ಮದರಂಗಿ ಹಾಕಿಸಿಕೊಂಡು ಬರುವೆ ಎಂದು ಹೇಳಿ ಪಾರ್ಲರ್ ಗೆ ಹೋದ ವಧು ನಾಪತ್ತೆ!
ವಧು ಅಥವಾ ವರ ನಾಪತ್ತೆಯಾಗಿ ನಡೆಯಬೇಕಾಗಿದ್ದ ಮದುವೆಗಳು ನಿಂತು ಹೋದಂತಹ ಅದೆಷ್ಟೋ ಘಟನೆಗಳ ಬಗೆಗಿನ ಸುದ್ದಿಗಳನ್ನು ಆಗಾಗ್ಗೆ ಕೇಳಿರುತ್ತೇವೆ. ಇದೀಗ ಇಂತಹದೊಂದು ಘಟನೆಯು ನಡೆದಿದ್ದು, ಹಸಮಣೆ ಏರಬೇಕಾಗಿದ್ದ ಯುವತಿಯೊಬ್ಬಳು ಮದುವೆ ಹಿಂದಿನ ದಿನವೇ ನಾಪತ್ತೆಯಾಗಿದ್ದಾಳೆ. ಇದರಿಂದ ನಡೆಯಬೇಕಿದ್ದ ಮದುವೆಯೇ ನಿಂತು ಹೋಗಿದೆ. ಹಾಗಾದ್ರೆ ಏನಿದು ಪ್ರಕರಣ? ಈ ಕುರಿತಾದ ಮಾಹಿತಿ ಇಲ್ಲಿದೆ.

ಮನೆಯವರ ಒತ್ತಾಯಕ್ಕೆ ಮಣಿದು ಇಷ್ಟವಿಲ್ಲದ ಮದುವೆ (marriage) ಗೆ ಒಪ್ಪಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಂಸಾರ ನಡೆಸುತ್ತಿರುವ ಎಷ್ಟೋ ಹೆಣ್ಣು ಮಕ್ಕಳು ಇದ್ದಾರೆ. ಆದರೆ ಈಗ ಕಾಲ ಬದಲಾಗಿದೆ ಬಿಡಿ. ತಾವು ಇಷ್ಟ ಪಟ್ಟ ಹುಡುಗ ಅಥವಾ ಹುಡುಗಿಗಾಗಿ ಅಪ್ಪ ಅಮ್ಮನ ಮರ್ಯಾದೆಯನ್ನು ಬೀದಿಗೆ ತರುವವರು ಇದ್ದಾರೆ. ಹೌದು, ತಂದೆ ತಾಯಿಯವರ ಇಷ್ಟಕ್ಕೆ ಕಟ್ಟು ಬಿದ್ದು ಮದುವೆಗೆ ಒಪ್ಪಿಗೆ ಸೂಚಿಸಿ, ಮದುವೆ ದಿನವೆ ಓಡಿ ಹೋಗುವ ಎಷ್ಟೋ ಪ್ರಕರಣಗಳ ಬಗ್ಗೆ ನೀವು ಕೇಳಿರುತ್ತೀರಿ. ಇದೀಗ ಮದುವೆಯ ಹಿಂದಿನ ದಿನ ಮದರಂಗಿ (mehandi) ಹಾಕಿಸಿಕೊಂಡು ಬರುವೆ ಎಂದು ಹೇಳಿ ಬ್ಯೂಟಿ ಪಾರ್ಲರ್ (beauty parlour) ಗೆ ಹೋದ ವಧು ನಾಪತ್ತೆಯಾಗಿದ್ದಾಳೆ. ಈ ಘಟನೆಯು ಮಂಗಳೂರಿ (manglore) ನ ಬೋಳಾರ್ (bolar) ನಲ್ಲಿ ನಡೆದಿದೆ.
22 ವರ್ಷದ ಪಲ್ಲವಿ ನಾಪತ್ತೆಯಾದ ಯುವತಿಯಾಗಿದ್ದು, ಮದುವೆಯ ಹಿಂದಿನ ದಿನ ಮೆಹಂದಿ ಹಾಕಿಸಿಕೊಂಡು ಬರುವೆ ಎಂದು ಮನೆಯಲ್ಲಿ ಹೇಳಿ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು. ಆದರೆ ತಡರಾತ್ರಿಯಾದರೂ ಆಕೆಯು ಮನೆಗೆ ವಾಪಾಸಾಗಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 16 ರಂದು ಮದುವೆಯು ನಡೆಯಬೇಕಿತ್ತು. ಆದರೆ ಒಂದು ದಿನ ಮುಂಚೆಯೇ ಅಂದರೆ ಏಪ್ರಿಲ್ 15 ರಂದು ಈ ಯುವತಿಯು ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಆಕೆಯ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಕೂಡ ಸ್ವಿಚ್ ಆಫ್ ಎಂದು ಬಂದಿದೆ. ಮದುವೆಗೆ ಒಂದು ದಿನ ಇರುವಾಗಲೇ ಯುವತಿಯು ನಾಪತ್ತೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಹೌದು, ಮನೆಯವರು ಪಲ್ಲವಿಯ ಒಪ್ಪಿಗೆಯ ಮೇರೆಗೆ ಈ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ ಈ ಮದುವೆಯಾಗಬೇಕಿದ್ದ ಯುವಕನ ಜೊತೆಗೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸೇರಿದಂತೆ ಮೆಹಂದಿ ಪಾರ್ಟಿ ಎಲ್ಲವೂ ಅದ್ದೂರಿಯಾಗಿಯೇ ನಡೆದಿತ್ತು. ಹೀಗಿರುವಾಗ ಮದುವೆಯ ಹಿಂದಿನ ದಿನವೇ ವಧು ನಾಪತ್ತೆಯಾಗಿರುವುದರಿಂದ ನಡೆಯಬೇಕಿದ್ದ ಮದುವೆಯು ನಿಂತು ಹೋಗಿದೆ. ಇದರಿಂದ ಎರಡು ಕುಟುಂಬವು ತಲೆತಗ್ಗಿಸುವಂತೆ ಆಗಿದೆ. ಈ ಘಟನೆಗೆ ಸಂಬಂಧ ಪಟ್ಟಂತೆ ಮಂಗಳೂರು ದಕ್ಷಿಣ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Sun, 20 April 25