AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡ ರೆಸ್ಟೋರೆಂಟ್​​ಗಳಲ್ಲಿ ತಿಂದು, ಮಿಕ್ಕ ಆಹಾರವನ್ನು ಅಲ್ಲೇ ಬಿಟ್ಟುಬರುತ್ತೀರಾ? ಈ ವಿಶೇಷ ವಿಡಿಯೋ ನೋಡಿ

ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ನಯನ ಪ್ರೇಮನಾಥ್ ಎಂಬುವವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ತಂದೆ ಮಿಕ್ಕ ಆಹಾರವನ್ನು ತಾವೇ ಕೊಂಡು ಹೋದ ಸ್ಟೀಲ್ ಡಬ್ಬಕ್ಕೆ ಹಾಕಿ ಮನೆಗೆ ಕೊಂಡೊಯ್ಯುವ ದೃಶ್ಯವಿದೆ. ಇದಕ್ಕೆ ಒಂದು ವಿಶೇಷ ಹಿನ್ನೆಲೆಯಿದೆ.

ದೊಡ್ಡ ರೆಸ್ಟೋರೆಂಟ್​​ಗಳಲ್ಲಿ ತಿಂದು, ಮಿಕ್ಕ ಆಹಾರವನ್ನು ಅಲ್ಲೇ ಬಿಟ್ಟುಬರುತ್ತೀರಾ? ಈ ವಿಶೇಷ ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Updated By: shivaprasad.hs|

Updated on: Mar 30, 2022 | 4:03 PM

Share

ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಈ ಘಟನೆ ಎದುರಾಗಿಯೇ ಇರುತ್ತದೆ. ನೀವೊಂದು ದೊಡ್ಡ ರೆಸ್ಟೋರೆಂಟ್​ಗೆ ಹೋಗುತ್ತೀರಿ ಎಂದಿಟ್ಟುಕೊಳ್ಳಿ. ಕುಟುಂಬದವರೋ ಅಥವಾ ಸ್ನೇಹಿತರೋ ಜತೆಗಿದ್ದಾರೆ. ಎಲ್ಲರೂ ಬೇಕಾದ್ದನ್ನು ಆರ್ಡರ್ ಮಾಡುತ್ತೀರಿ, ತಿನ್ನುತ್ತೀರಿ. ಆದರೆ ಸಾಮಾನ್ಯವಾಗಿ ದೊಡ್ಡ ಹೋಟೆಲ್​ಗಳಿಗೆ ಹೋದಾಗ ಆಹಾರ ಮಿಕ್ಕುತ್ತದೆ. ಆಗ ಎಲ್ಲರಿಗೂ ಎರಡು ಆಯ್ಕೆಗಳಿರುತ್ತವೆ. ಒಂದು ಆ ಆಹಾರವನ್ನು ಅಲ್ಲೇ ಬಿಟ್ಟು ಬರುವುದು. ಅಥವಾ ಅದನ್ನು ಪ್ಯಾಕ್ ಮಾಡಿಸಿ ಮನೆಗೆ ತರುವುದು. ಬಹಳಷ್ಟು ಜನರು ಆಹಾರವನ್ನು ಅಲ್ಲಿಯೇ ಬಿಟ್ಟುಬರುತ್ತಾರೆ. ಕೆಲವರು ಮಿಕ್ಕ ಆಹಾರವನ್ನು ಪ್ಯಾಕ್ ಮಾಡಿಸುತ್ತಾರೆ. ಆದರೆ ಸುಸ್ಥಿರ ಬೆಳವಣಿಗೆಯ ಅಂಶ ಗಮನದಲ್ಲಿಟ್ಟುಕೊಂಡರೆ ಆಹಾರವನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಪರಿಸರಕ್ಕೆ ಅನಗತ್ಯವಾದವುಗಳು.

ಇದನ್ನು ಹೇಗೆ ಸರಿಪಡಿಸಬಹುದು? ಮಿಕ್ಕ ಆಹಾರವನ್ನು ತಾವೇ ಕೊಂಡುಹೋದ ಡಬ್ಬಿಯಲ್ಲಿ ಹಾಕಿಕೊಂಡು ತಂದರೆ ಅದು ಉತ್ತಮ. ಆದರೆ ಬಹುತೇಕರು ಸ್ನೇಹಿತರು ಹಾಗೂ ಕುಟುಂಬದವರ ಎದುರು ಹಾಗೆ ತಾವೇ ಕೊಂಡುಹೋದ ಡಬ್ಬದಲ್ಲಿ ಹಾಕಿ ಮರಳಿ ತರಲು ಮುಜುಗರಪಟ್ಟುಕೊಳ್ಳುತ್ತಾರೆ. ಅಂಥವರಿಗೆ ಪಾಠವಾಗುವ ವಿಡಿಯೋವೊಂದು ಇಲ್ಲಿದೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನಯನ ಪ್ರೇಮನಾಥ್ ಎಂಬುವವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ತಂದೆ ಮಿಕ್ಕ ಆಹಾರವನ್ನು ತಾವೇ ಕೊಂಡು ಹೋದ ಸ್ಟೀಲ್ ಡಬ್ಬಕ್ಕೆ ಹಾಕಿ ಮನೆಗೆ ಕೊಂಡೊಯ್ಯುವ ದೃಶ್ಯವಿದೆ. ಈ ಸಂದರ್ಭದಲ್ಲಿ ಅವರು ಯಾವ ಮುಜುಗರವನ್ನೂ ಪಟ್ಟುಕೊಳ್ಳದೆ ಸಹಜವೆಂಬಂತೆ ಕಾರ್ಯ ಮಾಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ವಿಡಿಯೋ ಹಂಚಿಕೊಂಡಿರುವ ನಯನಾ ಪ್ರೇಮನಾಥ್, ಅದಕ್ಕೆ ದೀರ್ಘ ಶೀರ್ಷಿಕೆಯನ್ನು ಬರೆದಿದ್ದಾರೆ. ಅದರಲ್ಲಿ ಅವರ ತಂದೆಯವರ ನಡವಳಿಕೆಯನ್ನು ಬದಲಾಯಿಸಲು ಬರೋಬ್ಬರಿ 3 ವರ್ಷ ಬೇಕಾಯಿತು ಎಂದು ಹೇಳಿದ್ದಾರೆ. ‘‘ಬಹುತೇಕರಿಗೆ ತಮ್ಮ ಸ್ನೇಹಿತರು ಅಥವಾ ಕುಟುಂಬದವರ ಎದುರು ಮಿಕ್ಕ ಆಹಾರವನ್ನು ಡಬ್ಬಕ್ಕೆ ತುಂಬಿಸಿಕೊಳ್ಳುವುದು ಮುಜುಗರದ ಸಂಗತಿ. ಆದರೆ ಈ ಉತ್ತಮ ಕೆಲಸಕ್ಕೆ ತಂದೆಯವರನ್ನು ತಯಾರು ಮಾಡಬೇಕಾದರೆ 3 ವರ್ಷ ಹಿಡಿಯಿತು. ಒಳ್ಳೆಯ ಕೆಲಸಕ್ಕೆ ಸಮಯ ಬೇಕು. ಆದರೆ ಅದು ಸಾಧ್ಯ’’ ಎಂದು ಬರೆದಿದ್ದಾರೆ ನಯನಾ.

‘‘ಈಗ ಯಾವುದೇ ರೆಸ್ಟೋರೆಂಟ್​ಗೆ ನಾನು ಹೋಗುವುದಿದ್ದರೂ ನನ್ನ ತಾಯಿಯೇ ಡಬ್ಬ ಕೊಂಡೊಯ್ಯುವಂತೆ ನೆನಪಿಸುತ್ತಾರೆ. ನನ್ನ ಪತಿ ಎಲ್ಲೆಡೆ ಹೋದರೂ ಬಾಟಲಿಯಲ್ಲಿರುವ ನೀರಿಗಿಂತ ಲೋಟದಲ್ಲಿ ನೀಡುವ ನೀರನ್ನು ಬಯಸುತ್ತಾರೆ. ನನ್ನ ಸಹೋದರಿ ಕೂಡ ಈ ಅಭ್ಯಾಸಗಳನ್ನು ರೂಡಿಸಿಕೊಂಡಿದ್ದಾರೆ’’ ಎಂದು ಬರೆದಿದ್ದಾರೆ ನಯನಾ.

ತಂದೆ ಉಳಿದ ಆಹಾರವನ್ನು ಡಬ್ಬಕ್ಕೆ ಹಾಕುವ ವಿಡಿಯೋ ಹಂಚಿಕೊಂಡಿರುವ ನಯನಾ, ಇದರಿಂದ ಅತ್ಯಂತ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕಾರಣ ನೀಡಿರುವ ಅವರು, ‘‘ತಂದೆಯವರು ಇದನ್ನು ಯಾವುದೇ ಮುಜುಗರವಿಲ್ಲದೇ ಮಾಡಿದ್ದು ಅತ್ಯಂತ ಸಂತೋಷ. ದೊಡ್ಡ ರೆಸ್ಟೋರೆಂಟ್ ಅದಾಗಿತ್ತು. ಜತೆಗೆ ಈ ನಡೆಯಿಂದ ಅವರು ಪ್ಲಾಸ್ಟಿಕ್​ಅನ್ನು ಮನೆಗೆ ಕೊಂಡೊಯ್ಯುವುದನ್ನು ತಡೆದಿದ್ದಾರೆ’’ ಎಂದು ನಯನಾ ಕ್ಯಾಪ್ಶನ್ ನೀಡಿದ್ದಾರೆ.

ನಯನಾ ಪ್ರೇಮನಾಥ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ಎಲ್ಲರಿಗೂ ಈ ಬಗ್ಗೆ ಸಲಹೆಯನ್ನೂ ನೀಡಿರುವ ಅವರು, ‘‘ನೀವು ಕೂಡ ಇಂಥದ್ದೇ ನಿರ್ಧಾರ ಕೈಗೊಳ್ಳಿ. ಮೊದಲಿಗೆ ಬೇರೆಯರು ನಿಮ್ಮನ್ನು ಅರ್ಥಮಾಡಿಕೊಳ್ಳದಿರಬಹುದು. ಆದರೆ ಕ್ರಮೇಣ ಅವರು ನಿಮ್ಮ ನಿರ್ಧಾರ ಬೆಂಬಲಿಸುತ್ತಾರೆ’’ ಎಂದಿದ್ದಾರೆ. ನೆಟ್ಟಿಗರು ಇದಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದು, ತಂದೆಯ ಕಾರ್ಯವನ್ನು ಹೊಗಳಿದ್ದಾರೆ. ಮತ್ತು ಎಲ್ಲರೂ ಯಾವುದೇ ಮುಜುಗರವಿಲ್ಲದೇ ಇಂತಹ ಒಳ್ಳೆಯ ನಿರ್ಧಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್​ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು

DA Hike: ಕೇಂದ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿ ಭತ್ಯೆ ಏರಿಕೆ