ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವೇಳೆ ಮಗುವಿಗೆ ಜನ್ಮ ನೀಡಿದ ಅಂತಿಮ ವರ್ಷದ ವಿದ್ಯಾರ್ಥಿನಿ
ಸಾಮಾಜಿಕ ಜಾಲತಾಣದಲ್ಲಿ ಚೀನಾದಲ್ಲಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳ ಬಗ್ಗೆ ಆಗ್ಗಾಗೆ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಇಲ್ಲೊಂದು ಘಟನೆ ವೈರಲ್ ಆಗಿದೆ. ಚೀನಾದ ಹುಬೈ ಪ್ರಾಂತ್ಯದ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ 20 ವರ್ಷದ ಯುವತಿಯೊಬ್ಬಳು ಪರೀಕ್ಷೆ ತಯಾರಿ ನಡೆಸುತ್ತಿದ್ದ ವೇಳೆ 4.5 ಕೆಜಿ ತೂಕದ ದೈತ್ಯ ಮಗುವಿಗೆ ಜನ್ಮ ನೀಡಿದ್ದಾಳೆ.

ಚೀನಾದಲ್ಲಿ ವಿಚಿತ್ರ ಘಟನೆಗಳು ವೈರಲ್ ಆಗುತ್ತ ಇರುತ್ತದೆ. ಇದೀಗ ಅಚ್ಚರಿ ಹುಟ್ಟಿಸುವಂತಹ ವಿಚಾರವೊಂದು ವೈರಲ್ ಆಗಿದೆ. ಚೀನಾದ ಹುಬೈ (Hubei, China) ಪ್ರಾಂತ್ಯದ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ 20 ವರ್ಷದ ಯುವತಿಯೊಬ್ಬಳು ಪರೀಕ್ಷೆ ತಯಾರಿ ನಡೆಸುತ್ತಿದ್ದ ವೇಳೆ 4.5 ಕೆಜಿ ತೂಕದ ದೈತ್ಯ ಮಗುವಿಗೆ ಜನ್ಮ ನೀಡಿದ್ದಾಳೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿಯ ಪ್ರಕಾರ ವಿದ್ಯಾರ್ಥಿನಿಗೆ ಅನಿರೀಕ್ಷಿತ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಹೋಗುವ ಮೊದಲೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಹೇಳಲಾಗಿದೆ. ಈ ಬಗ್ಗೆ ಆಕೆಯ ಸ್ನೇಹಿತೆ ವಿವರವಾಗಿ ವಿವರಿಸಿದ್ದಾಳೆ. ಮಧ್ಯರಾತ್ರಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಕೆಯ ರೂಮ್ಮೇಟ್ಗೆ ರಕ್ತ ವಾಸನೆ ಬಂದಿದೆ. ತಕ್ಷಣ ಎಚ್ಚರವಾಗಿದೆ. ಎದ್ದು ನೋಡುವಾಗ ಆಕೆ ನೋವಿನಿಂದ ಬಳಲುತ್ತಿದ್ದಳು, ಕೆಳಗಿರುವ ಹೊದಿಕೆ ಸಂಪೂರ್ಣ ರಕ್ತದಿಂದ ತುಂಬಿ ಹೋಗಿತ್ತು. ತಕ್ಷಣ ಸಹಾಯಕ್ಕೆ ಅಕ್ಕಪಕ್ಕ ರೂಮ್ನ ಸ್ನೇಹಿತರನ್ನು ಹಾಗೂ ವೈದ್ಯರ ಸಹಾಯವನ್ನು ಕೇಳುವಷ್ಟರಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.
ಇಲ್ಲಿ ಅಚ್ಚರಿಯ ವಿಚಾರವೊಂದು ಆಕೆಯ ಸ್ನೇಹಿತೆ ವೈದ್ಯರ ಬಳಿ ಹೇಳಿದ್ದಾಳೆ. ಏನೆಂದರೆ, ಆಕೆಗೆ ಇದು ಮೊದಲ ಹೇರಿಗೆ ಅಲ್ಲ, ಅವಳಿಗೆ ಈಗಾಗಲೇ ಒಂದು ಮಗು ಇದೆ, ಆದ್ದರಿಂದ ಅವಳು ತುಂಬಾ ಶಾಂತವಾಗಿ ಇದನ್ನು ನಿಭಾಯಿಸಿದ್ದಾಳೆ ಎಂದು ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾಳೆ. ಗರ್ಭಿಣಿ ಮಹಿಳೆಯನ್ನು ಸರಿಯಾದ ಆರೈಕೆಯಿಲ್ಲದೆ ವಸತಿ ನಿಲಯದಲ್ಲಿ ಬಿಟ್ಟಿದ್ದಕ್ಕಾಗಿ ವಿದ್ಯಾರ್ಥಿನಿಯ ಕುಟುಂಬವನ್ನು ವೈದ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ. SCMP ವರದಿ ಪ್ರಕಾರ, ವಿದ್ಯಾರ್ಥಿನಿಯನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆಯ ಮಗುವಿನ ಗಾತ್ರವನ್ನು ನೋಡಿ ಕೂಡ ಅಚ್ಚರಿಗೊಂಡಿದ್ದಾರೆ. ಗರ್ಭಾವಸ್ಥೆಯಲ್ಲಿ ವ್ಯಾಯಾಮದ ಕೊರತೆ ಮತ್ತು ಹೆಚ್ಚಿನ ಒತ್ತಡದಿಂದ ತಾಯಿ ತೀವ್ರ ನೋವು ಅನುಭವಿಸಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ನನ್ನ ಸ್ನೇಹಿತ ದುಬೈ ತಲುಪಿದ, ನಾನು ಮಾತ್ರ ಇನ್ನೂ ಬೆಂಗಳೂರು ಟ್ರಾಫಿಕ್‌ನಲ್ಲಿದ್ದೇನೆ, ಇದು ನಿಜವೇ?
ವಿದ್ಯಾರ್ಥಿನಿಯ ತನ್ನ ಅಂತಿಮ ಪರೀಕ್ಷೆಯ ಸಮಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. “ಪರೀಕ್ಷೆ ಬರೆದು ನಾನು ಆಸ್ಪತ್ರೆ ಹೋಗುವೇ ಎಂದು ನಿರ್ಧರಿಸಿದ್ದೆ. ಆದರೆ ನನ್ನ ಮಗು ಇಷ್ಟು ಬೇಗ ಹೊರಬರುತ್ತದೆ ಎಂಬುದನ್ನು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದ್ದಾಳೆ. “ಪರೀಕ್ಷೆಯ ಮೊದಲು ದಿನ ನನಗೆ ಹೊಟ್ಟೆ ನೋವು ಪ್ರಾರಂಭವಾಗಿತ್ತು, ಆದರೆ ಅದು ಸಾಮಾನ್ಯ ಎಂದುಕೊಂಡು ನಿದ್ರೆ ಮಾಡಲು ಹೋದೆ, ನನಗೆ ಇನ್ನು ಸಮಯವಿದೆ ಮತ್ತು ಬೆಳಿಗ್ಗೆ ಆಸ್ಪತ್ರೆಗೆ ಹೋಗಬಹುದು ಎಂದು ಅಂದುಕೊಂಡೆ . ಆದರೆ ನೋವು ತಡೆಯಲಾಗದೇ ಒದ್ದಾಡಿದೆ” ಎಂದು ಹೇಳಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಈಗ ಆರೋಗ್ಯವಾಗಿದ್ದು, ಇಬ್ಬರು ಚೇತರಿಕೆ ಕಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ