Uber : ನೋಯ್ಡಾ ಮೂಲದ ವ್ಯಕ್ತಿಯೊಬ್ಬರು ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್ ವೇನಲ್ಲಿ ತಮ್ಮ ಮನೆಗೆ ತೆರಳುವಾಗ ಊಬರ್ ಕ್ಯಾಬ್ ಬುಕ್ ಮಾಡಿದ್ಧಾರೆ. ಆದರೆ ಪಾವತಿಸಬೇಕಾದ ಬಿಲ್ ನೋಡಿ ಗಾಬರಿಗೆ ಒಳಗಾಗಿದ್ದಾರೆ. ಅವರು ಪ್ರಯಾಣಿಸಿದ್ದು ಕೇವಲ 45 ಕಿ.ಮೀ. ಆದರೆ ಬಂದ ಬಿಲ್ ರೂ. 2,935! ಕೊರೋನಾ ನಂತರ ಬಹುಶಃ ನೀವೆಲ್ಲ ಗಮನಿಸಿರುತ್ತೀರಿ. ಕ್ಯಾಬ್ಗಳ ಬೆಲೆ ದುಬಾರಿಯಾಗಿದೆ. ಅದರಲ್ಲೂ ಊಬರ್! ಅನುಕೂಲಕ್ಕೆ, ಅನಿವಾರ್ಯಕ್ಕೆ, ಅವಸರಕ್ಕೆ ಪ್ರಯಾಣಿಕರು ಇಷ್ಟೊಂದು ಹಣ ತೆರುತ್ತ ಒದ್ದಾಡುವಂಥ ಸನ್ನಿವೇಶ ಎಲ್ಲೆಡೆಯೂ ಹೆಚ್ಚುತ್ತಿದೆ. ಆದರೂ ಪ್ರಯಾಣಿಕರು ಕೊರಗುತ್ತಲೇ ಪ್ರಯಾಣಿಸುತ್ತಿದ್ದಾರೆ. ತಮ್ಮ ಆಯ್ಕೆಗೆ ತಕ್ಕಂತೆ ಬೆಲೆ ತೆರುವುದು ಅನಿವಾರ್ಯ ಎನ್ನುವುದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
‘ಆಗಸ್ಟ್ 5ರಂದು ದೆಹಲಿ ವಿಮಾನದಿಂದ ನೋಯ್ಡಾದಲ್ಲಿರುವ ನನ್ನ ಮನೆಗೆ ಸುಮಾರು 45 ಕಿ.ಮೀ ಪ್ರಯಾಣಕ್ಕೆ ರೂ. 2,935 ಬಿಲ್ ಪಾವತಿಸಬೇಕಾಯಿತು. ನಿಗದಿಯಾದ ಬಿಲ್ ರೂ. 147.39 ಮಾತ್ರ ಇತ್ತು. @Uber_India ದಂಥ ಕೆಟ್ಟ ಸೇವೆಗಳಿಗೆ ಸಾರ್ವಜನಿಕರು ಮೊರೆ ಹೋಗುವುದನ್ನು ದ್ವೇಷಿಸುತ್ತೇನೆ. ಆದರೆ ಏನು ಮಾಡುವುದು ನನಗೆ ಬೇರೆ ಆಯ್ಕೆಯೇ ಇಲ್ಲ. ಇನ್ನು ಪಿಕ್-ಅಪ್ ಮತ್ತು ಡ್ರಾಪ್ ಮಾಡುವ ಸ್ಥಳಗಳ ವಿಷಯದಲ್ಲಿಯೂ ಅಷ್ಟೇ ಸಮಸ್ಯೆಯಾಗುತ್ತಿದೆ. ದಯವಿಟ್ಟು ಈ ಅವ್ಯವಸ್ಥೆಯನ್ನು ಸರಿಪಡಿಸಿ, ಹೆಚ್ಚುವರಿ ಮೊತ್ತವನ್ನು ಮರಳಿಸಿ. ದೂರುಗಳ ಮೂಲಕ ಪರಿಹಾರ ಕಾರ್ಯವಿಧಾನವನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ವಹಿಸಿ’ ಎಂದು ಪ್ರಯಾಣಿಕ ದೇವ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ಧಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಊಬರ್ ಇಂಡಿಯಾ, ‘ಈ ಪ್ರಕರಣದ ಕುರಿತು ತನಿಖೆ ಮಾಡಲಾಗುತ್ತಿದೆ’ ಎಂದು ಉತ್ತರಿಸಿದೆ.
ಈ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಮತ್ತೊಬ್ಬ ಪ್ರಯಾಣಿಕರು, ‘ಒಮ್ಮೆ ನೋಯ್ಡಾಕ್ಕೆ ಪ್ರಯಾಣಿಸಲೆಂದು ಬುಕ್ ಮಾಡಿದಾಗ ತೋರಿಸಿದ ಮೊತ್ತ ರೂ. 1,500. ಆದರೆ ಕೊನೆಗೆ ಅವರು ಬಿಲ್ ಪಾವತಿಸಲು ಕೇಳಿದ್ದು ಮೂರರಿಂದ ಮೂರೂವರೆ ಸಾವಿರ ರೂಪಾಯಿ. ನಾನೂ ಕೂಡ ಮರುಪಾವತಿ ಮಾಡಲು ಕೇಳಿಕೊಂಡಿದ್ದೇನೆ.’ ಎಂದಿದ್ದಾರೆ.
ಆಫೀಸಿಗೆ ತಲುಪುವ ಮತ್ತು ಮನೆಗೆ ಮರಳುವ ಪೀಕ್ ಅವರ್ನಲ್ಲಿ ಊಬರ್ನವರು ಹೀಗೆ ದರ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇಂಧನದ ಬೆಲೆ ಏರಿಕೆಯ ಪ್ರಭಾವ ಮತ್ತು ತನ್ನ ಡ್ರೈವರ್ಗಳನ್ನು ಉಳಿಸಿಕೊಳ್ಳಲು ಈ ಹಿಂದೆ ಊಬರ್ ಹೀಗೆ ದರ ಹೆಚ್ಚಳ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:48 pm, Wed, 17 August 22