Viral Video : ಇತ್ತೀಚೆಗಷ್ಟೇ ಜಗತ್ತಿನ ಅತೀ ಹಿರಿಯ ವೈದ್ಯರೊಬ್ಬರು ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಮತ್ತೊಬ್ಬರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅಮೆರಿಕದ ಡೆವನ್ಪೋರ್ಟ್ ಮೂಲದ ಡೆಲ್ಟನ್ ಒಂದು ನಿಮಿಷದಲ್ಲಿ ಅತೀವೇಗವಾಗಿ ಚಪ್ಪಾಳೆ ತಟ್ಟುವ ಕೌಶಲದಿಂದ ಜಗತ್ತಿನ ಗಮನ ಸೆಳೆದಿದ್ದಾರೆ. 20 ವರ್ಷದ ಇವರು ಒಂದು ನಿಮಿಷದಲ್ಲಿ 1,140 ಸಲ ಚಪ್ಪಾಳೆ ತಟ್ಟಿದ್ದಾರೆ. ಸೆಕೆಂಡಿನ ಲೆಕ್ಕದಲ್ಲಾದರೆ, ಒಂದು ಸೆಕೆಂಡಿಗೆ 19 ಬಾರಿ ಚಪ್ಪಾಳೆ.
ಈ ಹಿಂದೆ ನಿರ್ಮಿಸಿದ್ದ ಇದೇ ಕೌಶಲದ ದಾಖಲೆಯನ್ನು 37 ಚಪ್ಪಾಳೆಗಳ ಅಂತರದಲ್ಲಿ ಮುರಿದಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ, 2022ರ ಮಾರ್ಚ್ 12ರಂದು ಅಮೆರಿಕದ ಇಲಿನಾಯ್ಸ್ನ ಜೆನೆಸಿಯೋದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಡೆಲ್ಟನ್ ಚಪ್ಪಾಳೆಗೆ ಮನಸೋತು ಇದನ್ನೇ ಕೌಶಲವನ್ನಾಗಿಸಿಕೊಂಡಿದ್ದರು.
‘ಶಾಲಾದಿನಗಳಲ್ಲಿ ಬಾರಿಸುತ್ತಿದ್ದ ಚಪ್ಪಾಳೆ ನನ್ನನ್ನು ಅತಿಯಾಗಿ ಸೆಳೆಯಿತು. ಹೀಗೇ ನನ್ನಷ್ಟಕ್ಕೆ ನಾನು ಚಪ್ಪಾಳೆ ಬಾರಿಸುತ್ತ ಅಭ್ಯಾಸ ಮಾಡಿದೆ. ಕ್ರಮೇಣ ಅದೊಂದು ಕಲೆಯಂತೆ ಭಾಸವಾಯಿತು. ಹೀಗೆ ನಾನು ಈ ಕಲೆಗೆ ಆಕರ್ಷಿತನಾದೆ. ಕ್ರಮೇಣ ಪರಿಣತಿ ಸಾಧಿಸತೊಡಗಿದೆ’ ಎಂದಿದ್ದಾರೆ ಡೆಲ್ಟನ್.
ಕಲೆ ಮತ್ತು ಪ್ರತಿಭೆಯ ಪ್ರಯಾಣ ಹೀಗಿರುತ್ತದೆ. ಅದು ಹೊರಗಿನಿಂದ ಬರುವಂಥದ್ದಲ್ಲ. ನಿಮ್ಮೊಳಗಿನಿಂದಲೇ ಒಸರುವಂಥದ್ದು. ಯಾವುದು ನಿಮ್ಮನ್ನು ಸೆಳೆಯುತ್ತದೆ ಎನ್ನುವುದು ನಿಮಗಷ್ಟೇ ಗೊತ್ತಿರಲು ಸಾಧ್ಯ. ಅದನ್ನು ಧ್ಯಾನಿಸಿದರೆ, ಪರಿಶ್ರಮ ಹಾಕಿದರೆ ಖಂಡಿತ ಅದು ಒಂದಿಲ್ಲಾ ಒಂದು ದಿನ ನಿಮ್ಮನ್ನು ಎಲ್ಲರೆದುರು ಹೀಗೆ ಎತ್ತರದಲ್ಲಿ ನಿಲ್ಲಿಸುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:16 pm, Mon, 7 November 22