ಐದು ವರ್ಷಗಳ ನಂತರ ಮಹಿಳೆಯ ಹೊಟ್ಟೆಯಿಂದ ಕತ್ತರಿ ಹೊರತೆಗೆದ ಕೇರಳದ ವೈದ್ಯರು
Medical Negligence : ಇದೀಗ ಈ ಮಹಿಳೆ ಕೇರಳದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ತಾನು ಪಟ್ಟ ನೋವು, ಸಂಕಟದ ಕುರಿತು ದೂರು ಸಲ್ಲಿಸಿದ್ದಾಳೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದೆ ಆರೋಗ್ಯ ಇಲಾಖೆ.
Trending : ಕೇರಳದ ಕೋಝಿಕ್ಕೋಡ್ನ ಹರ್ಷೀನಾ ಎಂಬ ಮಹಿಳೆಯ ಹೊಟ್ಟೆಯಿಂದ 5 ವರ್ಷಗಳ ನಂತರ 11 ಸೆಂ. ಮೀ. ಉದ್ದದ ಕತ್ತರಿಯನ್ನು ಹೊರತೆಗೆದ ಪ್ರಕರಣ ಇದೀಗ ವರದಿಯಾಗಿದೆ. 2017ರಲ್ಲಿ ಈಕೆ ಮೂರನೆಯ ಹೆರಿಗೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು. ನಂತರ ಸಿಝೇರಿಯನ್ ಮೂಲಕ ಹೆರಿಗೆ ಮಾಡಲಾಯಿತು. ಆದರೆ ಕ್ರಮೇಣ ತೀವ್ರ ಆಯಾಸ, ನೋವನ್ನು ಈಕೆ ಅನುಭವಿಸಲಾರಂಭಿಸಿದರು. ಪದೇಪದೇ ನೋವು ಉಲ್ಭಣವಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದರು. ನಂತರ ಸ್ಕ್ಯಾನಿಂಗ್ಗೆ ಒಳಪಡಿಸಿದಾಗ ಆಕೆಯ ಹೊಟ್ಟೆಯೊಳಗೆ ಕತ್ತರಿ ಇರುವುದು ಪತ್ತೆಯಾಯಿತು.
‘2017ರ ನವೆಂಬರ್ 30ರಂದು ನಾನು ಸಿಝೇರಿಯನ್ಗೆ ಒಳಗಾದೆ. ಬಿಟ್ಟುಬಿಟ್ಟು ಬರುತ್ತಿದ್ದ ಹೊಟ್ಟೆನೋವಿನಿಂದಾಗಿ ನಾನು ಸಾಕಷ್ಟು ಬಳಲಿದೆ. ಸಾಕಷ್ಟು ಸಲ ವೈದ್ಯರಿಂದ ಸಮಾಲೋಚನೆ, ಚಿಕಿತ್ಸೆ ಪಡೆದುಕೊಂಡೆ. ಕೊನೆಗೆ ನೋವು ಅಸಾಧ್ಯವೆನ್ನಿಸಿದಾಗ ಮತ್ತೆ ಆಸ್ಪತ್ರೆಗೆ ಭೇಟಿ ನೀಡಿ ಸಿಟಿ ಸ್ಕ್ಯಾನ್ ಮಾಡಿಸಿಕೊಂಡೆ. ಆಗ ಹೊಟ್ಟೆಯಲ್ಲಿ ಕತ್ತರಿ ಇದೆ ಎಂದು ತಿಳಿಯಿತು’ ಎಂದು ಹರ್ಷೀನಾ ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದ ವೈದ್ಯಕೀಯ ಕಾಲೇಜಿನಲ್ಲೇ ಈಕೆಯನ್ನು ಶಸ್ತ್ರಚಿಕಿತ್ಸೆಗಾಗಿ ದಾಖಲಿಸಲಾಯಿತು. ನಂತರ ಯಶಸ್ವಿಯಾಗಿ ಕತ್ತರಿಯನ್ನು ಹೊರತೆಗೆಯಲಾಯಿತು. ವೈದ್ಯರ ನಿರ್ಲಕ್ಷ್ಯದಿಂದ ತಾನು ಅನುಭವಿಸಿದ ನೋವು ಸಂಕಟದ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈದ್ಯಕೀಯ ಕಾಲೇಜಿಗೆ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ