Viral : ಫ್ಲಿಪ್ಕಾರ್ಟ್ನಿಂದ ಲ್ಯಾಪ್‌ಟಾಪ್ ಬದಲಿಗೆ ಘಡಿ ಸಾಬೂನು ಪಡೆದ ಗ್ರಾಹಕ
Flipcart : ಆರ್ಡರ್ ಬಾಕ್ಸ್ ಓಪನ್ ಮಾಡದೆ ಡೆಲಿವರಿ ಏಜೆಂಟ್ಗೆ ಒಟಿಪಿ ಕೊಟ್ಟಿದ್ದು ನಿಮ್ಮದೇ ತಪ್ಪು. ಈ ವಿಷಯವಾಗಿ ನಾವು ಏನೂ ಸಹಾಯ ಮಾಡಲಾಗದು ಎಂದು ಫ್ಲಿಪ್ಕಾರ್ಟ್ ಕಸ್ಟಮರ್ ಸಪೋರ್ಟ್ ವಿಭಾಗವು ತನ್ನ ಗ್ರಾಹಕರಿಗೆ ಹೇಳಿದೆ.
Viral : ಏನೋ ಆರ್ಡರ್ ಮಾಡಿದರೆ ಇನ್ನೇನೋ ಸಾಮಾನು ಬಂದು ತಲುಪಿರುತ್ತದೆ. ಈಗಾಗಲೇ ಇಂಟರ್ನೆಟ್ನಲ್ಲಿ ಆನ್ಲೈನ್ ಶಾಪಿಂಗ್ನಲ್ಲಿ ಆಗುವ ಇಂಥ ಅಚಾತುರ್ಯಗಳ ಬಗ್ಗೆ ಸಾಕಷ್ಟು ಓದಿರುತ್ತೀರಿ. ಇತ್ತೀಚೆಗೆ ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಯುತ್ತಿರುವ ಸಂದರ್ಭದಲ್ಲಿ ಗ್ರಾಹಕರೊಬ್ಬರು ತಮ್ಮ ತಂದೆಗೆ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ಡೆಲಿವರಿ ಬಾಕ್ಸ್ ಸರಿಯಾದ ಸಮಯಕ್ಕೇನೋ ತಲುಪಿತು. ಆದರೆ ಒಳಗಿದ್ದದ್ದು ಲ್ಯಾಪ್ಟಾಪ್ನ ಬದಲಾಗಿ ಘಡಿ ಸಾಬೂನುಗಳು!
ಯಶಸ್ವಿ ಶರ್ಮಾ ಎನ್ನುವವರು ತಮ್ಮ ತಂದೆಗೆ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ತಲುಪಿದ್ದು ಸಾಬೂನುಗಳು. ಯಶಸ್ವಿ ಅವರ ತಂದೆಗೆ ಫ್ಲಿಪ್ಕಾರ್ಟ್ನ ಓಪನ್-ಬಾಕ್ಸ್ ಪರಿಕಲ್ಪನೆ ಬಗ್ಗೆ ತಿಳಿದಿರಲಿಲ್ಲ. (ಭಾರತೀಯರಿಗೆ ಈ ಪರಿಕಲ್ಪನೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ). ಓಪನ್ ಬಾಕ್ಸ್ ಕಾನ್ಸೆಪ್ಟ್ ಎಂದರೆ ಆರ್ಡರ್ ಮಾಡಿದ ವಸ್ತುವನ್ನು ಡೆಲಿವರಿ ಏಜೆಂಟ್ ಎದುರೇ ಪರಿಶೀಲಿಸಿ ನಂತರ ಒಟಿಪಿ ನೀಡಬೇಕು.
ಆದರೆ, ಪ್ರಿಪೇಯ್ಡ್ ಡೆಲಿವರಿಗಳಿಗೆ ಆರ್ಡರ್ ಪ್ಯಾಕ್ ಸ್ವೀಕರಿಸಿದ ನಂತರ ಒಟಿಪಿ ಕೊಡಬೇಕೆಂದು ಯಶಸ್ವಿ ಅವರ ತಂದೆ ಭಾವಿಸಿದರು. ಆದ್ದರಿಂದ ಡೆಲಿವರಿ ಏಜೆಂಟ್ ಆರ್ಡರ್ ಬಾಕ್ಸ್ ಕೊಡುತ್ತಿದ್ದಂತೆ ಅವರು ಒಟಿಪಿ ಕೊಟ್ಟುಬಿಟ್ಟರು. ಈ ವಿಷಯವಾಗಿ ಕಸ್ಟಮರ್ ಸಪೋರ್ಟ್ ವಿಭಾಗಕ್ಕೆ ಯಶಸ್ವಿ ದೂರು ಸಲ್ಲಿಸಿದಾಗ, ಆರ್ಡರ್ ಬಾಕ್ಸ್ ತೆರೆಯದೆ ಒಟಿಪಿ ಹಂಚಿಕೊಂಡಿದ್ದು ನಿಮ್ಮ ತಂದೆಯದೇ ತಪ್ಪು ಎಂದು ಆರೋಪಿಸಿದರು. ಆದರೆ ಡೆಲಿವರಿ ಏಜೆಂಟ್ ಈ ಬಾಕ್ಸ್ ತಲುಪಿಸುವ ವೇಳೆ ಸೆರೆಯಾದ ಸಿಸಿಟಿವಿ ದೃಶ್ಯಗಳ ಸಾಕ್ಷಿ ನನ್ನ ಬಳಿ ಇದೆ ಎಂದಿದ್ದಾರೆ ಯಶಸ್ವಿ.
ಈ ಎಲ್ಲ ವಿಷಯವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಈಗ ನೀವು ಆರ್ಡರ್ ಮಾಡಿದ ವಸ್ತು ನಿಮ್ಮನ್ನು ತಲುಪಲಾರದು. ಏಕೆಂದರೆ ಬಾಕ್ಸ್ನೊಳಗೆ ಲ್ಯಾಪ್‌ಟಾಪ್ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನೀವು ಡೆಲಿವರಿ ಏಜೆಂಟ್ಗೆ ಒಟಿಪಿ ನೀಡಬೇಕಿತ್ತು. ಈ ವಿಷಯವನ್ನು ಮತ್ತೆ ಎಳೆದಾಡುವಲ್ಲಿ ಅರ್ಥವಿಲ್ಲ, ಇದನ್ನು ಇಲ್ಲಿಗೆ ಮುಗಿಸಲಾಗುವುದು’ ಎಂದು ಕಸ್ಟಮರ್ ಸಪೋರ್ಟ್ ವಿಭಾಗವು ಉತ್ತರಿಸಿದೆ.
‘ನನ್ನ ತಂದೆಯದೇ ತಪ್ಪು ಎಂದು ಫ್ಲಿಪ್ಕಾರ್ಟ್ ವಾದಿಸುತ್ತಿದೆ. ಆದರೆ ಡೆಲಿವರಿ ಏಜೆಂಟ್ ಓಪನ್ ಬಾಕ್ಸ್ ಪರಿಕಲ್ಪನೆಯ ಬಗ್ಗೆ ಮೊದಲೇ ಯಾಕೆ ನನ್ನ ತಂದೆಗೆ ತಿಳಿಸಲಿಲ್ಲ? ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಮೊದಲು ಕೊನೆಯ ಪ್ರಯತ್ನವೆಂಬಂತೆ ಇಲ್ಲಿ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ಮಧ್ಯಮ ವರ್ಗದ ಭಾರತೀಯರಿಗೆ ಇಷ್ಟು ಮೌಲ್ಯದ ಲ್ಯಾಪ್‌ಟಾಪ್ ಖರೀದಿಯಿಂದ ಉಂಟಾದ ನಷ್ಟವನ್ನು ಸುಲಭವಾಗಿ ಭರಿಸಿಕೊಳ್ಳಲಾಗದು.’ ಎಂದು ಯಶಸ್ವಿ ಈ ನೋಟ್ನಲ್ಲಿ ಬರೆದಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:05 pm, Tue, 27 September 22