
ಉತ್ತಮ ಸಂಬಳ, ಕಾರ್ಪೊರೇಟ್ ವೃತ್ತಿಜೀವನ ಮತ್ತು ಉನ್ನತ ಹುದ್ದೆ ಪಡೆಯುವುದು ಬಹುತೇಕರ ಕನಸಾಗಿರುತ್ತದೆ. ಆದರೆ, ಕೆಲಸದ ವಿಪರೀತ ಒತ್ತಡ ಹಾಗೂ ವೈಯಕ್ತಿಕ ಜೀವನಕ್ಕೆ ಸಮಯ ಸಿಗದಿರುವ ಕಾರಣದಿಂದ ಕೆಲವು ಜನರು ತಮ್ಮ ವೃತ್ತಿಯ ದಿಕ್ಕನ್ನೇ ಬದಲಾಯಿಸಿಕೊಳ್ಳುತ್ತಾರೆ. ಯುಕೆ (UK) ಮೂಲದ 30 ವರ್ಷದ ಲಿಜ್ ಈಸ್ಟ್ (Liz East) ಎಂಬ ಮಹಿಳೆಯೂ ಅಂತಹದೇ ಒಂದು ಅಚ್ಚರಿಯ ನಿರ್ಧಾರ ತಳೆದು ಸುದ್ದಿಯಲ್ಲಿದ್ದಾರೆ. ನಾಲ್ಕು ವರ್ಷಗಳ ಕಾಲ ಕ್ರಿಮಿನಲ್ ಡಿಫೆನ್ಸ್ ಕ್ಷೇತ್ರದಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದ ಅವರು, ಆ ಕೆಲಸವನ್ನು ತೊರೆದು ಪೂರ್ಣ ಸಮಯದ ‘ಡಾಗ್ ವಾಕರ್’ (Dog Walker) ಆಗಿ ಯಶಸ್ಸು ಕಂಡಿದ್ದಾರೆ.
ಲಿಜ್ ಈಸ್ಟ್ ಅವರು ಕಾನೂನು ಕ್ಷೇತ್ರದಲ್ಲಿ ಸುಮಾರು ಆರು ವರ್ಷಗಳ ಶಿಕ್ಷಣವನ್ನು ಪೂರೈಸಿ, ನಾಲ್ಕು ವರ್ಷಗಳ ಕಾಲ ಕ್ರಿಮಿನಲ್ ಡಿಫೆನ್ಸ್ ಪ್ಯಾರಾಲೀಗಲ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಆಡಳಿತಾತ್ಮಕ ಕೆಲಸಗಳು, ನ್ಯಾಯಾಲಯಗಳಿಗೆ ಅಲೆದಾಡುವುದು, ಜೈಲುಗಳಿಗೆ ಭೇಟಿ ನೀಡುವುದು ಹಾಗೂ ಕಕ್ಷಿದಾರರೊಂದಿಗೆ ಸಂವಹನ ನಡೆಸುವುದು ಅವರ ಪ್ರಮುಖ ಜವಾಬ್ದಾರಿಯಾಗಿತ್ತು. ಆದರೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕೆಲಸದ ನಿರಂತರ ಒತ್ತಡವು ಅವರ ಮಾನಸಿಕ ಹಾಗೂ ವೈಯಕ್ತಿಕ ಜೀವನದ ಮೇಲೆ ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿತು. ಜೊತೆಗೆ ಲಂಡನ್‌ನ ತಡರಾತ್ರಿಯ ಸಾಮಾಜಿಕ ಜೀವನಶೈಲಿಯೂ ಅವರಿಗೆ ಕಿರಿಕಿರಿ ಉಂಟುಮಾಡಿತು. “ಹಣ ಚೆನ್ನಾಗಿದೆ ಎಂಬ ಒಂದೇ ಕಾರಣಕ್ಕೆ ಈ ಒತ್ತಡದ ಜೀವನ ಮುಂದುವರಿಸುವುದು ಸರಿಯಲ್ಲ” ಎಂದು ಭಾವಿಸಿದ ಲಿಜ್, ತಮ್ಮ ವೃತ್ತಿಜೀವನಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದರು.
ಲಿಜ್ ಅವರ ಪತಿ ಈಗಾಗಲೇ ಸಾಕುಪ್ರಾಣಿಗಳ ಆರೈಕೆ ಮತ್ತು ‘ನಾಯಿ ವಾಕಿಂಗ್’ ವ್ಯವಹಾರವನ್ನು ನಡೆಸುತ್ತಿದ್ದರು. ಇದರಿಂದ ಪ್ರೇರಿತರಾದ ಲಿಜ್, ಸ್ವಂತ ಸಾಕುಪ್ರಾಣಿ ಆರೈಕೆ ಸೇವಾ ಉದ್ಯಮವನ್ನು ಪ್ರಾರಂಭಿಸಲು ಮುಂದಾದರು. ಆರಂಭಿಕ ಖರ್ಚುಗಳನ್ನು ಸರಿದೂಗಿಸಲು ಸ್ಥಳೀಯ ಪಬ್ ಒಂದರಲ್ಲಿ ಕೆಲಸ ಮಾಡುತ್ತಾ, ಜೊತೆಯಲ್ಲೇ ಡಾಗ್ ವಾಕಿಂಗ್‌ಗಾಗಿ ಗ್ರಾಹಕರನ್ನು (Clients) ಹುಡುಕಲು ಪ್ರಾರಂಭಿಸಿದರು.
ಒಂದು ವರ್ಷದ ಸತತ ಪ್ರಯತ್ನದ ನಂತರ ಅವರಿಗೆ ಕಾಯಂ ಗ್ರಾಹಕರು ಸಿಕ್ಕಿದರು. ಪ್ರಸ್ತುತ ಅವರು ದಿನಕ್ಕೆ 4 ಗುಂಪು ನಡಿಗೆಗಳನ್ನು (Group Walks) ನಡೆಸುತ್ತಾರೆ. ದಿನವೊಂದಕ್ಕೆ 20 ರಿಂದ 30 ನಾಯಿಗಳ ಆರೈಕೆ ಮಾಡುತ್ತಾರೆ. ಒಂದು ನಾಯಿಗೆ ಗಂಟೆಗೆ ಸುಮಾರು £14 (ಸುಮಾರು ರೂ. 1,800) ಶುಲ್ಕ ವಿಧಿಸುತ್ತಾರೆ. ದಿನವೊಂದಕ್ಕೆ ರೂ. 38,500 ರಿಂದ ರೂ. 51,400 ಗಳಷ್ಟು ವಹಿವಾಟು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
ತಮ್ಮ ಹಳೆಯ ಕಾರ್ಪೊರೇಟ್ ವಕೀಲ ವೃತ್ತಿಗೆ ಹೋಲಿಸಿದರೆ, ಈಗ ಕೇವಲ ಅರ್ಧದಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸಾವಿರಾರು ಪೌಂಡ್‌ಗಳನ್ನು ಹೆಚ್ಚು ಸಂಪಾದಿಸುತ್ತಿರುವುದಾಗಿ ಲಿಜ್ ಹೇಳುತ್ತಾರೆ. ಆರು ವರ್ಷಗಳ ಕಾನೂನು ಶಿಕ್ಷಣವನ್ನು ವ್ಯರ್ಥ ಮಾಡಿದಿರಾ ಎಂದು ಕೆಲವರು ಟೀಕಿಸಿದರೂ, ಆ ಶಿಕ್ಷಣ ನೀಡಿದ ಅನುಭವ ತಮ್ಮ ದೈನಂದಿನ ಜೀವನದಲ್ಲಿ ಸಹಾಯ ಮಾಡುತ್ತಿದೆ ಎಂಬುದು ಅವರ ಅಭಿಪ್ರಾಯ. ಅಗತ್ಯಬಿದ್ದರೆ ಭವಿಷ್ಯದಲ್ಲಿ ಮತ್ತೆ ವಕೀಲ ವೃತ್ತಿಗೆ ಮರಳುವ ಅವಕಾಶವಿದ್ದರೂ, ಪ್ರಸ್ತುತ ಮಾಡುತ್ತಿರುವ ಕೆಲಸ ತಮಗೆ ಪೂರ್ಣ ಸಮಾಧಾನ ಮತ್ತು ಸಂತೋಷ ತಂದಿರುವುದರಿಂದ ಹಿಂತಿರುಗುವ ಆಲೋಚನೆ ಇಲ್ಲ ಎಂದು ಅವರು ಹೇಳುತ್ತಾರೆ.
ಕೇವಲ ಹಣದ ಆಸೆಗೆ ಬಿದ್ದು ಯಾರೂ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಲಿಜ್ ಸಲಹೆ ನೀಡುತ್ತಾರೆ. ಪ್ರಾಣಿಗಳ ಮೇಲೆ ನಿಜವಾದ ಪ್ರೀತಿ ಹಾಗೂ ಕಾಳಜಿ ಇರುವವರಿಗೆ, ಹೊರಾಂಗಣದಲ್ಲಿ (Outdoor) ಸಮಯ ಕಳೆಯಲು ಇಷ್ಟಪಡುವವರಿಗೆ ಮಾತ್ರ ಈ ವೃತ್ತಿ ಸೂಕ್ತ. ಪ್ರಸ್ತುತ ಬೆಳಿಗ್ಗೆ ಎದ್ದು ಉತ್ಸಾಹದಿಂದ ಕೆಲಸಕ್ಕೆ ಹೋಗುವುದನ್ನು ತಾವು ಆನಂದಿಸುತ್ತಿರುವುದಾಗಿ ಲಿಜ್ ಹಂಚಿಕೊಂಡಿದ್ದಾರೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Wed, 23 September 26