Viral Video : ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ ಬುಲ್ಡೋಝರ್

Madhyapradesh : ಅರ್ಧಗಂಟೆಯಾದರೂ ಆ್ಯಂಬುಲೆನ್ಸ್ ಬಂದಿಲ್ಲ. ಆಟೋದವರೂ ನಿಲ್ಲಿಸುತ್ತಿಲ್ಲ. ವ್ಯಕ್ತಿಯ ಜೀವ ಉಳಿಸುವುದು ಹೇಗೆ? ಆಪದ್ಭಾಂಧವನಂತೆ ಸಹಾಯ ಮಾಡಿದೆ ಈ ಬುಲ್ಡೋಝರ್! ಎಲ್ಲಿದ್ದೀರಿ ಮಧ್ಯಪ್ರದೇಶದ ಆರೋಗ್ಯ ಸಚಿವರೇ?

Viral Video : ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ ಬುಲ್ಡೋಝರ್
ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಬುಲ್ಡೋಝರಿನಲ್ಲಿ ಸಾಗಿಸುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 14, 2022 | 12:01 PM

Viral Video : ತುರ್ತು ಚಿಕಿತ್ಸೆ ಎಂದಾಗ ಆ್ಯಂಬುಲೆನ್ಸ್​ ಕಣ್ಣಮುಂದೆ ಬರುವುದು ಸಹಜ. ಆದರೆ ಅದನ್ನು ಹೊರತುಪಡಿಸಿ ಬುಲ್ಡೋಝರ್ ನಿಮ್ಮ ಮನಸ್ಸಿನಲ್ಲಿ ಬಂದಿರಲು ಸಾಧ್ಯವೆ? ವಾಸ್ತವದಲ್ಲಿ ಅದು ಸಾಧ್ಯ ಎಂಬಂಥ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಬುಲ್ಡೋಝರ್ ಎಂದಾಗ ಕಟ್ಟಡಗಳನ್ನು ಉರುಳಿಸುವ ರಕ್ಕಸ! ಎಂಬ ಚಿತ್ರಣ ನಮ್ಮ ಕಣ್​ಮುಂದೆ ಬರುತ್ತದೆ. ಆದರೆ ಈ ಘಟನೆಯಲ್ಲಿ ವ್ಯಕ್ತಿಯ ಜೀವ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಈ ಬುಲ್ಡೋಝರ್​. ಬರ್ಹಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಖಿತೌಲಿ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ  ಬೈಕ್​ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಸೋಮವಾರದಂದು ಈ ದುರ್ಘಟನೆ ನಡೆದಿದೆ. ಅಪಘಾತದ ನಂತರ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ ಅರ್ಧಗಂಟೆಯಾದರೂ ಆ್ಯಂಬುಲೆನ್ಸ್​ನ ಸುಳಿವಿಲ್ಲ. ಕೊನೆಗೆ ಆಟೋ ರಿಕ್ಷಾದವರೂ ನಿಲ್ಲಿಸಿಲ್ಲ. ಗಾಯಾಳುವಿನ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸ್ಥಳೀಯರು ಬುಲ್​ಡೋಝರ್​ನಲ್ಲಿ ಕರೆದೊಯ್ಯಲು ಆಲೋಚಿಸಿದ್ದಾರೆ.

ಮಂಗಳವಾರದಂದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಗಾಯಾಳುವನ್ನು ಗೈರ್ತಲೈ ಗ್ರಾಮದ ಮಹೇಶ ಬರ್ಮನ್ (35) ಎಂದು ಗುರುತಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದರೂ ಯಾವುದೇ ಆಟೋ ಚಾಲಕರೂ ಈತನ ಸಹಾಯಕ್ಕೆ ಬಾರದೇ ಇದ್ದದ್ದು ಎಂಥ ಅಮಾನವೀಯ.

ಪುಷ್ಪೇಂದ್ರ ವಿಶ್ವಕರ್ಮ ಎನ್ನುವವರ ಆಟೋಮೊಬೈಲ್​ ಅಂಗಡಿಯ ಬಳಿ ನಿನ್ನೆ ಈ ಅಪಘಾತ ಸಂಭವಿಸಿದ್ದು.  ಯಾರೂ ಸಹಾಯಕ್ಕೆ ಒದಗದ ಕಾರಣ, ತಮ್ಮ ಬುಲ್ಡೋಝರ್​ ಮೂಲಕವೇ ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಉಪಾಯವನ್ನು ಅವರು ಅನಿವಾರ್ಯವಾಗಿ ಮಾಡಬೇಕಾಯಿತು. ಪುಷ್ಪೇಂದ್ರ ಅವರ ಸ್ನೇಹಿತ ರಫೀಕ್ ಜೆಸಿಬಿಯ ಲೋಡಿಂಗ್​ ಬಕೆಟ್​ನಲ್ಲಿ ಅಪಘಾತಕ್ಕೊಳಗಾದ ಮಹೇಶನನ್ನು ಮಲಗಿಸಿಕೊಂಡು ಬರ್ಹಿ ಸಮುದಾಯ ಆರೋಗ್ಯ ಕೇಂದ್ರ ಕರೆದೊಯ್ದರು. ಕಾಲಿನ ಮೂಳೆ ಮುರಿದಿದ್ದರಿಂದ ಮಹೇಶನನ್ನು ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಪ್ರದೇಶದ ಆರೋಗ್ಯ ಸಚಿವರೇ ನಿದ್ರೆಯಿಂದ ಎಚ್ಚೆತ್ತುಕೊಳ್ಳಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:52 am, Wed, 14 September 22