Viral Video: ಪೇಪರ್​​​ನಲ್ಲಿ ಮೂಡಿದ ಪರಿಸರಸ್ನೇಹಿ ಶ್ರೀರಾಮ ಮೂರ್ತಿ

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ.  ಈ ಮಧ್ಯೆ ಮಹಿಳೆಯೊಬ್ಬರು ಮನೆಯಲ್ಲಿಯೇ ನ್ಯೂಸ್ ಪೇಪರ್ ಗಳನ್ನು ಬಳಸಿಕೊಂಡು ತಯಾರಿಸಿದಂತ ಪರಿಸರ ಸ್ನೇಹಿ ಶ್ರೀರಾಮ ವಿಗ್ರಹದ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.  

Viral Video: ಪೇಪರ್​​​ನಲ್ಲಿ ಮೂಡಿದ ಪರಿಸರಸ್ನೇಹಿ ಶ್ರೀರಾಮ ಮೂರ್ತಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2024 | 5:52 PM

ಉತ್ತರ ಪ್ರದೇಶದ ಅಯ್ಯೋಧ್ಯೆಯಲ್ಲಿ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ರಾಮ ಲಲ್ಲಾ (ಬಾಲ ರಾಮ) ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಒಂದು ಐತಿಹಾಸಿಕ ಕ್ಷಣಕ್ಕಾಗಿ ರಾಮ ಭಕ್ತರೆಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಶ್ರೀರಾಮ ಹಾಗೂ ರಾಮ ಮಂದಿರಕ್ಕೆ ಕುರಿತ ಹಲವಾರು ಸುದ್ದಿಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.  ಮೊನ್ನೆಯಷ್ಟೆ ಪುಟ್ಟ ಹುಡುಗನೊಬ್ಬ ಕೊಳಲನೂದುತ ಮನೆಮನೆಗೆ ಮಂತ್ರಾಕ್ಷಯನ್ನು  ವಿತರಿಸಲು ಹೋಗಿದ್ದಂತಹ  ವಿಡಿಯೋವೊಂದು ವೈರಲ್ ಆಗಿತ್ತು, ಅದೇ ರೀತಿ ಅಯೋಧ್ಯೆಯಲ್ಲಿ ಲ್ಯಾಂಡ್ ಆದ ಮೊದಲ ವಿಮಾನದಲ್ಲಿ  ಪ್ರಯಾಣಿಕರು ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ವೇಷ ಭೂಷಣ ಧರಿಸಿ ಆಗಮಿಸಿದಂತಹ ಸುದ್ದಿ ಕೂಡಾ ಬಹಳನೇ  ವೈರಲ್ ಆಗಿತ್ತು.  ಅದೇ ರೀತಿ ಪ್ರಭು ಶ್ರೀ ರಾಮನಿಗೆ ಸಂಬಂಧಿಸಿದ ವಿಶೇಷ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಮಹಿಳೆಯೊಬ್ಬರು DIY ಕಲೆಯ ಮೂಲಕ ನ್ಯೂಸ್ ಪೇಪರ್​​​ಗಳನ್ನು ಬಳಸಿಕೊಂಡು ಅತ್ಯದ್ಭುತವಾದ ಪರಿಸರ ಸ್ನೇಹಿ ರಾಮ ವಿಗ್ರಹವನ್ನು ತಯಾರಿಸಿದ್ದಾರೆ.

ಈ ವಿಡಿಯೋವನ್ನು @hetal_diy_queen  ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮಹಿಳೆಯೊಬ್ಬರು ನ್ಯೂಸ್ ಪೇಪರ್ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಪರಿಸರ ಸ್ನೇಹಿ  ಶ್ರೀರಾಮ ಮೂರ್ತಿಯನ್ನು ತಯಾರು ಮಾಡಿದ್ದಾರೆ  ಎಂಬುದನ್ನು ನೋಡಬಹುದು.

ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಹಳ ಸುಂದರವಾಗಿರುವ ಪ್ರಭು ಶ್ರೀರಾಮನ ವಿಗ್ರಹವನ್ನು ತಯಾರಿಸುವುದನ್ನು ಕಾಣಬಹುದು. ಇದಕ್ಕಾಗಿ ಅವರು ಮೊದಲಿಗೆ ಒಂದು ಟೇಬಲ್ ಮೇಲೆ ಆರು ಖಾಲಿಯಾಗಿರುವಂತಹ ಎಣ್ಣೆಯ ಡಬ್ಬಿ ಮತ್ತು ಅದರ ಮೇಲೆ ಒಂದು ಸ್ಟೀಲ್ ಬೌಲ್ ಮತ್ತು ಕೊಡವನ್ನಿಟ್ಟು, ನಂತರ ಎಣ್ಣೆಯ ಡಬ್ಬಿಯ ಎರಡೂ ಬದಿಗಳಲ್ಲೂ ಮರದ ಕೋಲುಗಳನ್ನಿಟ್ಟು, ಹಾಗೂ  ಡಬ್ಬಿಯ ಕೆಳ ಭಾಗದಲ್ಲೂ ಎರಡು ದಪ್ಪಗಿನ ಮರದ ಕೋಲನ್ನಿಟ್ಟು, ಅದನ್ನು  ಗಮ್ ಸಹಾಯದಿಂದ ಡಬ್ಬಿಗೆ ಅಂಟಿಸಿ, ಶ್ರೀರಾಮನ ವಿಗ್ರಹವನ್ನು ತಯಾರಿಸಲು ದೇಹಾಕೃತಿಯನ್ನು ರಚಿಸುತ್ತಾರೆ. ಎರಡನೇ ಹಂತದಲ್ಲಿ ಅವರು ತಯಾರಿಸಿದಂತಹ ದೇಹಾಕೃತಿಗೆ ಸಂಪೂರ್ಣವಾಗಿ ಪೇಪರ್ ಸುತ್ತಿಕೊಳ್ಳುತ್ತಾರೆ. ನಂತರ ಅದರ ಮೇಲೆ ಪೇಪರ್ ಉಂಡೆಯನ್ನು ಒಂದೊಂದಾಗಿ ಅದರ ಮೇಲೆ ಗಮ್ ಸಹಾಯದಿಂದ ಅಂಟಿಸಿಕೊಳ್ಳುತ್ತಾರೆ.

ಮೂರನೇ ಹಂತದಲ್ಲಿ ಮಣ್ಣಿನ ಮುದ್ದೆಯನ್ನು ತಯಾರಿಸುವಂತೆಯೇ ಆ ಮಹಿಳೆ ಪೇಪರ್ ಮುದ್ದೆಯನ್ನು ತಯಾರಿಸುತ್ತಾರೆ. ಅದಕ್ಕಾಗಿ ಅವರು ಒಂದಷ್ಟು ಪೇಪರ್​​ಗಳನ್ನು  ಸಣ್ಣಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಂಡು, ನೀರಲ್ಲಿ ಅದ್ದಿಟ್ಟು ಪೇಪರ್ ಮುದ್ದೆಯನ್ನು ತಯಾರಿಸಿಕೊಳ್ಳುತ್ತಾರೆ. ಹೀಗೆ ತಯಾರಿಸಿದಂತಹ ಪೇಪರ್ ಮುದ್ದೆಯನ್ನು ದೇಹಾಕೃತಿಗೆ ಅಂಟಿಸುವ ಮೂಲಕ ಹಾಗೂ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಗಿ ಕೈ ಬೆರಳುಗಳನ್ನು ರಚಿಸುವ ಮೂಲಕ ಮೂರ್ತಿಯನ್ನು ತಯಾರಿಸುತ್ತಾರೆ. ನಾಲ್ಕನೇ ಹಂತದಲ್ಲಿ, ಈ ಮಹಿಳೆ ಯಾವುದೇ ರಾಸಾಯನಿಕಯುಕ್ತ  ಪೈಂಟ್ ಬಳಕೆ ಮಾಡದೆ, ಒಂದಷ್ಟು ಹೂವುಗಳನ್ನು ಬಳಸಿಕೊಂಡು ಅದ್ರಲ್ಲಿ ನೈಸರ್ಗಿಕ ಬಣ್ಣವನ್ನು ತಯಾರಿಸಿ, ಅದನ್ನು ಮೂರ್ತಿಗೆ ಬಳಿಯುತ್ತಾರೆ. ಕೊನೆಯ ಹಂತದಲ್ಲಿ ಧೋತಿ, ಶಲ್ಯ, ಕಿರೀಟ, ಸರಗಳು, ಹಾಗೂ ಹೂವಿನ ಮಾಲೆಯನ್ನು ಹಾಕಿ  ಹಾಕುವ ಮೂಲಕ ಪ್ರಭು ಶ್ರೀರಾಮನ ಮೂರ್ತಿಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಕೊನೆಯಲ್ಲಿ ಬಿಲ್ಲನ್ನು ಸಹ ರಾಮನ ವಿಗ್ರಹದ ಬಳಿ ಇಡುತ್ತಾರೆ. ಈ ಸುಂದರ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಇದನ್ನೂ ಓದಿ:  ಈ ಯುವಕನ ಅದ್ಭುತ ನೃತ್ಯಕ್ಕೆ ತಲೆಬಾಗಲೇಬೇಕು

ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ  31.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2.4 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼರಾಮನ ಮೂರ್ತಿ ಬಹಳ ಅದ್ಭುತವಾಗಿ ಮೂಡಿ ಬಂದಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಹೋದರಿ ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಸಲಾಂʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತು ಹಲವರು ಪರಿಸರ ಸ್ನೇಹಿ ಶ್ರೀರಾಮ ಮೂರ್ತಿ ಬಹಳ ಸುಂದರವಾಗಿದೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ