
ಉದ್ಯೋಗ (job)ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಕೆಲಸವಿದ್ದರೆ ಮಾತ್ರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ. ಹೀಗಿರುವಾಗ ಇದ್ದ ಕೆಲಸವನ್ನು ಬಿಟ್ಟರೆ ಮುಂದೇನು ಎನ್ನುವ ಯೋಚನೆ ಬರುತ್ತದೆ. ಆದರೆ ಇಲ್ಲೊಬ್ಬ ಉದ್ಯೋಗಿಯು 65 ಲಕ್ಷ ವಾರ್ಷಿಕ ಸಂಬಳವಿರುವ ಕೆಲಸ ಬಿಟ್ಟು ಆರು ತಿಂಗಳ ಕಾಲ ಜಾಲಿ ಟ್ರಿಪ್‌ಗೆ ಹೋಗಿದ್ದಾನೆ. ಟ್ರಿಪ್‌ನಿಂದ ಮರಳಿದ ಬಳಿಕ ಅದೇ ಕಂಪನಿಯಲ್ಲಿ ಅಧಿಕ ಸಂಬಳದೊಂದಿಗೆ ಮತ್ತೆ ಕೆಲಸಗಿಟ್ಟಿಸಿಕೊಂಡಿದ್ದಾನೆ. ವೃತ್ತಿ ಜೀವನದ ತನ್ನ ಈ ನಿರ್ಧಾರ ಹಾಗೂ ಕೊನೆಗೆ ತನ್ನ ಆಯ್ಕೆಯ ಬಗ್ಗೆ ರೆಡ್ಡಿಟ್ ಖಾತೆಯಲ್ಲಿ (Reddit Post) ಶೇರ್ ಮಾಡಿಕೊಂಡಿದ್ದು ನೆಟ್ಟಿಗರ ಗಮನ ಸೆಳೆದಿದ್ದಾನೆ.
ಅಧಿಕ ಸಂಬಳದ ಕೆಲಸ ತೊರೆದ ಉದ್ಯೋಗಿ
Creative_System6833 ಎಂಬ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಡೆವಲಪರ್ ತನ್ನ ವೃತ್ತಿಜೀವನದ ಬಗ್ಗೆ ಹಂಚಿಕೊಂಡಿದ್ದಾನೆ. ಕಳೆದ ವರ್ಷ ನಾನು ವರ್ಷಕ್ಕೆ 65 ಲಕ್ಷ ರೂಪಾಯಿ ಸಂಬಳದ ನನ್ನ ಜಾಬ್ ಬಿಟ್ಟೆ. ಉದ್ಯೋಗಕ್ಕಾಗಿ ನಾನು ಬೇರೆ ಕಂಪನಿಗೆ ಹೋಗಲೇ ಇಲ್ಲ, ಕೇವಲ ಒಂದು ಕಾರು ಖರೀದಿಸಿ ಆಮೇಲೆ 6 ತಿಂಗಳು ಪ್ರವಾಸ ಕೈಗೊಂಡೆ. ಲೈಫ್ ಎಂಜಾಯ್ ಮಾಡಿದೆ, ನನಗೆ ಏನು ಇಷ್ಟವೋ ಅದನ್ನೆಲ್ಲಾ ಈ ಆರು ತಿಂಗಳಲ್ಲಿ ಮಾಡಿ ಮುಗಿಸಿದೆ. ಆರು ತಿಂಗಳು ಮುಗಿದಿದ್ದೆ ತಿಳಿಯಲಿಲ್ಲ. ನನಗೆ ಈ ಬಗ್ಗೆ ಯಾವುದೇ ಪಶ್ಚಾತ್ತಾಪ ಭಾವನೆಯಿಲ್ಲ ಎಂದಿದ್ದಾನೆ.
ಅದೇ ಕಂಪನಿಗೆ 15% ಹೆಚ್ಚುವರಿ ಸಂಬಳದೊಂದಿಗೆ ಮತ್ತೆ ಜಾಯಿನ್ ಆದ ಉದ್ಯೋಗಿ
ಆದರೆ ಈಗ ನಾನು ಅದೇ ಕಂಪನಿಗೆ 15% ಹೈಕ್ ಜೊತೆಯಲ್ಲಿ ಮತ್ತೆ ಕೆಲಸಕ್ಕೆ ಸೇರಿರುವೆ. ಮತ್ತೆ ಈ ಕಂಪನಿಯಲ್ಲಿ ಕೆಲಸ ಮಾಡೋದಕ್ಕೆ ಬಹಳ ಖುಷಿಯಾಗಿದೆ. ಹಣವನ್ನು ವಿಭಿನ್ನವಾಗಿ ನೋಡುತ್ತೇನೆ. ಅದರ ಬಗ್ಗೆ ಹೆಚ್ಚಿನ ಗೌರವವಿದೆ. ಈ ಸಣ್ಣದಾದ ವಿರಾಮವು ನನ್ನನ್ನು ರೀ ಸೆಟ್ ಮಾಡಿತು. ಈ ನಿರ್ಧಾರವು ನನಗೆ ದೃಷ್ಟಿಕೋನ, ಉದ್ದೇಶ ಎರಡನ್ನೂ ನೀಡಿತು ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
ಓದುವ ಆಸೆಯಿದೆ ಎಂದ ಡೆವಲಪರ್
ನನ್ನ ಸಂಬಳವನ್ನು ಯುಎಸ್ ಡಾಲರ್‌ಗಳಲ್ಲಿ ಪಡೆಯುತ್ತೇನೆ. ಭಾರತೀಯ ಕಾನೂನುಗಳ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತೇನೆ. ನಾನು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರಿಸುವ ಯೋಚನೆ ಇದೆ. ಇದು ನನ್ನ ಕಂಪನಿಯ ಓನರ್ ಗೆ ಗೊತ್ತು. ನಾನಿನ್ನು ಬ್ಯಾಚುಲರ್, ಹೀಗಾಗಿ ನನ್ನ ಕರಿಯರ್ ಜೊತೆ ಆಟ ಆಡಲು ತುಂಬಾನೇ ಸಮಯವಿದೆ. ಹೀಗಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೆ ನಾನು ಮತ್ತೆ ಉತ್ತಮ ಸಂಬಳ, ತೆರಿಗೆ ಪ್ರಯೋಜನಗಳೊಂದಿಗೆ ಸೇರಿದ್ದೇನೆ. ಭಾರತೀಯ ಕಂಪನಿಗಳು ಈ ರೀತಿ ಮಾಡೋದಿಲ್ಲ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:Video: ಡ್ರೈವಿಂಗ್ ಅಂದ್ರೆ ಈಕೆಗೆ ಇಷ್ಟ, ಈ ಆಸಕ್ತಿಯನ್ನೇ ವೃತ್ತಿಯಾಗಿಸಿಕೊಂಡ ಬೆಂಗಳೂರಿನ ಯುವತಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಈ ರೀತಿ ಬ್ರೇಕ್ ತೆಗೆದುಕೊಂಡು ಸುತ್ತಾಡುವುದು ಅಷ್ಟು ಸುಲಭವಲ್ಲ ಧೈರ್ಯ ಬೇಕು ಎಂದಿದ್ದಾರೆ. ಇನ್ನೊಬ್ಬರು, ತಮ್ಮ ಆದ್ಯತೆಗಳೇನು, ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ತಿಳಿದಿದ್ದವರು ಮಾತ್ರ ಈ ರೀತಿ ಮಾಡಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ನೀವು ಮತ್ತೆ ಅದೇ ಕಂಪನಿಗೆ ಸೇರಲು ನಿರ್ಧಾರ ಮಾಡಿದ್ದು ಯಾಕೆ, ಕೆಲಸ ಬಿಟ್ಟಿರುವ ಹಿಂದಿನ ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ