Viral Video : ಆಹ್ವಾನವಿಲ್ಲದೆ ಮದುವೆಯ ಊಟಕ್ಕೆ ಬಂದ ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಿದ ವಿಡಿಯೋ ವೈರಲ್ ಆಗಿದ್ದನ್ನು ಈಗಷ್ಟೇ ನೋಡಿದಿರಿ. ಆದರೆ ಇನ್ನೊಂದು ಪ್ರಕರಣದಲ್ಲಿ, ಇದಕ್ಕೆ ವಿರುದ್ಧವಾದ ಅಂದರೆ ಹೃದಯಕ್ಕೆ ಆಪ್ತವಾಗುವಂಥ ಘಟನೆ ಜರುಗಿದೆ. ಹಾಸ್ಟೆಲ್ನಲ್ಲಿ ವಾಸಿಸುತ್ತಿರುವ ಹುಡುಗನೊಬ್ಬ ಈ ಮದುವೆಗೆ ಬಂದು ವರನೊಂದಿಗೆ ಮಾತನಾಡುತ್ತ, ‘ಕ್ಷಮಿಸಿ ನಿಮ್ಮ ಹೆಸರು ನನಗೆ ಗೊತ್ತಿಲ್ಲ. ನಾನು ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದೇನೆ. ನೀವು ಆಹ್ವಾನಿಸದಿದ್ದರೂ ಉಚಿತವಾಗಿ ಊಟ ಮಾಡಲು ಬಂದಿದ್ದೇನೆ’ ಎನ್ನುತ್ತಾನೆ. ಪ್ರತ್ಯುತ್ತರವಾಗಿ ವರ, ‘ನೀವೂ ಊಟ ಮಾಡಿ, ಹಾಸ್ಟೆಲ್ನಲ್ಲಿರುವ ನಿಮ್ಮ ಸ್ನೇಹಿತರಿಗೂ ಊಟವನ್ನು ತೆಗೆದುಕೊಂಡು ಹೋಗಿ’ ಎನ್ನುತ್ತಾನೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಈ ವಿಡಿಯೋ ಟ್ವೀಟ್ ಮಾಡಿದ್ದು ಇದೀಗ ವೈರಲ್ ಆಗಿದೆ.
This is how it should be.
And not this ;https://t.co/OWIaq7zQWn
— theunreal.eth (@imsidz) December 1, 2022
ಇದು ಯಾವ ರಾಜ್ಯದ ವಿಡಿಯೋ ಎಂದು ತಿಳಿದುಬಂದಿಲ್ಲ. ಆದರೆ ಈ ಹುಡುಗ ಹಿಂದಿಯಲ್ಲಿ ಮಾತನಾಡುತ್ತಾನೆ. ತನಗೆ ಹಸಿವಾಗಿತ್ತು ಹಾಗಾಗಿ ಇಲ್ಲಿಗೆ ಬಂದೆ ಎಂದು ಹೇಳುತ್ತಾನೆ. ನನ್ನ ಈ ನಡೆವಳಿಕೆಗೆ ಕ್ಷಮಿಸಿ ಎಂದೂ ಕೇಳುತ್ತಾನೆ. ಆದರೆ ವರನಾದವನು ಅಷ್ಟೇ ವಿನಯದಿಂದ ನಿಮ್ಮ ಹಾಸ್ಟೆಲ್ ಸ್ನೇಹಿತರಿಗೂ ಊಟವನ್ನು ಪ್ಯಾಕ್ ಮಾಡಿಕೊಂಡು ಹೋಗಿ, ಅದರಲ್ಲೇನಿದೆ ಎನ್ನುತ್ತಾನೆ. ಈ ವಿಡಿಯೋ ಅತ್ಯಂತ ಹೃದಯಸ್ಪರ್ಶಿಯಾಗಿದೆ ಎನ್ನುತ್ತಿರುವ ನೆಟ್ಟಿಗರು ಹುಡುಗನ ಪ್ರಾಮಾಣಿಕತೆ ಮತ್ತು ವರನ ಆತಿಥ್ಯವನ್ನು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ : ‘ನನ್ನ ಮದುವೆಯಾಗುತ್ತೀಯಾ?’ ಆತ ಆಕೆಯನ್ನು ಕೇಳುವ ಮೊದಲೇ ಉಂಗುರ ನೀರುಪಾಲು!?
ಇದು ನಮ್ಮ ಭಾರತವೆಂದರೆ ಎಂದು ಹೆಮ್ಮೆ ಪಡುತ್ತಿದ್ದಾರೆ ಹಲವರು. ಅದಕ್ಕಾಗಿಯೇ ನಾನು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ ಎನ್ನುತ್ತಿದ್ದಾರೆ ಅನೇಕರು. ಈತನಕ ಈ ವಿಡಿಯೋ ಅನ್ನು 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನ ಮೆಚ್ಚಿದ್ದಾರೆ.
ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ ನೀಡಿದ ವಿಡಿಯೋ ಅನ್ನು ಈ ವಿಡಿಯೋ ಥ್ರೆಡ್ಗೆ ಟ್ವೀಟ್ ಮಾಡಿದ ನೆಟ್ಟಿಗರು ಈ ಎರಡೂ ನಡೆವಳಿಕೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ಏನೇ ಆಗಲಿ ಹಸಿವು ಎಂದು ಬಂದವರನ್ನು ಎಂದೂ ಅವಮಾನಿಸಬಾರದು. ಹಾಗೆಯೇ ಅಪರಿಚಿತರಾದರೂ ನಿಮ್ಮನ್ನು ಆದರದಿಂದ ಕಂಡವರನ್ನು ಎಂದೂ ಮರೆಯಬಾರದು.
ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:20 pm, Fri, 2 December 22