AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Null Stern Hotel: ಈ ಹೋಟೆಲ್​​​ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್​; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು

ಸ್ವಿಟ್ಜರ್ಲೆಂಡ್‌ನಲ್ಲಿರುವ 'ನಲ್ ಸ್ಟರ್ನ್' ಹೋಟೆಲ್ ಸಾಮಾನ್ಯ ಹೋಟೆಲ್‌ಗಳಂತಿಲ್ಲ. ಇಲ್ಲಿ ಗೋಡೆಗಳಿಲ್ಲ, ಛಾವಣಿಯಿಲ್ಲ. ಪರ್ವತದ ಮೇಲೆ ಕೇವಲ ಒಂದು ಹಾಸಿಗೆ ಮಾತ್ರ. ಪ್ರಕೃತಿಯ ಮಡಿಲಲ್ಲಿ ನಕ್ಷತ್ರಗಳನ್ನು ನೋಡುತ್ತಾ, ಸಂಗಾತಿಯೊಂದಿಗೆ ಏಕಾಂತ ಕಳೆಯಲು ಇದು ಹೇಳಿ ಮಾಡಿಸಿದ ತಾಣ. ಈ ವಿಶಿಷ್ಟ ಅನುಭವಕ್ಕೆ ಒಂದು ರಾತ್ರಿಗೆ 29,300 ರೂ. ಪಾವತಿಸಬೇಕು. ಇದು ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ತಾಣಗಳಲ್ಲಿ ಒಂದಾಗಿದೆ.

Null Stern Hotel: ಈ ಹೋಟೆಲ್​​​ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್​; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು
ನಲ್ ಸ್ಟರ್ನ್
ಅಕ್ಷತಾ ವರ್ಕಾಡಿ
|

Updated on:Jan 09, 2026 | 5:45 PM

Share

ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲದ ಹೋಟೆಲ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ಎಂಬ ಪ್ರಶ್ನೆಯೇ ಅಚ್ಚರಿ ಮೂಡಿಸುವಂತದ್ದು. ಹೆಸರಿಗಷ್ಟೇ ಇದೊಂದು ಹೋಟೆಲ್ ರೂಮ್ ಆಗಿದ್ದರೂ, ಇಲ್ಲಿ ಸಾಮಾನ್ಯ ಹೋಟೆಲ್‌ಗಳಲ್ಲಿ ಕಾಣುವ ಗೋಡೆಗಳು, ಬಾಗಿಲುಗಳು ಅಥವಾ ಛಾವಣಿಯೇ ಇಲ್ಲ. ವಿಶಾಲವಾದ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿಯ ಮಧ್ಯೆ ಒಂದೇ ಒಂದು ಹಾಸಿಗೆಯನ್ನು ಇಟ್ಟು ನಿರ್ಮಿಸಲಾದ ಈ ತಾಣವು ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲೊಂದು ಎಂಬ ಖ್ಯಾತಿ ಗಳಿಸಿದೆ. ಪ್ರತೀ ವರ್ಷ ಅನೇಕ ಪ್ರವಾಸಿಗರು ತಮ್ಮ ಸಂಗಾತಿಯೊಂದಿಗೆ ಏಕಾಂತವನ್ನು ಅನುಭವಿಸಲು ಈ ವಿಶಿಷ್ಟ ಹೋಟೆಲ್‌ಗೆ ಭೇಟಿ ನೀಡುತ್ತಾರೆ.

ಈ ರೀತಿಯ ಅಸಾಮಾನ್ಯ ಹೋಟೆಲ್ ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದಾದ ಸ್ವಿಟ್ಜರ್ಲೆಂಡ್‌ನಲ್ಲಿದೆ. ಇದಕ್ಕೆ ‘ನಲ್ ಸ್ಟರ್ನ್’ ಎಂಬ ಹೆಸರಿದ್ದು, ಈ ಪದ ಜರ್ಮನ್ ಭಾಷೆಯಿಂದ ಬಂದಿದ್ದು “ಶೂನ್ಯ ನಕ್ಷತ್ರ” ಎಂಬ ಅರ್ಥವನ್ನು ಹೊಂದಿದೆ. ಸ್ವಿಟ್ಜರ್‌ಲ್ಯಾಂಡ್‌ನ ಗೋಬ್ಸಿ ಎಂಬ ಪರ್ವತ ಶಿಖರದ ಮೇಲೆ ಹಸಿರು ಬೆಟ್ಟಗಳ ಮಧ್ಯೆ ಈ ಹೋಟೆಲ್ ಅನ್ನು ನಿರ್ಮಿಸಲಾಗಿದ್ದು, ಇಲ್ಲಿ ಒಂದು ಹಾಸಿಗೆಯ ಹೊರತು ಬೇರೆ ಯಾವುದೇ ಕಟ್ಟಡದ ರಚನೆ ಇಲ್ಲ. ಪ್ರಕೃತಿಯ ಮಡಿಲಲ್ಲಿ ನಕ್ಷತ್ರಗಳನ್ನು ಎಣಿಸುತ್ತಾ, ಮೌನದ ಸೌಂದರ್ಯವನ್ನು ಅನುಭವಿಸುತ್ತಾ, ಜೋಡಿಗಳು ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಲು ಸಾಧ್ಯವಾಗುವಂತೆ ಈ ಕಲ್ಪನೆಯನ್ನು ರೂಪಿಸಲಾಗಿದೆ.

ಸಮುದ್ರ ಮಟ್ಟಕ್ಕಿಂತ ಸುಮಾರು 6,463 ಅಡಿ ಎತ್ತರದಲ್ಲಿರುವ ಈ ಸ್ಥಳದಲ್ಲಿ ಸುಂದರವಾದ ಕ್ವೀನ್ ಸೈಸ್ ಬೆಡ್ ಅನ್ನು ಅಳವಡಿಸಲಾಗಿದೆ. ಬಿಳಿ ಬಣ್ಣದ ಮೃದುವಾದ ಬೆಡ್‌ಶೀಟ್‌ಗಳಿಂದ ಹಾಸಿಗೆಯನ್ನು ಸಜ್ಜುಗೊಳಿಸಲಾಗಿದ್ದು, ಸುತ್ತಲೂ ಲ್ಯಾಂಪ್ ಸೆಟ್‌ಗಳಿಂದ ಅಲಂಕಾರ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಈ ಬೆಳಕುಗಳು ಪ್ರಕೃತಿಯೊಂದಿಗೆ ಬೆರೆತು ವಿಶೇಷವಾದ ರೋಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸುತ್ತವೆ. ಇದೇ ಕಾರಣಕ್ಕೆ ಈ ತಾಣವನ್ನು ಪ್ರಪಂಚದ ಅತ್ಯಂತ ರೋಮ್ಯಾಂಟಿಕ್ ಪ್ರವಾಸಿ ಸ್ಥಳಗಳ ಪೈಕಿ ಒಂದೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ

ಗೋಡೆಗಳೂ ಇಲ್ಲದ, ಛಾವಣಿಯೂ ಇಲ್ಲದ ಈ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಸುಮಾರು 337 ಅಮೆರಿಕನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 29,300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ವೆಚ್ಚದಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ಅಗತ್ಯವಿರುವ ಆಹಾರ ಹಾಗೂ ಇತರ ಸೌಲಭ್ಯಗಳೂ ಒಳಗೊಂಡಿರುತ್ತವೆ. ಈ ಅನನ್ಯ ಹೋಟೆಲ್ ಅನ್ನು ಸ್ವಿಟ್ಜರ್‌ಲ್ಯಾಂಡ್‌ನ ಇಬ್ಬರು ಕಲಾವಿದರಾದ ಫ್ರಾಂಕ್ ಮತ್ತು ರಿಕ್ಲಿನ್ ವಿನ್ಯಾಸಗೊಳಿಸಿದ್ದು, ಅವರ ವಿಭಿನ್ನ ಹಾಗೂ ಧೈರ್ಯಶಾಲಿ ಕಲ್ಪನೆ ಇಂದು ವಿಶ್ವದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಿದ್ದು, ಪ್ರಕೃತಿಯೊಂದಿಗೆ ಒಂದಾಗುವ ಅಪರೂಪದ ಅನುಭವವನ್ನು ಹುಡುಕುವವರಿಗೆ ಇದು ಕನಸಿನ ತಾಣವಾಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Fri, 9 January 26