ಮ್ಯಾಟ್ರಿಮೋನಿಯಲ್ಲಿ ಅಪ್ಪ ಹುಡುಕಿದ ವರನಿಗೆ ಜಾಬ್ ಆಫರ್ ಕೊಟ್ಟ ಮಗಳು; ವಿಷಯ ತಿಳಿದು ತಂದೆ ಮಾಡಿದ್ದೇನು ಗೊತ್ತಾ?
ಇತ್ತೀಚೆಗೆ ವ್ಯಕ್ತಿಯೊಬ್ಬರು ತನ್ನ ಪುತ್ರಿಗೆ ಮದುವೆ ಮಾಡಲೆಂದು ಹುಡುಗನನ್ನು ಹುಡುಕುತ್ತಿದ್ದರು. ಒಂದೊಳ್ಳೆ ವರನಿಗಾಗಿ ಅವರ ಶೋಧ ಕಾರ್ಯ ನಡೆದಿತ್ತು. ಹೀಗೆ ಒಂದು ಬಾರಿ ಮ್ಯಾಟ್ರಿಮೋನಿ ವೆಬ್ಸೈಟ್ ಚೆಕ್ ಮಾಡುತ್ತಿದ್ದ ಅವರು ಹುಡುಗನೊಬ್ಬನ ಪ್ರೊಫೈಲ್ ನೋಡಿದರು.
ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಬೇಕಾದ ಸಂದರ್ಭ ಬಂದಾಗ ಪ್ರತಿ ತಂದೆ-ತಾಯಿಯೂ ಸಹಜವಾಗಿಯೇ ಆತಂಕದಲ್ಲಿರುತ್ತಾರೆ. ತಮ್ಮ ಮಗ/ಮಗಳಿಗೆ ಒಳ್ಳೆಯ ಸಂಗಾತಿ ಸಿಗಬೇಕು. ಅವರು ಮದುವೆಯಾಗಿ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಯಾವುದೇ ತೊಂದರೆಯಾಗದಿರಲಿ ಎಂದು ದೇವರ ಬಳಿ ಬೇಡಿಕೊಳ್ಳುತ್ತಾರೆ. ಎಲ್ಲೋ ಸಂಬಂಧ ಕೂಡಿಬಂತು ಎಂದಾದರೂ ಒಮ್ಮೆಲೆಯೇ ಒಪ್ಪಿಕೊಳ್ಳುವುದಿಲ್ಲ. ಅವರು ಹೇಗೆ, ಆ ಹುಡುಗ/ಹುಡುಗಿ ಹೇಗೆ? ಕುಟುಂಬ, ಮನೆ ಎಲ್ಲ ಚೆನ್ನಾಗಿದೆಯಾ ಎಂಬಿತ್ಯಾದಿ ಸಂಗತಿಗಳನ್ನು ಕೂಲಂಕಷವಾಗಿ ವಿಚಾರಿಸುತ್ತಾರೆ. ಒಟ್ಟಿನಲ್ಲಿ ಮಕ್ಕಳ ಮದುವೆ ವಿಚಾರದಲ್ಲಿ ಪಾಲಕರು ಫುಲ್ ಅಲರ್ಟ್ ಆಗಿಯೇ ಇರುತ್ತಾರೆ. ಇನ್ನು ಮಕ್ಕಳಿಗೆ ಒಳ್ಳೆಯ ಸಂಗಾತಿಯನ್ನು ಹುಡುಕುವಾಗಲೂ ಅಷ್ಟೇ ಸ್ನೇಹಿತರು- ಸಂಬಂಧಿಕರ ಮೂಲಕವೋ ಅಥವಾ ಅದಕ್ಕಾಗಿಯೇ ಇರುವ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕವೋ ಹುಡುಕುತ್ತಾರೆ. ನಾವು ಇಷ್ಟೆಲ್ಲ ಪೀಠಿಕೆ ಹಾಕಿದ್ಯಾಕೆ ಎಂದರೆ ವಿಚಿತ್ರವಾದ ಒಂದು ವಿಷಯವನ್ನು ನಿಮಗೆ ತಿಳಿಸಲು!
ಇತ್ತೀಚೆಗೆ ವ್ಯಕ್ತಿಯೊಬ್ಬರು ತನ್ನ ಪುತ್ರಿಗೆ ಮದುವೆ ಮಾಡಲೆಂದು ಹುಡುಗನನ್ನು ಹುಡುಕುತ್ತಿದ್ದರು. ಒಂದೊಳ್ಳೆ ವರನಿಗಾಗಿ ಅವರ ಶೋಧ ಕಾರ್ಯ ನಡೆದಿತ್ತು. ಹೀಗೆ ಒಂದು ಬಾರಿ ಮ್ಯಾಟ್ರಿಮೋನಿ ವೆಬ್ಸೈಟ್ ಚೆಕ್ ಮಾಡುತ್ತಿದ್ದ ಅವರು ಹುಡುಗನೊಬ್ಬನ ಪ್ರೊಫೈಲ್ ನೋಡಿದರು. ಆತನ ಫೋಟೋ, ತನ್ನ ಬಗ್ಗೆ ಆತ ಕೊಟ್ಟಿದ್ದ ವಿವರಣೆಯನ್ನೆಲ್ಲ ನೋಡಿ, ಇವನು ನನ್ನ ಮಗಳಿಗೆ ಸೂಕ್ತ ಆಗಬಹುದು ಎಂದು ಎಣಿಸಿ, ಆ ಪ್ರೊಫೈಲ್ನ್ನು ಮಗಳಿಗೆ ಕಳಿಸಿದರು. ಆದರೆ ಮಗಳು ಮಾಡಿದ್ದೇ ಬೇರೆ. ಆ ಹುಡುಗನಿಗೆ ಜಾಬ್ ಆಫರ್ ಕೊಟ್ಟಿದ್ದಾಳೆ. ಇಂಟರ್ವ್ಯೂ ಲಿಂಕ್ ಕಳಿಸಿ, ಕೂಡಲೇ ಸಂದರ್ಶನಕ್ಕೆ ಬನ್ನಿ ಎಂದು ಕರೆದಿದ್ದಾಳೆ.
ಯುವತಿಯ ಹೆಸರು ಉದಿತಾ ಪಾಲ್. ಬೆಂಗಳೂರು ಮೂಲದ ಫಿನ್ಟೆಕ್ ಕಂಪನಿಯೊಂದರ ಸಹ ಸಂಸ್ಥಾಪಕಿ. (ಫಿನ್ಟೆಕ್ ಅಂದರೆ ತಂತ್ರಜ್ಞಾನದ ಮೂಲಕ ಹಣಕಾಸು ಸೇವೆ ಒದಗಿಸುವುದು. ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣವರ್ಗಾವಣೆಯನ್ನು ಸುಗಮಗೊಳಿಸುವ ಕ್ಷೇತ್ರ). ಈಕೆ ತನ್ನ ಅಪ್ಪ ಕಳಿಸಿದ ವ್ಯಕ್ತಿಯ ಉದ್ಯೋಗ ಅನುಭವ ನೋಡಿ, ಆತನನ್ನು ತನ್ನ ಕಂಪನಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದ್ದಳು.
ತಾನು ಮಾಡಿದ ಕೆಲಸ ಗೊತ್ತಾದ ಮೇಲೆ ತನ್ನ ತಂದೆ ಏನು ಮಾಡಿದರು ಎಂಬುದನ್ನೂ ಉದಿತಾ ಹೇಳಿಕೊಂಡಿದ್ದಾರೆ. ಅಪ್ಪ ವಾಟ್ಸ್ಆ್ಯಪ್ನಲ್ಲಿ ಕಳಿಸಿದ ಮೆಸೇಜ್ಗಳ ಸ್ಕ್ರೀನ್ಶಾಟ್ನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗಳು ಮಾಡಿದ ಕೆಲಸ ತಿಳಿದ ಅಪ್ಪ, ಆತಂಕದಿಂದಲೇ ಮೆಸೇಜ್ ಮಾಡಿದ್ದಾರೆ. ‘ನಾನು ನಿನ್ನ ಬಳಿ ಮಾತನಾಡಬೇಕು-ಅರ್ಜೆಂಟ್’ ಎಂದು ಮೊದಲ ಸಂದೇಶ ಕಳಿಸಿರುವ ಅವರು, ಬಳಿಕ ಸಾಲುಸಾಲು ಮೆಸೇಜ್ ಮಾಡಿದ್ದಾರೆ. ‘ಮ್ಯಾಟ್ರಿಮೋನಿ ಸೈಟ್ನಿಂದ ನೀನು ಉದ್ಯೋಗಕ್ಕೆ ಜನರನ್ನು ಹುಡುಕುವಂತಿಲ್ಲ, ನಾನೀಗ ಆ ಹುಡುಗನ ತಂದೆಗೆ ಏನು ಉತ್ತರ ಕೊಡಲಿ. ನೀನು ಅವನಿಗೆ ಇಂಟರ್ವ್ಯೂ ಲಿಂಕ್ ಕೊಟ್ಟಿದ್ದು ನನಗೆ ಗೊತ್ತಾಯಿತು’ ಎಂಬ ಸಂದೇಶಗಳನ್ನು ಮಗಳಿಗೆ ಕಳಿಸಿದ್ದಾರೆ. ಅದಕ್ಕೆ ಉದಿತಾ, ನಾನೇನು ಮಾಡಲಿ? ಆ ವ್ಯಕ್ತಿಗೆ ಫಿನ್ಟೆಕ್ ವಿಭಾಗದಲ್ಲಿ ಏಳುವರ್ಷ ಅನುಭವ ಇದೆ. ಹಾಗಾಗಿ ನಾವು ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.
What getting disowned from father looks like. pic.twitter.com/nZLOslDUjq
— Udita Pal ? (@i_Udita) April 29, 2022
ಉದಿತಾರ ಈ ಟ್ವೀಟ್ ಸಿಕ್ಕಾಪಟೆ ವೈರಲ್ ಆಗುತ್ತಿದೆ. 8 ನೂರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ನೆಟ್ಟಿಗರಂತೂ ಇದು ಸಿಕ್ಕಾಪಟೆ ಫನ್ನಿ ಎಂದಿದ್ದಾರೆ. ಇದೆಲ್ಲದರ ಮಧ್ಯೆ ಅಪ್ಡೇಟ್ ನ್ಯೂಸ್ ಕೊಟ್ಟಿರುವ ಉದಿತಾ, ನಾವು ಆ ವ್ಯಕ್ತಿಗೆ ಉದ್ಯೋಗ ಆಫರ್ ಕೊಟ್ಟಿದ್ದೆವು. ಆದರೆ ಆತ ವರ್ಷಕ್ಕೆ 62 ಲಕ್ಷ ರೂ.ಪ್ಯಾಕೇಜ್ ಬೇಡಿಕೆಯಿಟ್ಟ. ನಮಗೆ ಅಷ್ಟು ಕೊಡಲು ಸಾಧ್ಯವೇ ಇಲ್ಲ. ಇದೆಲ್ಲದರ ಮಧ್ಯೆ ನನ್ನ ಅಪ್ಪ, ಮ್ಯಾಟ್ರಿಮೋನಿ ಸೈಟ್ನಲ್ಲಿರುವ ನನ್ನ ಪ್ರೊಫೈಲ್ನ್ನೇ ಡಿಲೀಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: WhatsApp: 18 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆ ನಿಷೇಧಿಸಿದ ಕಂಪನಿ: ಎಚ್ಚರದಿಂದಿರಿ
Published On - 3:25 pm, Mon, 2 May 22