Shocking Video: ಬೆಂಕಿಯ ಚೆಂಡು, ಚೂಪಾದ ರಾಡ್ ಬಳಸಿ ಆನೆಯನ್ನು ಕೊಂದ ಜನರು; ಆಘಾತಕಾರಿ ವಿಡಿಯೋ ಇಲ್ಲಿದೆ

|

Updated on: Aug 17, 2024 | 10:44 PM

ಪಶ್ಚಿಮ ಬಂಗಾಳದಲ್ಲಿ ಬೆಂಕಿಯ ದೊಂದಿ, ಮೊನಚಾದ ರಾಡ್ ಬಳಸಿ ಆನೆಯನ್ನು ಸ್ಥಳೀಯರು ಓಡಿಸಿಕೊಂಡು ಹೋಗಿ ಕೊಂದಿದ್ದಾರೆ. 2018ರಲ್ಲಿ ಸುಪ್ರಿಂ ಕೋರ್ಟ್ ಊರಿನಿಂದ ಅಥವಾ ಜಮೀನಿನಿಂದ ಆನೆಗಳನ್ನು ಓಡಿಸಲು ಅವುಗಳ ಮೇಲೆ ಬೆಂಕಿಯ ಚೆಂಡುಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಆದರೂ ಈ ದಾರುಣ ಘಟನೆ ನಡೆದಿದೆ.

Shocking Video: ಬೆಂಕಿಯ ಚೆಂಡು, ಚೂಪಾದ ರಾಡ್ ಬಳಸಿ ಆನೆಯನ್ನು ಕೊಂದ ಜನರು; ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಕಿಯ ಚೆಂಡು, ಚೂಪಾದ ರಾಡ್ ಬಳಸಿ ಆನೆಯನ್ನು ಕೊಂದ ಜನರು
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಸ್ಥಳೀಯರ ಆಕ್ರಮಣದಿಂದ ಆನೆಯೊಂದು ಸಾವನ್ನಪ್ಪಿದೆ. ಊರೊಳಗೆ ನುಗ್ಗಿದ ಆನೆಯನ್ನು ಓಡಿಸಲು ಸ್ಥಳೀಯರು ಮೊನಚಾದ ರಾಡ್‌ಗಳು ಮತ್ತು ಬೆಂಕಿಯ ಚೆಂಡುಗಳನ್ನು ಬಳಸಿದ್ದರು. ಇದರಿಂದ ತೀವ್ರವಾಗಿ ಗಾಯಗಳಾಗಿ ಆನೆ ಮೃತಪಟ್ಟಿರುವ ಆಘಾತಕಾರಿ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಸ್ಥಳೀಯರ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಎಕ್ಸ್​ನಲ್ಲಿ ಈ ಬಗ್ಗೆ ಪ್ರೇರಣಾ ಸಿಂಗ್ ಬಿಂದ್ರಾ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಮೂಕಪ್ರಾಣಿಗಳ ಇಂತಹ ಸಾವು, ನಿರಂತರ ಕಿರುಕುಳ ಮತ್ತು ಚಿತ್ರಹಿಂಸೆ ಇದೇ ಮೊದಲ ಬಾರಿಗೆ ಅಲ್ಲ. ಸುಪ್ರೀಂ ಕೋರ್ಟ್ ಆದೇಶದ ನಂತರವೂ ಈ ರೀತಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ತಮ್ಮ ಪೋಸ್ಟ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಆನೆಗಳನ್ನು ಓಡಿಸಲು ಕೋಲುಗಳಿಗೆ ಬೆಂಕಿಯನ್ನು ಹೊತ್ತಿಸಿಕೊಂಡು ಆನೆಯ ಹಿಂದೆ ಜನರು ಓಡಿಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Viral Video: ವರಮಹಾಲಕ್ಷ್ಮಿ ಹಬ್ಬದಂದು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಪೂಜೆ ಮಾಡಿದ ಜನ!

ಗುರುವಾರ ಬೆಳಗ್ಗೆ ಎರಡು ಸಣ್ಣ ಆನೆಮರಿಗಳು ಸೇರಿದಂತೆ 6 ಆನೆಗಳು ಇಲ್ಲಿನ ರಾಜ್ ಕಾಲೇಜ್ ಕಾಲೋನಿಗೆ ನುಗ್ಗಿ ಹಾನಿ ಮಾಡಿ ಕಾಲೋನಿಯ ವೃದ್ಧನೊಬ್ಬನನ್ನು ಕೊಂದು ಹಾಕಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆನೆಗಳು ಈ ಪ್ರದೇಶದಲ್ಲಿ ನುಗ್ಗುತ್ತಿದ್ದಂತೆ, ಅವುಗಳನ್ನು ಓಡಿಸಲು ಕಬ್ಬಿಣದ ಸರಳುಗಳು ಮತ್ತು ಸುಡುವ ಟಾರ್ಚ್‌ಗಳನ್ನು ಹೊಂದಿದ ‘ಹೂಲಾ’ ತಂಡವನ್ನು ಕರೆಸಲಾಯಿತು ಎಂದು ಬಿಂದ್ರಾ ಆರೋಪಿಸಿದ್ದಾರೆ. ಆ ತಂಡವು ಅರಣ್ಯ ಇಲಾಖೆಯ ಸಂಪೂರ್ಣ ಅರಿವಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.


ಕೃಷಿ ಭೂಮಿಯಿಂದ ಆನೆಗಳನ್ನು ಓಡಿಸುವ ಕಾರ್ಯವನ್ನು ಹೊಂದಿರುವ ‘ಹೂಲಾ’ ಪಾರ್ಟಿಗಳು ಮೊನಚಾದ ರಾಡ್‌ಗಳು ಮತ್ತು ಫೈರ್‌ಬಾಲ್‌ಗಳಂತಹ ವಿಧಾನಗಳನ್ನು ಬಳಸುತ್ತವೆ, ಇದನ್ನು ಬಿಂದ್ರಾ ಮತ್ತು ಇತರ ಕಾರ್ಯಕರ್ತರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ನಂತರ ಸುಪ್ರೀಂ ಕೋರ್ಟ್ 2018ರಲ್ಲಿ ನಿಷೇಧಿಸಿತ್ತು.

ಇದನ್ನೂ ಓದಿ: Viral News: 6 ತಿಂಗಳ ಬಳಿಕ ಕೋಮಾದಿಂದ ಎದ್ದ ಯುವಕ; ಆಸ್ಪತ್ರೆ ಬಿಲ್ ನೋಡಿ ಮತ್ತೆ ಪ್ರಜ್ಞೆ ತಪ್ಪೋದೊಂದು ಬಾಕಿ!

ಪಶ್ಚಿಮ ಬಂಗಾಳದಲ್ಲಿ ಕಾಡಾನೆಗಳನ್ನು ಜನವಸತಿ ಮತ್ತು ಕೃಷಿ ಭೂಮಿಯಿಂದ ಓಡಿಸಲು ಜನರು ಹೆಚ್ಚಾಗಿ ಜೋರಾಗಿ ಡ್ರಮ್‌ಗಳನ್ನು ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವಂತಹ ವಿಧಾನಗಳನ್ನು ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಜನರು ಅವುಗಳನ್ನು ಓಡಿಸಲು ಆನೆಗಳ ಮೇಲೆ ಸುಡುವ ರಬ್ಬರ್ ಟೈರ್ ಸೇರಿದಂತೆ ಬೆಂಕಿ ಹಚ್ಚಿದ ವಸ್ತುಗಳನ್ನು ಎಸೆಯುತ್ತಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ 2021ರಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಜನರು ಸುಡುವ ಟೈರ್ ಅನ್ನು ಪ್ರಾಣಿಯ ಮೇಲೆ ಎಸೆದ ನಂತರ ಆನೆಯೊಂದು ರಕ್ತಸ್ರಾವವಾಗಿ ಸಾವನ್ನಪ್ಪಿತ್ತು. ದಾಳಿಗಾಗಿ ರಾಜ್ಯ ಅರಣ್ಯ ಇಲಾಖೆಯು ಇಬ್ಬರನ್ನು ಬಂಧಿಸಿತ್ತು. ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ, ಆನೆಗಳನ್ನು ಓಡಿಸುವ ತಂಡಗಳನ್ನು ‘ಹೂಲಾ ಪಾರ್ಟಿಗಳು’ ಎಂದು ಕರೆಯಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Sat, 17 August 24