Melody Chocolate History: ಬಾಲ್ಯದ ಫೇವರಿಟ್ ‘ಮೆಲೋಡಿ’ ಚಾಕೊಲೇಟ್ ಹುಟ್ಟಿದ್ದು ಹೇಗೆ? ಮೋದಿ ಗಿಫ್ಟ್ ಬಳಿಕ ಕುತೂಹಲ ಹೆಚ್ಚಳ

ಪ್ರಧಾನಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಪಾರ್ಲೆ ಮೆಲೋಡಿ ಚಾಕೊಲೇಟ್ ಗಿಫ್ಟ್ ನೀಡಿದ್ದು, #Melodi ಟ್ರೆಂಡ್‌ಗೆ ಹೊಸ ಹುರುಪು ನೀಡಿದೆ. ಮೆಲೋನಿ ಹಂಚಿಕೊಂಡ ಈ ವಿಡಿಯೋ ಈಗಾಗಲೇ ಕೋಟ್ಯಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಆದ್ದರಿಂದ ಭಾರತೀಯರ ಬಾಲ್ಯದ ನೆನಪಾಗಿರುವ ಈ 1 ರೂಪಾಯಿಯ ಚಾಕೊಲೇಟ್‌ ಇಷ್ಟೊಂದು ಪ್ರಸಿದ್ಧಿ ಪಡೆದಿದ್ದು ಹೇಗೆ? ಇದರ ಇತಿಹಾಸದ ಆಸಕ್ತಿದಾಯಕ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

Melody Chocolate History: ಬಾಲ್ಯದ ಫೇವರಿಟ್ ‘ಮೆಲೋಡಿ’ ಚಾಕೊಲೇಟ್ ಹುಟ್ಟಿದ್ದು ಹೇಗೆ? ಮೋದಿ ಗಿಫ್ಟ್ ಬಳಿಕ ಕುತೂಹಲ ಹೆಚ್ಚಳ
ಮೆಲೋಡಿ
Image Credit source: Pinterest

Updated on: May 20, 2026 | 3:35 PM

ಸೋಷಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ (Melody) ಚಾಕೊಲೇಟ್ ಈಗ ಭಾರಿ ಟ್ರೆಂಡ್ ಸೃಷ್ಟಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹಕ್ಕೆ ಇಂಟರ್ನೆಟ್ ಜಗತ್ತು ಈಗಾಗಲೇ #Melodi ಎಂದು ಹೆಸರಿಟ್ಟು ಸಂಭ್ರಮಿಸುತ್ತಿದೆ. ಆದರೆ, ರೋಮ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಟಲಿ ಪ್ರಧಾನಿಗೆ ಭಾರತದ ಪ್ರಸಿದ್ಧ ‘ಪಾರ್ಲೆ ಮೆಲೋಡಿ’ (Parle Melody) ಟಾಫಿಗಳ ಪ್ಯಾಕೆಟ್ ಅನ್ನು ಗಿಫ್ಟ್ ಆಗಿ ನೀಡುವ ಮೂಲಕ ಈ ಇಂಟರ್ನೆಟ್ ಮೀಮ್ ಅನ್ನು ನಿಜವಾಗಿಸಿದ್ದಾರೆ!

ಇಟಲಿ ಪ್ರಧಾನಿ ಮೆಲೋನಿ ಅವರು ಪ್ರಧಾನಿ ಮೋದಿ ತಮಗೆ ಚಾಕೊಲೇಟ್ ನೀಡುತ್ತಿರುವ 27 ಸೆಕೆಂಡುಗಳ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದು, “ಗಿಫ್ಟ್‌ಗೆ ಧನ್ಯವಾದಗಳು, ಪ್ರಧಾನಿ ಮೋದಿ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದು ಧೂಳೆಬ್ಬಿಸುತ್ತಿದೆ. ಭಾರತೀಯರ ಬಾಲ್ಯದ ನೆನಪಾಗಿರುವ ಈ 1 ರೂಪಾಯಿಯ ಚಾಕೊಲೇಟ್‌ ಇಷ್ಟೊಂದು ಪ್ರಸಿದ್ಧಿ ಪಡೆದಿದ್ದು ಹೇಗೆ? ಇದರ ಇತಿಹಾಸದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ:

ಕುತೂಹಲವನ್ನೇ ಅಸ್ತ್ರವಾಗಿಸಿಕೊಂಡ ಜಾಹೀರಾತು:

1980ರ ದಶಕದಲ್ಲಿ ಪಾರ್ಲೆ (Parle) ಕಂಪನಿಯು ಈ ಚಾಕೊಲೇಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಅಷ್ಟರಗಾಗಲೇ ‘ಕ್ಯಾಡ್ಬರಿ ಎಕ್ಲೇರ್ಸ್’ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿತ್ತು. ತನ್ನ ಪ್ರತಿಸ್ಪರ್ಧಿಗೆ ಬಲವಾದ ಪೈಪೋಟಿ ನೀಡಲು ಪಾರ್ಲೆ ಕಂಪನಿಯು ‘ಎವರೆಸ್ಟ್’ (Everest) ಎಂಬ ಜಾಹೀರಾತು ಸಂಸ್ಥೆಗೆ ಜವಾಬ್ದಾರಿ ನೀಡಿತು. ಆ ಸಂಸ್ಥೆಯ ಕ್ರಿಯೇಟಿವ್ ಹೆಡ್ ಹರೇಶ್ ಮೂರ್ಜಾನಿ ಮತ್ತು ಕಾಪಿ ರೈಟರ್ ಸುಲೇಖಾ ಬಾಜಪೇಯಿ ಅವರು ಒಂದು ವಿನೂತನ ಐಡಿಯಾ ಮಾಡಿದರು. ಚಾಕೊಲೇಟ್‌ನ ರುಚಿಯನ್ನು ಹೊಗಳುವ ಬದಲು, ಗ್ರಾಹಕರಲ್ಲಿ ಕುತೂಹಲ ಮೂಡಿಸಲು ನಿರ್ಧರಿಸಿದರು.

ಹೀಗೆ ಹುಟ್ಟಿಕೊಂಡಿದ್ದೇ ಭಾರತೀಯ ಜಾಹೀರಾತು ರಂಗದ ಇತಿಹಾಸದಲ್ಲೇ ಐಕಾನಿಕ್ ಎನಿಸಿಕೊಂಡ ಆ ಸಾಲುಗಳು:

“ಮೆಲೋಡಿ ಇತ್ನಿ ಚಾಕೊಲೇಟಿ ಕ್ಯೂನ್ ಹೈ?” (ಮೆಲೋಡಿ ಇಷ್ಟೊಂದು ಚಾಕೊಲೇಟಿ ಯಾಕಿದೆ?)
ಉತ್ತರ: “ಮೆಲೋಡಿ ಖಾವೋ, ಖುದ್ ಜಾನ್ ಜಾವೋ” (ಮೆಲೋಡಿ ತಿನ್ನಿ, ನೀವೇ ತಿಳ್ಕೊಳ್ಳಿ!)

ಶಾಲೆ, ಆಟದ ಮೈದಾನ, ಮ್ಯಾಜಿಕ್ ಶೋಗಳ ಹಿನ್ನೆಲೆಯಲ್ಲಿ ಮೂಡಿಬಂದ ಈ ಟಿವಿ ಜಾಹೀರಾತುಗಳು ಗ್ರಾಹಕರನ್ನು ಮರುಳು ಮಾಡಿದವು. ಚಾಕೊಲೇಟ್‌ನ ಒಳಗಿರುವ ಕ್ಯಾರಮೆಲ್ ಮತ್ತು ದಟ್ಟವಾದ ಚಾಕೊಲೇಟ್ ಸವಿಯಲು ಜನರು ಮುಗಿಬಿದ್ದರು. ಕೇವಲ 1 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಈ ಚಾಕೊಲೇಟ್ ನೋಡನೋಡುತ್ತಿದ್ದಂತೆ ಭಾರತದ ಮನೆಮಾತಾಯಿತು.

ಮಕ್ಕಳು ತಮ್ಮ ಹುಟ್ಟುಹಬ್ಬದ ದಿನ ಹಂಚಲು ಮೊದಲು ಆಯ್ಕೆ ಮಾಡಿಕೊಳ್ಳುವುದೇ ಈ ಮೆಲೋಡಿ ಚಾಕೊಲೇಟ್ ಅನ್ನು. ಭಾರತದ ಹಳ್ಳಿ ಹಳ್ಳಿಗಳ ಕಿರಾಣಿ ಅಂಗಡಿಗಳ ಕೌಂಟರ್‌ ಮೇಲಿರುವ ಗಾಜಿನ ಡಬ್ಬಿಗಳಲ್ಲಿ 1 ರೂಪಾಯಿಗೆ ಸಿಗುತ್ತಿದ್ದ ಈ ಟಾಫಿ, ತನ್ನ ಕ್ಲಾಸಿಕ್ ಜಾಹೀರಾತು ಶೈಲಿ ಮತ್ತು ವಿಶಿಷ್ಟ ರುಚಿಯಿಂದಾಗಿ ಕಳೆದ 4 ದಶಕಗಳಿಂದ (40 ವರ್ಷಗಳಿಗೂ ಹೆಚ್ಚು) ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದೆ.

ಹಳೆಯ ಜಾಹೀರಾತು ಇಲ್ಲಿದೆ ನೋಡಿ:

YouTube video player

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

#Melodi ಮೀಮ್‌:

ಕಳೆದ ಮೂರು ವರ್ಷಗಳಿಂದ ಇಂಟರ್ನೆಟ್‌ನಲ್ಲಿ ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಅವರ ಹೆಸರುಗಳನ್ನು ಸೇರಿಸಿ #Melodi ಹ್ಯಾಶ್‌ಟ್ಯಾಗ್ ವೈರಲ್ ಆಗುತ್ತಲೇ ಇರುತ್ತದೆ. 2023 ರ ದುಬೈ COP28 ಶೃಂಗಸಭೆಯಲ್ಲಿ ಮೆಲೋನಿ ಅವರು ಮೋದಿಯವರೊಂದಿಗೆ ಸೆಲ್ಫಿ ಹಂಚಿಕೊಂಡು “Good friends at COP28 #Melodi” ಎಂದು ಬರೆದಾಗಿನಿಂದ ಈ ಟ್ರೆಂಡ್ ಶುರುವಾಗಿತ್ತು.

ಪ್ರಧಾನಿ ಮೋದಿ ಅವರು ಕೇವಲ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೆ, ಇಂಟರ್ನೆಟ್‌ನ ಟ್ರೆಂಡ್ ಬಗ್ಗೆಯೂ ಅಪ್‌ಡೇಟ್ ಆಗಿರುತ್ತಾರೆ ಎಂಬುದಕ್ಕೆ ಇಟಲಿ ಪ್ರಧಾನಿಗೆ ಅವರು ನೀಡಿದ ‘ಮೆಲೋಡಿ’ ಗಿಫ್ಟ್ ಸಾಕ್ಷಿಯಾಗಿದೆ. ಭಾರತದ ಹೆಮ್ಮೆಯ ಬ್ರ್ಯಾಂಡ್ ಹೇಗೆ ಜಾಗತಿಕವಾಗಿ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂವಾದಗಳ ಭಾಗವಾಗಬಲ್ಲವು ಎಂಬುದಕ್ಕೆ ಪಾರ್ಲೆ ಮೆಲೋಡಿ ಈಗ ಅತ್ಯುತ್ತಮ ಉದಾಹರಣೆಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us