Trending : ‘ಪರಿಚಿತರು ಈಗ ಶತ್ರುಗಳಾಗುತ್ತಿದ್ದಾರೆ’; ರೂ. 25 ಕೋಟಿ ಗೆದ್ದ ಕೇರಳದ ಆಟೋಚಾಲಕನ ವ್ಯಥೆ
Lottery Winner : ‘ನನ್ನ ಮಗುವಿನ ಉಳಿತಾಯದ ಹುಂಡಿ ಒಡೆದು, ಆ ಹಣದಲ್ಲಿ ಲಾಟರಿ ಕೊಂಡುಕೊಂಡಿದ್ದೆ. ಇಷ್ಟೊಂದು ಭಾರೀ ಮೊತ್ತದ ಬಹುಮಾನ ಘೋಷಣೆಯಾದಾಗಿನಿಂದ ಮನಸಿಗೆ ಶಾಂತಿಯೇ ಇಲ್ಲವಾಗಿದೆ. ಈ ಬಹುಮಾನ ಬೇಡವಾಗಿತ್ತು’
Trending : ಅಲ್ಪನಿಗೆ ಅರ್ಧರಾತ್ರಿಯಲ್ಲಿ ಐಶ್ವರ್ಯ ಬಂದರೆ ಇನ್ನೇನಾಗುತ್ತದೆ? ಎಂದು ಅನೇಕ ಸಲ ಅನೇಕರ ಉದಾಹರಣೆ ಕೊಟ್ಟುಕೊಂಡು ಮಾತನಾಡಿಕೊಳ್ಳುತ್ತಿರುತ್ತೇವೆ. ಆದರೆ ಈ ಗಾದೆಯನ್ನು ಉಲ್ಟಾ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಅನೂಪ್ ಆಟೋ ರಿಕ್ಷಾ ಚಾಲಕ. ಕೆಲ ದಿನಗಳ ಹಿಂದೆ ಅವರಿಗೆ ರೂ. 25 ಕೋಟಿ ಲಾಟರಿ ಬಹುಮಾನ ಘೋಷಣೆಯಾಗಿದೆ. ಹೀಗೆ ಅನಿರೀಕ್ಷಿತವಾಗಿ ದೊರೆಯಲಿರುವ ಈ ಭಾರೀಮೊತ್ತದ ಸಂಗತಿಯಿಂದ ಎರಡು ದಿನ ಎಲ್ಲರಂತೆ ಖುಷಿಯಲ್ಲಿ ತೇಲಾಡಿದರೇನೋ ನಿಜ. ಆದರೆ ಈ ಬಹುಮಾನವೇ ಅವರನ್ನೀಗ ದೊಡ್ಡ ಸಂಕಷ್ಟಕ್ಕೆ ತಳ್ಳಿದೆ. ಆದ್ದರಿಂದ ಈ ಬಹುಮಾನವೇ ತನಗೆ ಬೇಡವಾಗಿತ್ತು. ಇದು ನನ್ನ ಮನಶಾಂತಿಯನ್ನು ಹಾಳುಮಾಡಿದೆ. ಯಾಕಾದರೂ ಈ ಲಾಟರಿ ಗೆದ್ದೆನೋ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ.
ಕೇರಳದ ತಿರುವನಂತಪುರಂನಿಂದ 12 ಕಿ.ಮೀ. ಅಂತರದಲ್ಲಿರುವ ಶ್ರೀಕರಿಯಂನಲ್ಲಿ ತನ್ನ ತಾಯಿ, ಹೆಂಡತಿ ಮಗುವಿನೊಂದಿಗೆ ತಮ್ಮ ಸ್ವಂತಮನೆಯಲ್ಲಿ ವಾಸವಾಗಿರುವ ಅನೂಪ್, ತಮ್ಮ ಮಗುವಿನ ಪಿಗ್ಗಿ ಬ್ಯಾಂಕ್ ಒಡೆದು, ಆ ಹಣದಿಂದ ಕೇರಳ ಸರ್ಕಾರದ ಮೆಗಾ ಓಣಂ ರಾಫೆಲ್ನಲ್ಲಿ ಸ್ಥಳೀಯ ಏಜೆಂಟ್ನಿಂದ ಲಾಟರಿ ಟಿಕೆಟ್ ಪಡೆದುಕೊಂಡಿದ್ದರು. ಅಚ್ಚರಿ ಎಂಬಂತೆ ಮೊದಲ ಬಹುಮಾನ ಅನೂಪ್ ಅವರಿಗೆ ಎಂದು ಘೋಷಣೆಯಾಗಿಬಿಟ್ಟಿತು. ಸಂತೋಷಕ್ಕೆ ಪಾರವೇ ಇಲ್ಲ! ಖುಷಿಯಲ್ಲಿ ತೇಲಾಡಿಬಿಟ್ಟರು.
ಆದರೆ, ನಂತರ ಅನೂಪ್ ಭಯಂಕರ ವಾಸ್ತವವನ್ನು ಎದುರಿಸಬೇಕಾಯಿತು. ಕೇವಲ ಐದು ದಿನಗಳಲ್ಲಿ ಅವರ ಎಲ್ಲ ಖುಷಿ ಕರಗಿ ಹೋಯಿತು. ‘ಹೌದು, ನಾನು ಮನಸಿನ ಶಾಂತಿಯನ್ನೇ ಕಳೆದುಕೊಂಡಿದ್ದೇನೆ. ನನ್ನ ಮನೆಯಲ್ಲಿ ನಾನು ವಾಸಿಸಲು ಸಾಧ್ಯವಾಗುತ್ತಿಲ್ಲ. ನಾನು ಗೆದ್ದಿರುವ ಈ ಭಾರೀ ಮೊತ್ತದ ಹಣದ ಮೇಲೆ ಜನ ಕಣ್ಣು ಹಾಕಿದ್ದಾರೆ. ತಮ್ಮ ಅಗತ್ಯಗಳಿಗಾಗಿ ಸಹಾಯ ಮಾಡಬೇಕೆಂದು ನನ್ನನ್ನು ಎಡೆಬಿಡದೆ ಕಾಡುತ್ತಿದ್ಧಾರೆ’ ಎಂದು ಸತ್ಯವನ್ನು ತೋಡಿಕೊಂಡಿದ್ದಾರೆ.
ತೆರಿಗೆ ಕಡಿತಗೊಂಡನಂತರ ರೂ. 15 ಕೋಟಿ ಹಣವು ಅನೂಪ್ ಅವರಿಗೆ ಸೇರಲಿದೆ. ‘ನಿಜಕ್ಕೂ ನಾನು ಈ ಲಾಟರಿ ಗೆಲ್ಲಬಾರದಿತ್ತು ಎಂದು ಅನ್ನಿಸುತ್ತಿದೆ. ಎಲ್ಲರಂತೆ ಈ ಗೆಲುವನ್ನು ಎರಡು ದಿನಗಳ ತನಕ ಆನಂದಿಸಿದೆ. ಆದರೆ ಈ ಆನಂದವೇ ಈಗ ಅಪಾಯದ ಬಾಗಿಲು ತೆರೆಯುತ್ತಿದೆ. ನಿಜಕ್ಕೂ ಇದರಿಂದ ಹೊರಬರಲಾಗುತ್ತಿಲ್ಲ. ಅದೆಷ್ಟೋ ಜನ ಸಹಾಯಕ್ಕಾಗಿ ದುಂಬಾಲು ಬಿದ್ದಿದ್ದಾರೆ’ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
‘ಬಹುಮಾನದ ಮೊತ್ತವನ್ನು ಏನು ಮಾಡಬೇಕೆಂದು ನಿರ್ಧರಿಸಿಲ್ಲ. ಅಷ್ಟಕ್ಕೂ ಈ ಹಣ ಇನ್ನೂ ನನ್ನ ಕೈತಲುಪಿಲ್ಲ. ಹಣ ಬಂದನಂತರ ಎರಡು ವರ್ಷಗಳ ತನಕ ಬ್ಯಾಂಕಿನಲ್ಲಿ ಇಡುತ್ತೇನೆ. ಆದರೆ ನನಗೆ ಇಷ್ಟೊಂದು ಮೊತ್ತದ ಬಹುಮಾನಬೇಡವಾಗಿತ್ತು. ಇದರ ಬದಲಾಗಿ ಸಣ್ಣ ಮೊತ್ತದ ಹಣ ಬಹುಮಾನದ ರೂಪದಲ್ಲಿ ಬಂದಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ತಮ್ಮ ತೊಳಲಾಟ ತೋಡಿಕೊಂಡಿದ್ದಾರೆ ಅನೂಪ್.
‘ನನಗೆ ಪರಿಚಯವಿದ್ದ ಅನೇಕರು ಈಗ ಶತ್ರುಗಳಾಗುವ ಹಂತಕ್ಕೆ ತಿರುಗುತ್ತಿದ್ದಾರೆ. ಅನೇಕರು ನನ್ನನ್ನು ಹುಡುಕಿಕೊಂಡು ಮನೆಗೆ ಬರುತ್ತಿರುವ ಕಾರಣ, ನೆರೆಹೊರೆಯವರು ಕೋಪಗೊಳ್ಳುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರೂ ಜನರು ನನ್ನನ್ನು ಗುರುತಿಸುತ್ತಿದ್ದಾರೆ, ನನ್ನ ಸುತ್ತಲೂ ಗುಂಪು ಸೇರುತ್ತಿದ್ದಾರೆ. ಒಟ್ಟಾರೆ ಮನಸಿನ ಶಾಂತಿಯೆಲ್ಲ ಮಾಯವಾಗಿದೆ’ ಎಂದು ಕಟುವಾಸ್ತವವನ್ನು ಹೇಳಿಕೊಂಡಿದ್ಧಾರೆ ಅನೂಪ್.
ಹೇಗಿದೆ ಬಹುಮಾನ ಮತ್ತು ವಾಸ್ತವದ ಪರಿಣಾಮ!
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:18 pm, Sat, 24 September 22