ಸಮೋಸಾದಲ್ಲಿ ಹಳದಿ ಪ್ಲಾಸ್ಟಿಕ್ ಚೂರು ಪತ್ತೆ, ಟ್ವೀಟ್ಗೆ ಪ್ರತಿಕ್ರಿಯಿಸಿದ ಐಆರ್ಸಿಟಿಸಿ
IRCTC : ‘ಎಂಥ ಶುಚಿಯಾದ ಆಹಾರವನ್ನು ವಿತರಿಸುತ್ತಿದ್ದೀರಿ ಐಆರ್ಸಿಟಿಸಿಯಿಂದ’ ಪ್ರಯಾಣಿಕರ ವ್ಯಂಗ್ಯದ ಟ್ವೀಟ್ಗೆ ಐಆರ್ಸಿಟಿಸಿ ಪ್ರತಿಕ್ರಿಯಿಸಿ ವಿಷಾದ ವ್ಯಕ್ತಪಡಿಸಿದೆ. ನೆಟ್ಟಿಗರಂತೂ ಐಆರ್ಸಿಟಿಸಿಯ ಕಳಪೆ ಸೇವೆಗಳ ಬಗ್ಗೆ ಕಿಡಿ ಕಾರಿದ್ದಾರೆ.
Viral : ರೈಲು ಪ್ರಯಾಣಿಕರು ಸಾಮಾನ್ಯವಾಗಿ ಭಾರತೀಯ ರೈಲುಗಳ 2 ಟಯೆರ್ ಮತ್ತು 3 ಟಯೆರ್ ಕಂಪಾರ್ಟ್ಮೆಂಟುಗಳಲ್ಲಿ ಪೂರೈಸುವ ಆಹಾರದ ಗುಣಮಟ್ಟ, ಒದಗಿಸುವ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು ಈಗ ಬಹಳಷ್ಟು ಸುಲಭವಾಗಿದೆ. ಟಿಕೆಟ್, ಆಹಾರ, ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುವ ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಗೆ ನೇರ ಟ್ಯಾಗ್ ಮಾಡಿ ಟ್ವೀಟ್ ಮಾಡಿಬಿಟ್ಟರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ (!?) ಬಾಂದ್ರಾಗೆ ಹೋಗುವ ಲಕ್ನೋ ವೀಕ್ಲಿ ಎಕ್ಸ್‌ಪ್ರೆಸ್‌ನಲ್ಲಿ ಇತ್ತೀಚೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಖರೀದಿಸಿದ ಸಮೋಸಾದಲ್ಲಿ ಹಳದಿ ಪ್ಲಾಸ್ಟಿಕ್ ಚೂರು ಪತ್ತೆಯಾಗಿದೆ. ತಕ್ಷಣವೇ ಅವರು ಅದರ ಫೋಟೋ ತೆಗೆದು ಟ್ವಿಟರ್ಗೆ ಅಪ್ಲೋಡ್ ಮಾಡಿದ್ದಾರೆ. ಪ್ರತಿಯಾಗಿ ಐಆರ್ಸಿಟಿಸಿ ಪ್ರತಿಕ್ರಿಯಿಸಿದೆ.
ಅಪ್ಲೋಡ್ ಮಾಡಿರುವ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆ ಹಳದಿ ತುಂಡು ಕೆಚಪ್ ಅಥವಾ ಸಾಸ್ನ ಪ್ಲಾಸ್ಟಿಕ್ ಸ್ಯಾಚೆಟ್ ತುಂಡಿನಂತೆ ಕಾಣುತ್ತದೆ. ‘ಲಕ್ನೋ ವೀಕ್ಲಿ ಎಕ್ಸ್ಪ್ರೆಸ್. ರೈಲು ಸಂಖ್ಯೆ 20921, ಬಾಂದ್ರಾದಿಂದ ಅಕ್ಟೋಬರ್ 8, 2022ರಂದು ಪ್ರಯಾಣ ಆರಂಭಿಸಿದೆ. ಮರುದಿನ ಅಂದರೆ ಅಕ್ಟೋಬರ್ 9ರಂದು ಬೆಳಗ್ಗೆ 10.15ಕ್ಕೆ ಐಆರ್ಸಿಟಿಸಿಯಿಂದ ಸಮೋಸಾ ಖರೀದಿಸಿದೆ. ಎಂಥ ಶುಚಿಯಾದ ತಿಂಡಿಯನ್ನು ವಿತರಿಸುತ್ತಿದ್ದೀರಿ ಐಆರ್ಸಿಟಿಯಿಂದ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ ಈ ಪ್ರಯಾಣಿಕರು. ಈ ಪೋಸ್ಟ್ ಅನ್ನು ಫಾಲೋಅಪ್ ಮಾಡುತ್ತಿರುವ ಟ್ವಿಟರ್ ಖಾತೆದಾರರು ಐಆರ್ಸಿಟಿಸಿಯನ್ನು ಟೀಕಿಸುತ್ತಿದ್ದಾರೆ.
What a hygienic foods supplying by the Pantry provided by IRCTC…????
— Aji Kumar (@AjiKuma41136391) October 9, 2022
ಇದನ್ನು ಗಮನಿಸಿದ ಐಆರ್ಸಿಟಿಸಿ, ‘ಸರ್, ಅನಾನುಕೂಲತೆಯಿಂದ ಹೀಗಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ಪಿಎನ್ಆರ್ ಮತ್ತು ಮೊಬೈಲ್ ನಂಬರನ್ನು ಮೆಸೇಜ್ ಮಾಡಿ’ ಎಂದು ಪ್ರತಿಕ್ರಿಯಿಸಿದೆ.
ಭಾರತೀಯ ರೈಲುಗಳಲ್ಲಿ ಟಿಕೆಟ್ ವ್ಯವಸ್ಥೆ, ಆಹಾರ ಪೂರೈಕೆ ಮತ್ತು ಇತರೇ ಸೇವೆಗಳ ಗುಣಮಟ್ಟದಲ್ಲಿ ಕುಸಿತ ಉಂಟಾಗುತ್ತಿರುವ ಬಗ್ಗೆ ನೆಟ್ಟಿಗರು ಈ ನೆಪದಲ್ಲಿ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಟಿಕೇಟ್ ಕನ್ಫರ್ಮೇಷನ್ ನಿಂದ ಹಿಡಿದು ಎಲ್ಲಾ ಸೇವೆಗಳೂ ದಿನದಿಂದ ದಿನಕ್ಕೆ ಹದಗೆಡುತ್ತಿವೆ. ಮುಖ್ಯವಾಗಿ ಎಲ್ಲದಕ್ಕೂ ಶುಲ್ಕ ಹೇರುತ್ತಿದ್ದಾರೆ. ಬಡವರ ಪರಿಸ್ಥಿತಿ ಸರ್ಕಾರಕ್ಕೆ ಅರ್ಥವಾಗುವುದಿಲ್ಲ. ಭಾರತವನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಸುಲಿಗೆ ನಡೆಯುತ್ತಿದೆ’ ಎಂದಿದ್ದಾರೆ ಒಬ್ಬ ಖಾತೆದಾರರು.
‘ಇದೆಲ್ಲವೂ ತೋರಿಕೆಯ ಪ್ರದರ್ಶನ ಮತ್ತು ವ್ಯಾಪಾರ. ನಿಜಕ್ಕೂ ಐಆರ್ಸಿಟಿಸಿಯ ಸೇವೆಗಳ ಗುಣಮಟ್ಟ ಕುಸಿದು ಹೋಗಿದೆ. ಪ್ರಯಾಣಿಕರು ಮಾತ್ರ ಈ ನೋವನ್ನು ಅನುಭವಿಸುತ್ತಲೇ ಇದ್ದಾರೆ’ ಎಂದು ಮತ್ತೊಬ್ಬ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:05 pm, Mon, 10 October 22