ ಮರಳಿಸಿದ ಚಾಲಕ:

ಆದರೆ, ಪ್ರಯಾಣಿಕನ ಆತಂಕ ಕ್ಷಣಾರ್ಧದಲ್ಲಿ ದೂರಾಗಿದೆ. ಪ್ರಯಾಣಿಕ ಸಂಪರ್ಕಿಸಿದ ತಕ್ಷಣವೇ ಸ್ಪಂದಿಸಿದ ಆಟೋ ಚಾಲಕ, ತನ್ನ ಖಾತೆಗೆ ಹೆಚ್ಚುವರಿ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾನಲ್ಲದೆ, ಅಲ್ಲದೇ ಸಂಪೂರ್ಣ ಮೊತ್ತವನ್ನು ತಕ್ಷಣವೇ ಪ್ರಯಾಣಿಕನಿಗೆ ಮರಳಿ ವರ್ಗಾಯಿಸಿದ್ದಾನೆ. ತನಗಲ್ಲದ ಹಣ ತನಗೆ ಬೇಡ ಎಂಬ ಚಾಲಕನ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ:

ತಮಗೆ ಎದುರಾದ ಈ ಅಪರೂಪದ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. “ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತವೆ” ಎಂದು ಸಾವಿರಾರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವಿವಾದಾತ್ಮಕ ಸುದ್ದಿಗಳೇ ಸದ್ದು ಮಾಡುತ್ತಿರುವಾಗ, ಈ ಆಟೋ ಚಾಲಕನ ಸರಳ ನಡೆ ಎಲ್ಲರಿಗೂ ಮಾದರಿಯಾಗಿದೆ. ಈತನ ಪ್ರಾಮಾಣಿಕತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sat, 6 June 26

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us