ಸ್ವೀಟ್​ ತರೋಕೆ ಹೋಗ್ತಿದ್ದೀನಿ ಎಂದು ಕೊರಳಿಗೆ ಬೋರ್ಡ್​ ಹಾಕಿಕೊಂಡ ಭೂಪ; ಪೊಲೀಸರು ಎದುರಾದಾಗ ಪ್ರತಿಕ್ರಿಯೆ ಹೇಗಿತ್ತು ನೋಡಿ

ಲಾಕ್​ಡೌನ್​ ಸಮಯದಲ್ಲಿ ಸ್ವೀಟ್​ ತಿನ್ನಬೇಕೆಂಬ ಬಯಕೆಯಾದ ಕಾರಣ ವ್ಯಕ್ತಿಯೊಬ್ಬ ಮನೆಯಿಂದ ಆಚೆ ಬಂದಿದ್ದಾನೆ. ಅಷ್ಟೇ ಅಲ್ಲದೇ ಪೊಲೀಸರು ಹೊಡೆಯಲು ಬಂದರೆ ಕಾರಣ ಹೇಳಲು ಸಲೀಸಾಗಲಿ ಎಂಬ ಕಾರಣಕ್ಕೆ ಕೊರಳಿಗೆ ಬೋರ್ಡ್​ ಕಟ್ಟಿಕೊಂಡು ಬಂದು ಪೊಲೀಸರೇ ಕಣ್ ಕಣ್ ಬಿಡುವಂತೆ ಮಾಡಿದ್ದಾನೆ.

  • Updated On - 4:06 pm, Tue, 18 May 21
ಸ್ವೀಟ್​ ತರೋಕೆ ಹೋಗ್ತಿದ್ದೀನಿ ಎಂದು ಕೊರಳಿಗೆ ಬೋರ್ಡ್​ ಹಾಕಿಕೊಂಡ ಭೂಪ; ಪೊಲೀಸರು ಎದುರಾದಾಗ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸ್ವೀಟ್​ ತರಲು ಹೊರಟಿದ್ದವನನ್ನು ತಡೆದ ಪೊಲೀಸರು

ಕೊರೊನಾ ಬಂದ ನಂತರ ಜನರನ್ನೆಲ್ಲಾ ಒತ್ತಾಯಪೂರ್ವಕವಾಗಿ ಮನೆಯಲ್ಲಿ ಕಟ್ಟಿಹಾಕಿದಂತಾಗಿದೆ. ಕಳೆದ ವರ್ಷ ಮನೆಯಲ್ಲಿ ಕೂತು ಕೂತು ಸಾಕಾಗಿ ಇನ್ನೇನು ಹೊರಬಂದೆವೆನ್ನುವಷ್ಟರಲ್ಲಿ ಎರಡನೇ ಅಲೆ ಬಂದು ಮನೆ ಬಾಗಿಲುಗಳನ್ನು ಮುಚ್ಚಿಸುತ್ತಿದೆ. ಸೋಂಕು ಹರಡದಂತೆ ತಪ್ಪಿಸಲು ಇದಕ್ಕಿಂತ ಪರಿಣಾಮ ಮಾರ್ಗ ಬೇರೊಂದಿಲ್ಲ ಎಂಬಂತೆ ಸರ್ಕಾರವೂ ಲಾಕ್​ಡೌನ್ ಮೊರೆ ಹೋಗಿದೆ. ಅಲ್ಲದೇ, ಅನಾವಶ್ಯಕವಾಗಿ ಹೊರಬರುವವರಿಗೆ ಲಾಠಿ ರುಚಿ ತಿನ್ನಿಸುವ ಮೂಲಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಷ್ಟಾದರೂ ಕೆಲವೆಡೆ ಜನರು ಮಾತ್ರ ಏನಾದರೊಂದು ನೆಪ ಹೇಳಿ ಮನೆಯಿಂದ ಆಚೆ ಬರುವುದಕ್ಕೆ ಕಾದುಕುಳಿತಿರುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

ಲಾಕ್​ಡೌನ್​ ಸಮಯದಲ್ಲಿ ಸ್ವೀಟ್​ ತಿನ್ನಬೇಕೆಂಬ ಬಯಕೆಯಾದ ಕಾರಣ ವ್ಯಕ್ತಿಯೊಬ್ಬ ಮನೆಯಿಂದ ಆಚೆ ಬಂದಿದ್ದಾನೆ. ಅಷ್ಟೇ ಅಲ್ಲದೇ ಪೊಲೀಸರು ಹೊಡೆಯಲು ಬಂದರೆ ಕಾರಣ ಹೇಳಲು ಸಲೀಸಾಗಲಿ ಎಂಬ ಕಾರಣಕ್ಕೆ ಕೊರಳಿಗೆ ಬೋರ್ಡ್​ ಕಟ್ಟಿಕೊಂಡು ಬಂದು ಪೊಲೀಸರೇ ಕಣ್ ಕಣ್ ಬಿಡುವಂತೆ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಜನ ಈತನ ಅತಿ ಬುದ್ಧಿವಂತಿಕೆ ಕಂಡು ನಗುತ್ತಿದ್ದಾರೆ.

ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ವಿಡಿಯೋದಲ್ಲಿ ಕಾಣುವ ಹಳದಿ ಬಣ್ಣದ ಅಂಗಿ ತೊಟ್ಟ ವ್ಯಕ್ತಿ ಸಿಹಿ ತಿನಿಸು ಕೊಳ್ಳಲು ಮನೆಯಿಂದ ಆಚೆ ಬಂದಿದ್ದಾನೆ. ಪಶ್ಚಿಮ ಬಂಗಾಳದಲ್ಲಿ ಬೆಳಗ್ಗೆ 10ರಿಂದ ಸಂಜೆಯ 5ರ ತನಕ ಸಿಹಿ ತಿನಿಸುಗಳ ಮಾರಾಟಕ್ಕೆ ಅವಕಾಶವಿದ್ದು, ಬಂಗಾಳಿಗರಲ್ಲಿ ಸಿಹಿ ತಿನಿಸು ಪ್ರಿಯರೂ ಹೆಚ್ಚಿರುವ ಕಾರಣ ಈ ವ್ಯಕ್ತಿ ಸ್ವೀಟ್ ಸ್ಟಾಲ್​ ಕಡೆ ಹೊರಟಿದ್ದಾನೆ. ಆದರೆ, ಈ ಮಹಾಶಯ ಸುಮ್ಮನೇ ಹೋಗದೆ ಕೊರಳಿಗೆ ಬೋರ್ಡ್​ ನೇತುಹಾಕಿಕೊಂಡು ಹೋಗಿರುವುದೇ ಇಷ್ಟೆಲ್ಲಾ ಸುದ್ದಿಗೆ ಕಾರಣವಾಗಿದೆ.

ದಾರಿಯಲ್ಲಿ ಹೋಗುವಾಗ ಎದುರು ಸಿಕ್ಕ ಪೊಲೀಸರು ಆತನನ್ನು ಸಹಜವಾಗಿ ವಿಚಾರಿಸಿದ್ದಾರೆ. ತಕ್ಷಣ ಆತ ಕತ್ತಿಗೆ ಕಟ್ಟಿಕೊಂಡಿದ್ದ ಬೋರ್ಡನ್ನು ತಿರುಗಿಸಿ ಪೊಲೀಸರಿಗೆ ತೋರಿಸಿ ಸ್ವೀಟ್ ಕೊಳ್ಳಲು ಹೊರಟಿದ್ದೇನೆ ಎಂದಿದ್ದಾನೆ. ಪೊಲೀಸರಿಗೆ ಇದನ್ನು ನೋಡಿ ನಗಬೇಕೋ, ಸಿಟ್ಟು ಮಾಡಿಕೊಳ್ಳಬೇಕೋ ಎಂಬಂತಾಗಿ ಜೋರು ದನಿಯಲ್ಲಿ ಗದರಿಸಿ ಕಳುಹಿಸಿದ್ದಾರೆ. ಸಿಹಿ ತಿನಿಸು ಕೊಳ್ಳಲು ಹೋಗುತ್ತಿದ್ದೇನೆ ಎಂದು ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದ ಈ ಫಲಕವನ್ನು ಹಾಗೂ ಅದನ್ನು ಕೊರಳಿಗೆ ಕಟ್ಟಿಕೊಂಡ ಆತನ ಚಾಣಾಕ್ಷತನವನ್ನು ಕಂಡು ನೆಟ್ಟಿಗರು ಬಿದ್ದುಬಿದ್ದು ನಕ್ಕಿದ್ದಾರೆ.

(Man goes out to buy sweets with board around his neck amid lockdown then what happened watch funny viral video)

ಇದನ್ನೂ ಓದಿ:
ಒಂದು ಬೈಕ್​, ಆರು ಜನ, ಸಕುಟುಂಬ ಸಮೇತರಾಗಿ ಮದುವೆಗೆ ಪಯಣ; ಚಾಲಕನಿಗೆ ನಡು ರಸ್ತೆಯಲ್ಲೇ ಕೈ ಮುಗಿದ ಪೊಲೀಸರು