
ಪ್ರಸಕ್ತ ವರ್ಷದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಗಗನಕ್ಕೇರಿ ಹೊಸ ದಾಖಲೆಗಳನ್ನು ಬರೆದಿವೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಬಲ್ಗೇರಿಯಾದ ಪ್ರಸಿದ್ಧ ಭವಿಷ್ಯಗಾರ್ತಿ ಬಾಬಾ ವಂಗಾ ಹೆಸರಿನಲ್ಲಿ ಚಿನ್ನದ ಬೆಲೆಗೆ ಸಂಬಂಧಿಸಿದ ಶಾಕಿಂಗ್ ಭವಿಷ್ಯವೊಂದು ಸಖತ್ ವೈರಲ್ ಆಗುತ್ತಿದೆ. 2027ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 2.82 ಲಕ್ಷ ರೂ.ಕ್ಕೂ ಅಧಿಕವಾಗಲಿದೆ ಎಂಬುದು ಆ ವೈರಲ್ ಆಗಿದೆ. ಹಾಗಾದರೆ, ಈ ವೈರಲ್ ಸುದ್ದಿಯ ಹಿಂದೆ ನಿಜಾಂಶವಿದೆಯೇ? ಅಥವಾ ಇದು ಕೇವಲ ವಾಣಿಜ್ಯ ವಲಯದ ಕಟ್ಟುಕಥೆಯೆ? ಈ ಕುರಿತು ಕಮಾಡಿಟಿ ಹಾಗೂ ಬುಲಿಯನ್ ತಜ್ಞರ ಅಭಿಪ್ರಾಯವೇನು ಎಂಬ ಸಂಪೂರ್ಣ ವರದಿ ಇಲ್ಲಿದೆ.
ಈ ವರ್ಷದ ಆರಂಭದಲ್ಲಿ (ಜನವರಿ) 10 ಗ್ರಾಂ ಚಿನ್ನದ ಬೆಲೆ ಅಂದಾಜು 1.35 ಲಕ್ಷದಷ್ಟಿತ್ತು. ನಂತರ ಜನವರಿ 29 ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1.93 ಲಕ್ಷ ರೂ.ಗೆ ಏರಿಕೆಯಾಗಿ ಅಚ್ಚರಿ ಮೂಡಿಸಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಅಂದಾಜು 1.48 ಲಕ್ಷ ರೂ. ಸುತ್ತಮುತ್ತ ವಹಿವಾಟು ನಡೆಸುತ್ತಿದೆ. ಈ ಮಧ್ಯೆ, ಬಾಬಾ ವೆಂಗೆ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಭವಿಷ್ಯವಾಣಿಯ ಪ್ರಕಾರ, ಪ್ರಸ್ತುತ ಇರುವ 1.48 ಲಕ್ಷದ ಬೆಲೆಗಿಂತ ಸುಮಾರು 1.34 ಲಕ್ಷ ರೂ. ಹೆಚ್ಚಾಗಿ, ಅಂದರೆ ಹಿಂದಿನ ಸಾರ್ವಕಾಲಿಕ ಗರಿಷ್ಠ 1.93 ಲಕ್ಷಕ್ಕಿಂತಲೂ ಸುಮಾರು 90,000 ಹೆಚ್ಚು ಏರಿಕೆಯಾಗಿ 2027ರಲ್ಲಿ ಚಿನ್ನ 2.82 ಲಕ್ಷ ಗಡಿ ದಾಟಲಿದೆ ಎಂದು ಹೇಳಲಾಗಿದೆ.
ಆನ್‌ಲೈನ್ ವರದಿಗಳ ಪ್ರಕಾರ, 2027ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ತಲೆದೋರಲಿದ್ದು, ನಗದು ಹಣದ (Cash) ತೀವ್ರ ಕೊರತೆ ಎದುರಾಗಲಿದೆ. ಈ ಅನಿಶ್ಚಿತತೆಯ ನಡುವೆ ಹಳದಿ ಲೋಹದ ಬೆಲೆಯಲ್ಲಿ ಭಾರಿ ಜಿಗಿತ ಉಂಟಾಗಲಿದೆ ಎಂದು ಬಿಂಬಿಸಲಾಗಿದೆ. ಆದರೆ, ಬಾಬಾ ವೆಂಗೆ ಈ ರೀತಿ ಯಾವುದೇ ಅಧಿಕೃತ ಅಥವಾ ನೇರ ಭವಿಷ್ಯ ನುಡಿದಿರುವುದಕ್ಕೆ ಯಾವುದೇ ಬಲವಾದ ದಾಖಲೆಗಳಾಗಲಿ, ಲಿಖಿತ ಸಾಕ್ಷ್ಯಗಳಾಗಲಿ ಲಭ್ಯವಿಲ್ಲ. ಬಾಬಾ ವೆಂಗೆಯವರ ಅನೇಕ ಹಳೆಯ ಭವಿಷ್ಯಗಳು ನಿಜವಾಗಿದ್ದರೂ, ಚಿನ್ನದ ಬೆಲೆಯ ಕುರಿತು ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಈ ವರದಿಗಳು ಸಂಪೂರ್ಣವಾಗಿ ಊಹಾತ್ಮಕವಾಗಿವೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಪ್ರಸಿದ್ಧ ‘ಕೆಡಿಯಾ ಅಡ್ವೈಸರಿ’ಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕೆಡಿಯಾ ಅವರ ಪ್ರಕಾರ, ಹೂಡಿಕೆಯ ಉತ್ತಮ ಒಳಹರಿವು, ಜಾಗತಿಕ ರಾಜಕೀಯ-ಆರ್ಥಿಕ ಅನಿಶ್ಚಿತತೆಗಳು ಹಾಗೂ ಪೂರೈಕೆಯಲ್ಲಿನ ಕೊರತೆಯು ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸುಳಿವು ನೀಡುತ್ತದೆ. ವಿಶ್ವದ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿರುವುದು, ಇಟಿಎಫ್ (ETF) ಹೂಡಿಕೆಗಳು ಮತ್ತು ರೂಪಾಯಿ ಮೌಲ್ಯದಲ್ಲಿನ ಕುಸಿತವು ಚಿನ್ನಕ್ಕೆ ಬಲ ತುಂಬಲಿದೆ.
ಪ್ರಸಕ್ತ ವರ್ಷದ ಅಂತ್ಯಕ್ಕೆ ಅಥವಾ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1.80 ಲಕ್ಷದವರೆಗೆ ತಲುಪುವ ಸಾಧ್ಯತೆಯಿದೆ. ಇದು ಪ್ರಸ್ತುತ ಬೆಲೆಗಿಂದ ಸುಮಾರು 18% ಹೆಚ್ಚಳವನ್ನು ತೋರಿಸುತ್ತದೆ.
ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ
ಕೇವಲ ಚಿನ್ನ ಮಾತ್ರವಲ್ಲದೆ, ಬೆಳ್ಳಿಯ ಮೇಲಿನ ಹೂಡಿಕೆಯು ಅದ್ಭುತ ಲಾಭ ತರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಳ್ಳಿಯಲ್ಲಿ ಏರಿಳಿತಗಳು ಹೆಚ್ಚಿದ್ದರೂ, ಭವಿಷ್ಯದಲ್ಲಿ ಇದರ ಬೆಲೆ ಭಾರಿ ಜಿಗಿತ ಕಾಣಲಿದೆ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು (EV), ಪವರ್ ಇನ್‌ಫ್ರಾಸ್ಟ್ರಕ್ಚರ್ ಹಾಗೂ ಕ್ಲೀನ್ ಎನರ್ಜಿ ಕ್ಷೇತ್ರಗಳಲ್ಲಿ ಬೆಳ್ಳಿಯ ಬಳಕೆ ಅಪಾರವಾಗಿದೆ. ಆದರೆ ಗಣಿಗಳಿಂದ ಬೆಳ್ಳಿ ಪೂರೈಕೆಯನ್ನು ಹೆಚ್ಚಿಸಲು ಸೀಮಿತ ಅವಕಾಶವಿರುವುದರಿಂದ ಬೇಡಿಕೆ ತೀವ್ರವಾಗಿ ಹೆಚ್ಚಲಿದೆ. ಮುಂಬರುವ ದಿನಗಳಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಬರೋಬ್ಬರಿ 3 ಲಕ್ಷದವರೆಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಸುಮಾರು 28% ವರೆಗಿನ ಸಂಭಾವ್ಯ ಹೆಚ್ಚಳವನ್ನು ತೋರಿಸುತ್ತದೆ.
ಹಂತ ಹಂತವಾಗಿ ಹೂಡಿಕೆ ಮಾಡಿ: ಒಮ್ಮೆಲೆ ದೊಡ್ಡ ಮೊತ್ತವನ್ನು ಹಾಕುವ ಬದಲು, ಮಾರುಕಟ್ಟೆಯ ಏರಿಳಿತಗಳಿಗೆ ತಕ್ಕಂತೆ ಹಂತ ಹಂತವಾಗಿ ಹೂಡಿಕೆ ಮಾಡುವುದು ಸೂಕ್ತ.
ಸಾಲ ಮಾಡಿ ಹೂಡಿಕೆ ಬೇಡ: ಲಿವರೇಜ್ (ಉಧಾರ ಅಥವಾ ಸಾಲ ಪಡೆದು ಹೂಡಿಕೆ ಮಾಡುವುದು) ವಿಧಾನದಿಂದ ಕಡ್ಡಾಯವಾಗಿ ದೂರವಿರಿ.
ಬೆಳ್ಳಿಗೆ ಹೆಚ್ಚಿನ ಆದ್ಯತೆ: ಬುಲಿಯನ್ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸುವುದಾದರೆ, ಹೂಡಿಕೆಯಲ್ಲಿ ಚಿನ್ನಕ್ಕಿಂತ ಬೆಳ್ಳಿಯ ಪಾಲನ್ನು ಸ್ವಲ್ಪ ಹೆಚ್ಚಾಗಿ ಇಟ್ಟುಕೊಳ್ಳುವುದು ಹೆಚ್ಚು ಲಾಭದಾಯಕವಾಗಬಹುದು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Mon, 12 October 26