Viral Video : ‘ಈ ಲ್ಯಾಪ್ಟಾಪ್ನಲ್ಲಿ ಬಹಳ ಜಂಕ್ ಇದೆ’ ಎಂದು ತನ್ನ ತಂದೆ ಹೇಳುತ್ತಿದ್ದದ್ದು ಎರಡು ವರ್ಷದ ಈ ಹೆಣ್ಣುಮಗುವಿನ ಕಿವಿಗೆ ಬಿದ್ದಿದೆ. ನಂತರ ಬಾತ್ರೂಮಿನಲ್ಲಿ ಏನೋ ಸದ್ದಾಗುತ್ತಿದೆಯಲ್ಲ ಎಂದು ಮಗುವಿನ ತಾಯಿ ನೋಡಿದ್ದಾಳೆ. ಸೋಪುನೀರು ತುಂಬಿದ ಬಕೆಟ್ನಲ್ಲಿ ಅಪ್ಪನ ಮ್ಯಾಕ್ಬುಕ್ ಅನ್ನು ಮುಳುಗಿಸಿ ಸ್ವಚ್ಛಗೊಳಿಸುವುದರಲ್ಲಿ ಮಗಳು ತಲ್ಲೀನಳಾಗಿದ್ದನ್ನು ನೋಡಿದ ತಾಯಿ ‘ಪಾವನ’ಳಾಗಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಇದನ್ನು ವರದಿ ಮಾಡಿದೆ. ಮಗಳ ಈ ಘನಕಾರ್ಯವನ್ನು ನೋಡಿದ ತಾಯಿ ಕೋಪದಿಂದ ಕುದ್ದು ಹೋಗಿದ್ದಾಳೆ. ಯಾರಿಗೂ ಸಹಜ ಅಲ್ಲವೆ? ಬೆಳಗಿನ ತಿಂಡಿ ಸಮಯದಲ್ಲಿ ಈ ಮಗುವಿನ ಅಪ್ಪ, ಲ್ಯಾಪ್ಟಾಪಿನಲ್ಲಿ ಬಹಳ ಜಂಕ್ ತುಂಬಿದೆ ಎಂದು ಮಗುವಿನ ತಾಯಿಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡಿದ್ದೆ ಇಷ್ಟೆಲ್ಲ ಆವಾಂತರಕ್ಕೆ ಕಾರಣ. ಅಪ್ಪನ ಲ್ಯಾಪ್ಟಾಪ್ ಸ್ವಚ್ಛಗೊಳಿಸಿ ಅಪ್ಪನಿಗೆ ಸಹಾಯ ಮಾಡಬಹುದಲ್ಲ ಎಂದು ಮಗು ಸಹಾನುಭೂತಿಯಿಂದ ಆಲೋಚಿಸಿದೆ. ಆ ಪ್ರಕಾರ ಬಾತ್ರೂಮಿಗೆ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಿ ಸೋಪಿನ ನೀರು ತುಂಬಿದ ಬಕೆಟ್ನಲ್ಲಿ ಅದ್ದಿ ಅದ್ದಿ ಪೂರ್ತಿ ಸ್ವಚ್ಛಗೊಳಿಸಿದೆ ಈ ಮಗು.
ನೆಟ್ಟಿಗರನೇಕರು ಈ ವಿಡಿಯೋ ನೋಡಿ ಹೌಹಾರಿದ್ದಾರೆ. ತಮ್ಮ ಮನೆಯ ಲ್ಯಾಪ್ಟಾಪ್ಗಳಿಗೂ ನಾಳೆ ಮಕ್ಕಳು ಇದೇ ಗತಿ ಕಾಣಿಸಿದರೆ ಎಂದು ಊಹಿಸಿಕೊಂಡೇ ಮೆತ್ತಗಾಗುತ್ತಿದ್ದಾರೆ. ಹೇಗೆ ಮಾತನಾಡಿದರೂ ಈ ಕಾಲದಲ್ಲಿ ಕಷ್ಟವೇ ಈ ಮಕ್ಕಳ ವಿಷಯದಲ್ಲಿ.
ನೀವು ಇಂಥ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 3:50 pm, Thu, 27 October 22