Bengaluru: ಉದ್ಯಮಿ ಮೇಲೆ ಕ್ಯಾಬ್​​ ಚಾಲಕನ ದೌರ್ಜನ್ಯ; ಎಸಿ ಹಾಕು ಎಂದಿದ್ದಕ್ಕೆ ಕಿರಿಕ್​​

ಬೆಂಗಳೂರಿನಲ್ಲಿ ಆ್ಯಪ್‌ ಆಧಾರಿತ ಕ್ಯಾಬ್ ಸೇವೆಗಳಲ್ಲಿ ಚಾಲಕರ ಕಿರುಕುಳ ಮತ್ತೆ ವರದಿಯಾಗಿದೆ. ಉದ್ಯಮಿಯೋರ್ವರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಕ್ಯಾಬ್ ಚಾಲಕ ಎಸಿ ಆನ್ ಮಾಡಲು ನಿರಾಕರಿಸಿ, ಆ್ಯಪ್ ದರದ ಬದಲು ಹೆಚ್ಚು ಹಣಕ್ಕೆ ಒತ್ತಾಯಿಸಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ದೂರಿದ್ದು, ಇದು ಬೆಂಗಳೂರು ಕ್ಯಾಬ್ ಸೇವೆಗಳ ಸುರಕ್ಷತೆ ಮತ್ತು ಜವಾಬ್ದಾರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Bengaluru: ಉದ್ಯಮಿ ಮೇಲೆ ಕ್ಯಾಬ್​​ ಚಾಲಕನ ದೌರ್ಜನ್ಯ; ಎಸಿ ಹಾಕು ಎಂದಿದ್ದಕ್ಕೆ ಕಿರಿಕ್​​
ಸಾಂದರ್ಭಿಕ ಚಿತ್ರ
Image Credit source: Google

Updated on: Feb 16, 2026 | 7:49 PM

ಬೆಂಗಳೂರು, ಫೆಬ್ರವರಿ 16: ಆ್ಯಪ್​​ ಬುಕಿಂಗ್​​ ಆಧಾರಿತ ಟ್ಯಾಕ್ಸಿ, ಆಟೋ ಸೇವೆಗಳ ವೇಳೆ ಹೆಚ್ಚಿನ ಹಣಕ್ಕೆ ಚಾಲಕರು ಪ್ರಯಾಣಿಕರನ್ನು ಪೀಡಿಸುವ ಘಟನೆಗಳು ಬೆಂಗಳೂರಲ್ಲಿ ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ಸ್ಟಾರ್ಟ್‌ಅಪ್ ಒಂದರ ಸಂಸ್ಥಾಪಕ ಹಾಗೂ ಸಿಇಒ ಧನಂಜಯ್ ಯಾದವ್ ಎಂಬವರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಕ್ಯಾಬ್ ಪ್ರಯಾಣದಲ್ಲಿ ತಾವು ಸಂಭವಿಸಿದ ಆತಂಕಕಾರಿ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಯಾಣದ ವೇಳೆ ತಾನು ಬಂಧಿ ಎಂಬ ಭಾವನೆ ತನಗೆ ಮೂಡಿದ್ದು, ದೆಹಲಿಯಲ್ಲಿಯ AI ಇಂಪ್ಯಾಕ್ಟ್ ಸಮಿಟ್‌ಗೆಂದು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿರೋದಾಗಿ ಅವರು ಆರೋಪಿಸಿದ್ದಾರೆ.

ಹೆಚ್ಚಿನ ಹಣಕ್ಕೆ ಡಿಮ್ಯಾಂಡ್​​

ಅವರು ನೀಡಿರುವ ಮಾಹಿತಿ ಪ್ರಕಾರ ಏರ್​ಪೋರ್ಟ್​​ಗೆ ತೆರಲಲು ನಮ್ಮ ಯಾತ್ರಿ ಆ್ಯಪ್ ಮೂಲಕ ಎಸಿ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಪ್ರಯಾಣದ ವೇಳೆ ಚಾಲಕ ಎಸಿ ಆನ್ ಮಾಡಲು ನಿರಾಕರಿಸಿದ್ದು, ಇದು ನಾನ್-ಎಸಿ ಬುಕ್ಕಿಂಗ್ ಎಂದು ತಿಳಿಸಿದ್ದಾನೆ. ಆಪ್‌ನಲ್ಲಿ ಎಸಿ ರೈಡ್ ಎಂದು ಸ್ಪಷ್ಟವಾಗಿ ತೋರಿಸುತ್ತಿದೆ ಎಂದರೂ ಆತ ಅದನ್ನು ಅಲ್ಲಗಳೆದಿದ್ದಾನೆ. ಜೊತೆಗೆ ಆ್ಯಪ್​​ ತೋರಿಸುತ್ತಿದ್ದ 844 ರೂಪಾಯಿಗಿಂತಲೂ ಅಧಿಕ ಹಣ ನೀಡುವಂತೆ ಪೀಡಿಸಿದ್ದಾನೆ. ಇದು ಮೀಟರ್​​ ಟ್ಯಾಕ್ಸಿ ಆಗಿರುವ ಕಾರಣ, ಪ್ರತಿ ಕಿಲೋಮೀಟರಿಗೆ 24 ರೂ. ಶುಲ್ಕವಿದೆ ಎಂದು ತಿಳಿಸಿದ್ದಾನೆ. ಈ ವೇಳೆ ಯಾದವ್ ಅವರು ಆ್ಯಪ್‌ನಲ್ಲಿ ತೋರಿಸಿದ ಮೊತ್ತವನ್ನೇ ಪಾವತಿಸುವುದಾಗಿ ಹೇಳಿದರೂ ಆತ ಒಪ್ಪಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ಹೀಗಾಗಿ ಮತ್ತೊಂದು ಕ್ಯಾಬ್ ಬುಕ್ ಮಾಡಲು ವಾಹನ ನಿಲ್ಲಿಸುವಂತೆ ಕೇಳಿದಾಗ, 844 ರೂಪಾಯಿ ಹಣ ಸಂಪೂರ್ಣ ಮೊತ್ತ ಪಾವತಿಸದೇ ನೀವು ಇಳಿಯುವಂತಿಲ್ಲ ಎಂದು ಆತ ಹೇಳಿದ್ದು, ಕೊನೆಗೆ ವಿಮಾನ ನಿಲ್ದಾಣ ತಲುಪಬೇಕಾದ ಕಾರಣ ಆತ ಹೇಳಿದ್ದಕ್ಕೆ ತಾನು ಒಪ್ಪಿಕೊಳ್ಳಲೇಬೇಕಾಯಿತು ಎಂದು ಯಾದವ್ ಆರೋಪಿಸಿದ್ದಾರೆ. ಈ ಅನುಭವದಿಂದ ತಮಗೆ ಅಸುರಕ್ಷಿತ ಭಾವನೆ ಉಂಟಾಯಿತು ಎಂದೂ ಅವರು ತಿಳಿಸಿದ್ದಾರೆ. ಘಟನೆ ಬಗ್ಗೆ ದೂರು ದಾಖಲಿಸಿರುವ ಅವರು, ಚಾಲಕರ ಇಂತಹ ವರ್ತನೆ ವಿರುದ್ಧ ಅಧಿಕಾರಿಗಳು ಹಾಗೂ ಕ್ಯಾಬ್ ಸೇವಾ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳ ಸುರಕ್ಷತೆ ಹಾಗೂ ಜವಾಬ್ದಾರಿತನದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us