Video: ಮೊದಲ ಬಾರಿಗೆ ಕಡಲ ತೀರಕ್ಕೆ ಭೇಟಿ ನೀಡಿ ಸೌಂದರ್ಯ ಸವಿದ ವೃದ್ಧ ದಂಪತಿ
ಬೀಚ್ ಅಂದ್ರೆ ಬಹುತೇಕರಿಗೆ ಇಷ್ಟ. ಹೆಚ್ಚಿನವರು ಸಂಜೆಯ ಸೂರ್ಯಸ್ತದ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಬೀಚ್ ನತ್ತ ತೆರಳುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಸ್ವಲ್ಪ ವಿಭಿನ್ನವಾಗಿದೆ. ವೃದ್ಧ ದಂಪತಿ ಮೊದಲ ಬಾರಿಗೆ ಬೀಚ್‌ಗೆ ತೆರಳಿದ್ದು, ಅವರ ಖುಷಿಯೂ ಎಲ್ಲೆ ಮೀರಿದೆ. ಹಿರಿಜೀವದ ಖುಷಿಯ ಕ್ಷಣದ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ನಮ್ಮ ಅಜ್ಜ ಅಜ್ಜಿಯಂದಿರಿಗೆ (grandparents) ಮನೆ ಬಿಟ್ಟರೆ ಪ್ರಪಂಚ ಬೇರೆ ಇಲ್ಲ. ಹೀಗಾಗಿ ಟ್ರಿಪ್, ಟ್ರಕ್ಕಿಂಗ್, ಸುತ್ತಾಟ ಇದ್ಯಾವುದನ್ನು ಎಂಜಾಯ್ ಮಾಡಿದವರೇ ಅಲ್ಲ. ಮಕ್ಕಳು, ಮೊಮ್ಮಕ್ಕಳು ಕರೆದುಕೊಂಡು ಹೋದರಷ್ಟೇ ಅವರ ಹಿಂದೆಯೇ ಪುಟಾಣಿ ಮಕ್ಕಳಂತೆ ಬರುತ್ತಾರೆ. ಇದೀಗ ವೃದ್ಧ ದಂಪತಿ ಮೊದಲ ಬಾರಿಗೆ ಬೀಚ್ (beach) ನೋಡಲು ಬಂದಿದ್ದಾರೆ. ಹೌದು, ಮೊದಲ ಬಾರಿಗೆ ಸಮುದ್ರ ತೀರದಲ್ಲಿ ನಡೆಯುತ್ತಾ, ಅಲೆಗಳನ್ನು ನೋಡುತ್ತಾ ಖುಷಿ ಪಡುತ್ತಿರುವ ವೃದ್ಧ ದಂಪತಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
ದಿವ್ಯಾ ತಾವ್ಡೆ (@shortgirlthingss) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡಿರುವ ಈ ವಿಡಿಯೋ ವೃದ್ಧ ದಂಪತಿ ಮೊದಲ ಬಾರಿಗೆ ಸಮುದ್ರ ತೀರಕ್ಕೆ ಭೇಟಿ ಕೊಟ್ಟಿರುವುದಾಗಿದೆ. ರಜಾದಿನದಂದು ಸಮುದ್ರ ವೀಕ್ಷಿಸಲು ತೆರಳಿದ್ದಲ್ಲ. ದಶಕಗಳಿಂದ ಅವರು ಕಿವಿಗಳಿಂದಷ್ಟೇ ಕೇಳಿದ್ದ ಸಮುದ್ರದ ಅಲೆಗಳ ಸದ್ದನ್ನು ಸ್ವತಃ ನೋಡಲು ತೆರಳಿದ್ದರು. ನನ್ನ ಅಜ್ಜ ಅಜ್ಜಿ ಸಮುದ್ರ ತೀರದಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಕೆಲವು ಕ್ಷಣಗಳು ಹೃದಯದಲ್ಲಿ ಹಾಗೆಯೇ ಉಳಿದು ಬಿಡುತ್ತದೆ ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಈ ವಿಡಿಯೋದಲ್ಲಿ ವೃದ್ಧ ದಂಪತಿ ಕೈಕೈ ಹಿಡಿದು ಸಮುದ್ರದಲ್ಲಿ ನಿಂತುಕೊಂಡಿದ್ದಾರೆ. ತಮ್ಮ ಪಾದಗಳ ಮೇಲೆ ಅಲೆಗಳು ಅಪ್ಪಳಿಸುತ್ತಿದ್ದಂತೆ ಅವರ ಖುಷಿಯೂ ಮುಖದಲ್ಲಿ ವ್ಯಕ್ತವಾಗಿದೆ. ಈ ಹಿರಿಜೀವ ಸಾಂಪ್ರದಾಯಿಕ ಮಹಾರಾಷ್ಟ್ರದ ಉಡುಗೆ ತೊಟ್ಟಿರುವುದನ್ನು ಕಾಣಬಹುದು.
ಇದನ್ನೂ ಓದಿ:ಅಜ್ಜಿಗೆ ವಿಡಿಯೋ ಕಾಲ್ ಮಾಡುವುದನ್ನು ಹೇಳಿಕೊಟ್ಟ ಮೊಮ್ಮಗಳು
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹಿರಿ ಜೀವಕ್ಕೆ ಇದಕ್ಕಿಂತ ಖುಷಿ ಇನ್ನೇನಿದೆ ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನಿಮ್ಮ ಮುಖದಲ್ಲಿ ನಗು ಮೂಡಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದಕ್ಕಾಗಿಯೇ ನಾನು ನನ್ನ ಇಂಟರ್‌ನೆಟ್ ಬಿಲ್‌ಗಳನ್ನು ಪಾವತಿಸುತ್ತೇನೆ. ನನ್ನ ದಿನವನ್ನು ಭಾವನಾತ್ಮಕ ಮತ್ತು ಸಂತೋಷಕರವಾಗಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 am, Sun, 11 January 26
