ಕುಡುಕರು ಅತಿಯಾಗಿ ಎಣ್ಣೆ ಹೊಡೆದ್ರೆ, ನಶೆಯಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ಕೂಡಾ ಅವರಿಗೆ ಇರೋದಿಲ್ಲ. ಇನ್ನೂ ಕುಡಿದು ಟೈಟ್ ಆದ್ರೆ ಅವರಿಗೆ ನೆಟ್ಟಗೆ ನೆಲದ ಮೇಲೆ ನಿಲ್ಲಲು ಕೂಡಾ ಕಷ್ಟಸಾಧ್ಯವಾಗುತ್ತದೆ. ಹೀಗೆ ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ತೂರಾಡುತ್ತಾ ಹೋಗುವ, ಸಾರ್ವಜನಿಕರಿಗೆ ತೊಂದರೆ ಕೊಡುವ ಕುಡುಕರನ್ನೂ ನೀವು ಕೂಡಾ ನೋಡಿರುತ್ತಿರಿ ಅಲ್ವಾ. ಇಂತಹ ಕುಡುಕರಿಗೆ ಇದೀಗ ಇಲ್ಲೊಂದು ಬಾರ್‌ನಲ್ಲಿ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಈ ಕುರಿತ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೆಲ ಸಮಯಗಳ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಇರುವ ರಚನಾ ಬಾರ್ & ರೆಸ್ಟೋರೆಂಟ್ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಾಗೂ ಬಾರ್‌ಗೆ ಬರುವ ಗ್ರಾಹಕರ ಹಿತ ದೃಷ್ಟಿಯಿಂದ ಉಚಿತ ವಾಹನ ವ್ಯವಸ್ಥೆಯ ಆಫರ್ ನೀಡಿತ್ತು. ಆಟೋದಲ್ಲಿ ಕುಡುಕರಿಗಾಗಿ ಇರುವ ಈ ಭರ್ಜರಿ ಆಫರ್ ಬಗ್ಗೆ ಬ್ಯಾನರ್ ಕೂಡಾ ಹಾಕಲಾಗಿತ್ತು. ಆಗ ಈ ಸುದ್ದಿ ಬಹಳ ವೈರಲ್ ಆಗಿತ್ತು. ಇದೀಗ ಈ ಕುರಿತ ಪೋಸ್ಟ್ ಒಂದು ಮತ್ತೊಮ್ಮೆ ವೈರಲ್ ಆಗುತ್ತಿದೆ.
ಈ ಪೋಸ್ಟ್ ಅನ್ನು Namma Kudla – Mangalore ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಟೈಟ್ ಆದ್ರೆ ಫ್ರೀ ಡ್ರಾಮ್ ಸರ್ವಿಸ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಫೋಟೋದಲ್ಲಿ ಆಟೋವೊಂದರಲ್ಲಿ ಬಾರ್ ಒಂದು ಉಚಿತ ವಾಹನ ವ್ಯವಸ್ಥೆಯ ಆಫರ್ ನೀಡಿರುವ ಬ್ಯಾನರ್ ಅಂಟಿಸಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಸ್ಕೂಲ್ನಲ್ಲಿ ದೆವ್ವ, ಮಕ್ಕಳ ಭಯ ಹೋಗಲಾಡಿಸಲು ಅಮಾವಾಸ್ಯೆ ರಾತ್ರಿಯಂದು ಶಾಲೆಯಲ್ಲಿ ಒಂಟಿಯಾಗಿ ಮಲಗಿದ ಮೇಷ್ಟ್ರು
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 600 ಕ್ಕೂ ಹೆಚ್ಚು ಲೈಕ್ಸ್ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್ ಇದಂತೂ ತುಂಬಾನೇ ಒಳ್ಳೆಯ ಸರ್ವಿಸ್ʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ನೆಟ್ಟಿಗರಂತೂ ಈ ಭರ್ಜರಿ ಆಫರ್ ಕಂಡು ಫುಲ್ ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Wed, 10 July 24