Viral Video: ‘ಬ್ರ್ಯಾಂಡ್’; ಭ್ರಮೆಯ ಭಾವಿಗೆ ನಿಮ್ಮ ಮಕ್ಕಳನ್ನು ತಳ್ಳುತ್ತಿದ್ದೀರೇ? ಎಚ್ಚರವಿರಲಿ
Parenting: ಬಾಲ್ಯದಲ್ಲಿ ಅಪ್ಪ ಅಮ್ಮ ಬಟ್ಟೆ ಕೊಡಿಸಿದಾಗ ಇದು ಯಾವ ಬ್ರ್ಯಾಂಡಿನದು ಎಂದು ನೋಡುತ್ತಿದ್ದಿರೇ? ಹಾಗಿದ್ದರೆ ಈಗ್ಯಾಕೆ ನಿಮ್ಮ ಮಕ್ಕಳಿಗೆ ತುಟ್ಟಿಯಾದಂಥ ಬ್ರ್ಯಾಂಡ್ ಬಟ್ಟೆಗಳನ್ನೇ ಕೊಡಿಸುವ ಹಠ? ಅದರ ಪರಿಣಾಮದ ಅರಿವಿದೆಯೇ?
Brand: ‘ನನ್ನ ಸ್ನೇಹಿತೆ ಹತ್ತು ವರ್ಷವೂ ತುಂಬಿರದ ತನ್ನ ಮಗಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದಳು, ‘ನನ್ನ ಮಗಳು ‘ಇಂಥ’ ಬ್ರ್ಯಾಂಡ್ ಬಿಟ್ಟರೆ ಬೇರೆ ಯಾವ ಬ್ರ್ಯಾಂಡ್ನ ಬಟ್ಟೆಯನ್ನೂ ಧರಿಸುವುದಿಲ್ಲ.’ ಅಂದರೆ ತಾಯಿಮಗಳಿಬ್ಬರ ದೃಷ್ಟಿಯಲ್ಲಿ ಉಳಿದ ಬಟ್ಟೆಗಳೆಲ್ಲ ಚೀಪ್. ಇಂಥ ತುಟ್ಟಿ ಬ್ರ್ಯಾಂಡ್ನ ಬಟ್ಟೆಗಳನ್ನು ಧರಿಸುವುದೇ ಸ್ವಾಭಿಮಾನದ ದ್ಯೋತಕ ಮತ್ತು ಈ ಮೂಲಕವೇ ತನ್ನತನವನ್ನು ಉಳಿದವರು ಅಳಿಯಬೇಕು ಎನ್ನುವುದನ್ನು ಆ ಮಗು ತನ್ನ ಮೆದುಳಿಗೆ ಈಗಿನಿಂದಲೇ ತರಬೇತಿ ಕೊಟ್ಟುಕೊಳ್ಳುತ್ತಿದೆ. ಇಂಥ ಅಭ್ಯಾಸವು ನಿಮಗೂ ಮತ್ತು ಮಕ್ಕಳಿಗೂ ರೂಢಿಯಾಗಿದ್ದರೆ ಇಂದೇ ನಿಲ್ಲಿಸಿ.’ ಎನ್ನುತ್ತಿದೆ ಬ್ರೇನಿಫೈ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿರುವ ಈ ಕೆಳಗಿನ ವಿಡಿಯೋ ಕಂಟೆಂಟ್.
ಇದನ್ನೂ ಓದಿView this post on Instagram
ಯಾವ ಪೋಷಕರೂ ಅಷ್ಟೇ. ನಮಗಿಂತ ನಮ್ಮ ಮಕ್ಕಳು ಉತ್ತಮವಾದ ಬಟ್ಟೆಗಳನ್ನು ಹಾಕಬೇಕು ಎಂಬ ಆಸೆಯಿಂದಲೇ ಶಾಪಿಂಗ್ ಮಾಡುತ್ತಾರೆ. ಆದರೆ ಒಳ್ಳೆಯದು ಎಂದಾಗ ಅದು ತುಟ್ಟಿಯದು ಮತ್ತು ಬ್ರ್ಯಾಂಡ್ಗೆ ಸಂಬಂಧಿಸಿದ್ದು ಅಂತಲೇ ಅವರ ಅಂಬೋಣ. ಆದರೆ ಅದು ಖಂಡಿತ ತಪ್ಪು. ಕೊಡಿಸುವ ಬಟ್ಟೆ ಬಾಳಿಕೆ ಬರುವಂಥದ್ದಿದ್ದು ಮಕ್ಕಳಿಗೂ ಇಷ್ಟವಾಗುವಂತಿದ್ದರೆ ಮುಗಿಯಿತು. ನೀವು ಒಮ್ಮೆ ಬ್ರ್ಯಾಂಡ್ನ ಬಾವಿಗೆ ಬಿದ್ದಿರೋ ನಿಮ್ಮ ಮಕ್ಕಳೂ ಅದರಿಂದ ಎದ್ದುಬರಲಾರದ ಸ್ಥಿತಿಯನ್ನು ತಲುಪುತ್ತಾರೆ. ಅಷ್ಟೇ ಯಾಕೆ? ಮಕ್ಕಳು ತಮ್ಮ ಗುಣಾವಗುಣ, ನಡತೆಯ ಬಗ್ಗೆ ಆಲೋಚಿಸದೆ ಬ್ರ್ಯಾಂಡ್ ಮೂಲಕವೇ ತನ್ನ ಅಸ್ತಿತ್ವ ಎಂಬ ಪೊಳ್ಳುತನಕ್ಕೆ ಬೀಳುತ್ತವೆ.
ಇದನ್ನೂ ಓದಿ : Viral Video: ‘ಲೈಕ್ಸ್, ಶೇರ್, ಕಮೆಂಟ್ಗಾಗಿ ಇಷ್ಟೊಂದು ಅಪಾಯಕ್ಕೆ ಒಡ್ಡಿಕೊಳ್ಳಬೇಡ’ ನೆಟ್ಟಿಗರ ಮನವಿ
ತುಟ್ಟಿ ಬ್ರ್ಯಾಂಡ್ ಧರಿಸಿದರೆ ಮಾತ್ರ ಸ್ನೇಹಿತರು ನಮ್ಮನ್ನು ಗೌರವಿಸುತ್ತಾರೆ, ಸರೀಕರು ನಮ್ಮನ್ನು ಒಳಗೊಳ್ಳುತ್ತಾರೆ ಎಂಬ ಭ್ರಮೆಯಲ್ಲಿ ಬಿದ್ದ ಮಕ್ಕಳು ತಮ್ಮ ಆಂತರಿಕ ಸೌಂದರ್ಯ ಮತ್ತು ಆತ್ಮವಿಮರ್ಶೆಯಂಥ ಸಂಗತಿಗಳಿಗೆ ತೆರೆದುಕೊಳ್ಳುವುದೇ ಇಲ್ಲ. ಜೊತೆಗೆ ಜಾಹೀರಾತು ಕಂಪೆನಿಗಳ ಅರ್ಥಹೀನ ಬಡಬಡಿಕೆ ಮತ್ತದರ ಪ್ರಭಾವದಿಂದ ನಿಮ್ಮ ಮಕ್ಕಳನ್ನು ನೀವೇ ಕಾಪಾಡಬೇಕು. ಏಕೆಂದರೆ ಅತ್ಯಂತ ಪ್ರಭಾವಿ ಮಾಧ್ಯಮ ದೃಶ್ಯಮಾಧ್ಯಮ. ಇದರ ಪ್ರಭಾವಕ್ಕೆ ಮಕ್ಕಳು ಅತಿಬೇಗನೆ ಒಳಗಾಗುವುದರಿಂದ ಅದೇ ಸತ್ಯ ಎಂದುಕೊಂಡುಬಿಡುತ್ತವೆ.
ಇದನ್ನೂ ಓದಿ : Viral Video: ಲಿಸಾ; ಕುತೂಹಲ ಕೆರಳಿಸಿರುವ ಒಡಿಶಾದ ಮೊದಲ ಎಐ ನ್ಯೂಸ್ ಆ್ಯಂಕರ್
ಆದ್ದರಿಂದ ಮಕ್ಕಳನ್ನು ಸುತ್ತುವರಿದ ಎಲ್ಲ ಹುಸಿಪ್ರಭಾವಗಳಿಂದ ರಕ್ಷಿಸುವುದು ಪೋಷಕರ ಕರ್ತವ್ಯ. ಅದಕ್ಕಿಂತ ಮೊದಲು ನಿಮ್ಮ ಬುದ್ಧಿ ಮತ್ತು ಅರಿವನ್ನು ಆಗಾಗ ಒರೆಗಲ್ಲಿಗೆ ಹಚ್ಚಿಕೊಳ್ಳಿ. ಬಟ್ಟೆಬರೆಗಿಂತ ಜ್ಞಾನ, ಗುಣ, ಸ್ವಭಾವ, ಮತ್ತು ಅನುಭವದಿಂದ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ. ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:00 pm, Mon, 10 July 23