Viral: ಹಸು ಸಾಕಲು ಕಾರ್ ಶೆಡ್ಡನ್ನು ಕೌ ಶೆಡ್ ಆಗಿ ಪರಿವರ್ತಿಸಿದ ಮೈಸೂರಿನ ಕುಟುಂಬ; ಇಲ್ಲಿದೆ ನೋಡಿ ವಿಡಿಯೋ
ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ನಾಯಿ, ಬೆಕ್ಕುಗಳನ್ನು ಸಾಕಲು ಇಷ್ಟಪಡುತ್ತಾರೆ. ಆದ್ರೆ ಇಲ್ಲೊಂದು ಮೈಸೂರು ಮೂಲದ ಕುಟುಂಬ ದೇಸಿ ತಳಿಯ ಹಸುಗಳ ಸಂರಕ್ಷಣೆಗಾಗಿ ಹಾಗೂ ಗೋ ಆಧಾರಿತ ಕೃಷಿಯ ಉಳಿವಿಗಾಗಿ ಮನೆಯ ಕಾರ್ ಶೆಡ್ ಅನ್ನು ಕೌ ಶೆಡ್ ಆಗಿ ಪರಿವರ್ತಿಸಿ ದೇಸಿ ತಳಿಯ ʼಪುಂಗನೂರುʼ ಹಸುಗಳನ್ನು ಸಾಕುತ್ತಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಇವರ ಈ ಒಳ್ಳೆಯ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಹಿಂದೆಲ್ಲಾ ಹಳ್ಳಿಗಳ ಪ್ರತಿ ಮನೆಗಳಲ್ಲೂ ಗೋವುಗಳು, ಎತ್ತು, ಹೋರಿಗಳನ್ನು ಸಾಕುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಬಿಡಿ ಹಳ್ಳಿಗಳಲ್ಲೂ ಕೂಡಾ ಹಸುಗಳು ಕಾಣಸಿಗುವುದೇ ತೀರಾ ಅಪರೂಪವಾಗಿಬಿಟ್ಟಿದೆ. ಹೆಚ್ಚಿನವರು ನಾಯಿ, ಬೆಕ್ಕುಗಳನ್ನೇ ಸಾಕುವ ಕಡೆ ಒಲವನ್ನು ತೋರುತ್ತಿದ್ದಾರೆ. ಇವರುಗಳ ಮಧ್ಯೆ ಇಲ್ಲೊಂದು ಮೈಸೂರು ಮೂಲದ ಕುಟುಂಬ ಭಾರತೀಯ ತಳಿಯ ಹಸುಗಳನ್ನು ಸಂರಕ್ಷಿಸುವ ಹಾಗೂ ಇಂದು ಕಣ್ಮರೆಯಾಗುತ್ತಿರುವ ಗೋ ಆಧಾರಿತ ಕೃಷಿಯ ಉಳಿವಿಗಾಗಿ ತಮ್ಮ ಮನೆಯ ಕಾರ್ ಶೆಡ್ ಅನ್ನೇ ಕೌ ಶೆಡ್ ಆಗಿ ಪರಿವರ್ತಿಸಿ ದೇಸಿ ತಳಿಯ ʼಪುಂಗನೂರುʼ ಹಸುಗಳನ್ನು ಸಾಕುತ್ತಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಇವರ ಈ ಒಳ್ಳೆಯ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಮೈಸೂರಿನ ಮಧುಸೂಧನ್ ಮತ್ತು ಶ್ರೀಕಾಂತ್ ಕುಟುಂಬ ದೇಸಿ ತಳಿಯ ಪುಂಗನೂರು ಹಸುಗಳನ್ನು ಸಾಕುತ್ತಿದ್ದಾರೆ. ಅದರಲ್ಲೂ ವಿಶೇಷ ಏನಪ್ಪಾ ಅಂದ್ರೆ ಶೆಡ್ಡಿನಲ್ಲಿರಬೇಕಾದ ಕಾರುಗಳನ್ನು ಮನೆಯಿಂದ ಹೊರಗೆ ನಿಲ್ಲಿಸಿ, ಅದೇ ಶೆಡ್ಡಿನಲ್ಲಿ ಹಸುಗಳಿಗೆ ಕೊಟ್ಟಿಗೆಯನ್ನು ನಿರ್ಮಾಣ ಮಾಡಿದ್ದಾರೆ. ದೇಸಿ ತಳಿಯ ಗೋವುಗಳನ್ನು ರಕ್ಷಿಸಲು ಹಾಗೂ ಗೋ ಆಧಾರಿತ ಕೃಷಿಯ ಉಳಿವಿಗಾಗಿ ಇವರು ಭಾರತೀಯ ತಳಿಯ ಗೋವುಗಳನ್ನು ಸಾಕಲು ಶುರು ಮಾಡಿ, ಈಗ ತಲಕಾಡು ಗ್ರಾಮದ ಹಳೆ ಮನೆಯಲ್ಲಿ ಗೋಶಾಲೆಯನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರಸ್ತುತ ವಾಸವಿರುವ ನಗರ ಪ್ರದೇಶದ ಮನೆಯಲ್ಲೂ ಕಾರು ಶೆಡ್ಡನ್ನು ಕೊಟ್ಟಿಗೆಯ ರೀತಿಯಲ್ಲಿ ಪರಿವರ್ತಿಸಿ ಅಲ್ಲಿ ಪುಂಗನೂರು ಹಸುಗಳನ್ನು ಸಾಕುತ್ತಿದ್ದಾರೆ.
ಈ ಕುರಿತ ಮಾಹಿತಿಪೂರ್ಣ ವಿಡಿಯೋವನ್ನು Sudha&Sandeep Manjunath ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಧುಸೂದನ್ ಅವರ ಹಸು ಸಾಕಲು ಪ್ರೇರಣೆಯಾದ ವಿಷಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೆಚ್.ಎಫ್ ಜೆರ್ಸಿ ಹಸುಗಳಿಂದ ಬರುವ ಹಾಲು, ಮೊಸರು ತುಪ್ಪ ಎಲ್ಲವೂ ರೋಗಕಾರಕ. ಇದು ಹಾರ್ಟ್, ಕಿಡ್ನಿ, ಲಿವರ್ ಎಲ್ಲರದ ಮೇಲೂ ದುಷ್ಪರಿಣಾಮವನ್ನು ಉಂಟು ಮಾಡುತ್ತಿದೆ. ಈ ವಿಷಯ ಸಂಶೋಧನೆಯಿಂದಲೂ ತಿಳಿದು ಬಂದಿದೆ. ಈ ಹಸುಗಳ ಹಾಲಿನಲ್ಲಿ ಕ್ವಾಂಟಿಟಿ ಜಾಸ್ತಿ ಇರ್ಬೋದು ಆದ್ರೆ ಕ್ವಾಲಿಟಿ ಇಲ್ಲ. ಆದ್ರೆ ದೇಸಿ ತಳಿಯ ಗೋವುಗಳ ಹಾಲು, ಮೊಸರು ತುಪ್ಪ ಎಂತಹ ರೋಗಗಳನ್ನು ವಾಸಿ ಮಾಡುವ ಗುಣವನ್ನು ಹೊಂದಿದೆ. ಇದರಿಂದಲೇ ಅಲ್ವೇ ನಮ್ಮ ಪೂರ್ವಜರು ಅಷ್ಟೊಂದು ಆರೋಗ್ಯಕರವಾಗಿದ್ದಿದ್ದು. ಹಾಗಾಗಿ ಇಂತಹ ಶುದ್ಧ ತಳಿಗಳನ್ನು ಉಳಿಸಬೇಕು ಎಂಬ ಉತ್ತಮ ಮಾಹಿತಿಯನ್ನು ಒದಗಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ʼಡಿಜಿಟಲ್ ಕಾಂಡೋಮ್ʼ ಬಿಡುಗಡೆ, ಇದರ ವಿಶೇಷತೆ ಏನ್ ಗೊತ್ತಾ?
ಸೆಪ್ಟೆಂಬರ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಳ್ಳಿಗಳಲ್ಲಿ ದನದ ಹಟ್ಟಿಗಳು ಬೈಕು, ಕಾರ್ ಶೆಡ್ ಆಗಿ ಪರಿವರ್ತನೆಯಾಗಿದೆ, ನಿಮ್ಮ ಈ ಪ್ರಯತ್ನ ಅವರಿಗೂ ಮಾದರಿಯಾಗಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ದೇಸಿ ತಳಿಯ ಹಸುಗಳನ್ನು ಸಾಕೋದೇ ಉತ್ತಮʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ