Mangalore Dasara 2024: ಟ್ರೆಂಡ್‌ಗೋಸ್ಕರ ಅಕ್ಕಿ ಮುಡಿ ಎಸೆಯುವುದು ಬೇಡ, ಹುಲಿ ವೇಷ ಕಲೆ ಉಳಿಸಿ, ಕೈ ಮುಗಿದು ವಿನಂತಿಸಿದ ಸುಷ್ಮಾ ರಾಜ್
Pili Nalike: ತೀರಾ ಇತ್ತೀಚಿನಿಂದ ʼಹುಚ್ಚು ಡಾನ್ಸ್ ಮಾಡುವ ಮೂಲಕ ಹುಲಿ ಕುಣಿತ ಕಲೆಯನ್ನು ಹಾಳು ಮಾಡಬೇಡಿ, ತುಳುನಾಡಿನ ಸಂಸ್ಕೃತಿಯ ಭಾಗವಾಗಿರುವ ಪಿಲಿ ನಲಿಕೆಯನ್ನು ಉಳಿಸಿʼ ಎಂಬ ಅಭಿಯಾನಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಇದೀಗ ಈ ಬಗ್ಗೆ ಹುಲಿ ಕುಣಿತದಲ್ಲಿಯೇ ಜನಪ್ರಿಯತೆಯನ್ನು ಪಡೆದಿರುವ ಕರಾವಳಿಯ ಹೆಣ್ಣು ಹುಲಿ ಸುಷ್ಮಾ ರಾಜ್ ಮಾತನಾಡಿದ್ದು, ಟ್ರೆಂಡ್‌ಗೋಸ್ಕರ ಹುಲಿ ಕುಣಿತದ ಭಾಗವಾಗಿರುವ ಅಕ್ಕಿ ಮುಡಿ ಎಸೆಯುವ ಕ್ರಮವನ್ನು ಯಾರ್ಯಾರೋ ಮಾಡುವುದು ಬೇಡ ಅದಕ್ಕೆ ಅದರದ್ದೇ ಆದ ಗೌರವವಿದೆ, ಹುಲಿ ವೇಷ ಕಲೆಯನ್ನು ಉಳಿಸಿ ಎಂದು ವಿನಂತಿ ಮಾಡಿದ್ದಾರೆ.
ದಸರಾ ಬಂತೆಂದ್ರೆ ಮಂಗ್ಳೂರು ಕಡೆ ಎಲ್ಲಿ ನೋಡಿದ್ರೂ ಹುಲಿ ವೇಷಗಳದ್ದೇ ಸದ್ದು. ಅದರಲ್ಲೂ ದಸರಾ ಪ್ರಯುಕ್ತ ನಡೆಯುವ ಪಿಲಿ ನಲಿಕೆಯ ಸ್ಪರ್ಧೆಗಳಲ್ಲಿ ಹುಲಿ ವೇಷಗಳ ತಂಡಗಳು ತಾಸೆಯ (ಡೊಳ್ಳು) ಸದ್ದಿಗೆ ಕುಣಿಯುವುದನ್ನು ನೋಡುವುದೇ ಚೆಂದ. ಇನ್ನೂ ಈ ಹುಲಿಗಳ ನಾನಾ ರೀತಿಯ ಪಲ್ಟಿಗಳು, ನೆಲದಲ್ಲಿ ಹಾಕಿದ ನಾಣ್ಯ ಅಥವಾ ನೋಟುಗಳನ್ನು ಹಿಮ್ಮುಖವಾಗಿ, ತೆಗೆಯುವುದು, ಅಕ್ಕಿ ಮೂಟೆಗಳನ್ನು ಬಾಯಲ್ಲಿ ಕಚ್ಚಿ ಎತ್ತಿ ಬಿಸಾಡುವಂತಹ ವಿವಿಧ ರೀತಿಯ ಕಸರತ್ತುಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಸಾಮಾನ್ಯವಾಗಿ ತಂಡದ ಬಲಿಷ್ಟ ಹುಲಿಯು ಭಾರವಾದ ಅಕ್ಕಿ ಮೂಟೆಯನ್ನು ಹಲ್ಲಿನಿಂದ ಕಚ್ಚಿ ಎತ್ತಿ ಬಿಸಾಡುವುದು ಹಿಂದಿನಿಂದಲೂ ಬಂದಿರುವ ಒಂದು ಕ್ರಮ. ಆದ್ರೆ ಇತ್ತೀಚಿನ ದಿನಗಳಲ್ಲಿ ಹುಡಗೀರು, ಪುಟ್ಟ ಮಕ್ಕಳು ಕೂಡಾ ಅಕ್ಕಿ ಮೂಟೆಯನ್ನು ಎತ್ತಿ ಬಿಸಾಡುವ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಈ ರೀತಿ ಮಾಡಿ ಹುಲಿ ಕುಣಿತ ಕಲೆ, ಹಿಂದಿನಿಂದ ನಡೆದುಕೊಂಡು ಬಂದ ಸಂಸ್ಕೃತಿಗೆ ಅವಮಾನ ಮಾಡಬೇಡಿ ಎಂದು ಕರಾವಳಿಯ ಹೆಣ್ಣು ಹುಲಿ ಸುಷ್ಮಾ ರಾಜ್ ಅವರು ವಿನಂತಿ ಮಾಡಿದ್ದಾರೆ.
ಪಿಲಿ ನಲಿಕೆ (ಹುಲಿ ಕುಣಿತ) ಸ್ಪರ್ಧೆ ಅಥವಾ ಕಾರ್ಯಕ್ರಮದಲ್ಲಿ ಭಾರವಾದ ಅಕ್ಕಿ ಮುಡಿಯನ್ನು ಹಲ್ಲಿನಿಂದ ಕಚ್ಚಿ ತಲೆ ಮೇಲಿನಿಂದ ಹಿಂಭಾಗಕ್ಕೆ ಬಿಸಾಡುವ ಒಂದು ಕಟ್ಟುಪಾಡು ಕೂಡ ಇದೆ. ಸಾಮಾನ್ಯವಾಗಿ ತಂಡದ ಬಲಿಷ್ಟ ಹುಲಿವೇಷಧಾರಿ ಈ ಸಾಹಸವನ್ನು ಪ್ರದರ್ಶನ ಮಾಡುತ್ತಾರೆ. ಈ ಕಸರತ್ತು ತುಂಬಾನೇ ಕಷ್ಟಕರವಾಗಿದ್ದು, ಸುಮಾರು 40 ಕೆ.ಜಿಗಳಿರುವ ಈ ಭಾರವಾದ ಅಕ್ಕಿ ಮೂಟೆಯನ್ನು ಹಲ್ಲಲ್ಲಿ ಕಚ್ಚಿ ಎತ್ತುವಾಗ ಹುಲಿ ವೇಷಧಾರಿಗಳ ಹಲ್ಲು ಕಿತ್ತು ಹೋದಂತಹ ಮತ್ತು ಕೆಲವರ ಬೆನ್ನುಹುರಿಗೆ ಪೆಟ್ಟು ಬಿದ್ದಂತಹ ಘಟನೆಗಳು ಕೂಡಾ ನಡೆದಿದೆ. ಇದು ಅಷ್ಟು ಸುಲಭವಾದ ಸಾಹಸ ಅಲ್ವೇ ಅಲ್ಲ ಎಂದು ಸುಷ್ಮಾ ರಾಜ್ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಅಕ್ಕಿಮುಡಿಗೆ ಅದರದ್ದೇ ಆದ ಘನತೆ ಇದೆ, ಆದ್ರೆ ಇತ್ತೀಚಿಗೆ ಹುಡುಗೀರು, ಚಿಕ್ಕ ಚಿಕ್ಕ ಮಕ್ಳು ಈ ಅಕ್ಕಿ ಮುಡಿಯನ್ನು ಎತ್ತಿ ಬಿಸಾಡುವ ಟ್ರೆಂಡ್ ಶುರುವಾಗಿದೆ. ಈ ರೀತಿಯ ಹುಚ್ಚುತನವನ್ನು ನಿಲ್ಲಿಸಿ, ಹೀಗೆ ಮಾಡುವುದು ಮುಡಿ ಎತ್ತುವ ಗಂಡಸಿಗೆ, ಅವರ ಗತ್ತು ಗಾಂಭೀರ್ಯಕ್ಕೆ ನೀವು ಮಾಡುವ ಅವಮಾನ ಎಂದು ಹೇಳಿದ್ದಾರೆ. ನೀವು ಅಷ್ಟಕ್ಕೂ ಅಕ್ಕಿ ಮುಡಿ ಎತ್ತಲೇ ಬೇಕೆಂದಿದ್ರೆ ಸರಿಯಾದ ಕ್ರಮದ ಪ್ರಕಾರ ಮಾಡಿ, ಅದು ಬಿಟ್ಟು ಅಕ್ಕಿ ಮುಡಿಯ ಒಳಗೆ ಸ್ಪಾಂಜ್, ಹತ್ತಿ ತುಂಬಿಸಿ ಶೋಕಿಗೆ ಇದನ್ನೆಲ್ಲಾ ಮಾಡೋದು ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಹೃದಯಾಘಾತ, ದೇವರಂತೆ ಬಂದು ಪ್ರಯಾಣಿಕನ ಪ್ರಾಣ ಉಳಿಸಿದ ಟಿಟಿಇ
ಈ ಕುರಿತ ಪೋಸ್ಟ್ ಒಂದನ್ನು ಸುಷ್ಮಾ ರಾಜ್ (sushma_raj_tiger) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಹೌದು ಈ ರೀತಿ ಹುಚ್ಚಾಟಗಳನ್ನು ಮಾಡಲು ಬಿಡಬಾರದು, ನಮ್ಮ ಸಂಸ್ಕೃತಿಯನ್ನು ಉಳಿಸಲೇಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Thu, 26 September 24