Viral: ಮನೆ ಮಗನಂತಿದ್ದ ಶ್ವಾನದ ದುರಂತ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ದೃಶ್ಯಗಳು ನಮ್ಮ ಕಣ್ಣಂಚಲ್ಲಿ ನೀರು ತರಿಸುತ್ತವೆ. ಇದೀಗ ಅಂತಹದ್ದೊಂದು ಮನಕಲಕುವ ವಿಡಿಯೋ ವೈರಲ್‌ ಆಗಿದ್ದು, ಸಾಕು ನಾಯಿಯನ್ನು ಕಳೆದುಕೊಂಡು ಇಲ್ಲೊಂದು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಮದುವೆಯ ನಿಮಿತ್ತ ಪಶು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ಶ್ವಾನ ದಿಢೀರ್‌ ಸಾವನ್ನಪ್ಪಿದ್ದು, ಮನೆಯ ಮುದ್ದಿನ ಮಗನ ಸಾವಿನ ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹೆಚ್ಚಿನವರು ತಮ್ಮ ಸಾಕು ನಾಯಿಗಳನ್ನು ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ. ಬಹಳ ಪ್ರೀತಿಯಿಂದ ಹಾಗೂ ಮುದ್ದಾಗಿ ಸಾಕಿದ ಸಾಕುಪ್ರಾಣಿಗಳನ್ನು ಕಳೆದುಕೊಂಡಾಗ ಆಗುವ ನೋವು ಅಷ್ಟಿಷ್ಟಲ್ಲ. ಇದೀಗ ಇಲ್ಲೊಂದು ಕುಟುಂಬ ಕೂಡಾ ತಮ್ಮ ಮುದ್ದಿನ ಶ್ವಾನವನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಮದುವೆಯ ನಿಮಿತ್ತ ಪಶು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ಶ್ವಾನ ದಿಢೀರ್‌ ಆಗಿ ಕೊನೆಯುಸಿರೆಳೆದಿದ್ದು, ಮನೆಯ ಮುದ್ದಿನ ಮಗುವಿನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮನಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ಇಲ್ಲಿನ ಗೌಂಡಂಪಳಯಂದಲ್ಲಿ ಶರತ್‌ ಎಂಬವರ ಮನೆಯ ಶ್ವಾನ ಪಶು ಅಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆರೋಗ್ಯಕರವಾಗಿದ್ದ ಶ್ವಾನ ಹೀಗೆ ದೀಢೀರ್‌ ಆಗಿ ಹೇಗೆ ಸಾವನ್ನಪ್ಪಲು ಸಾಧ್ಯ ಎಂದು ಪಶು ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ರೊಚ್ಚಿಗೆದ್ದಿದ್ದಾರೆ.

ಶರತ್‌ ತಂಗಿ ಶ್ರುತಿಯ ಆರತಕ್ಷತೆ ಇದ್ದ ಕಾರಣ, ಇವರು ತಮ್ಮ ಸಾಕು ನಾಯಿಯನ್ನು ಮೆಟ್ಟುಪಾಳ್ಯಂ ರಸ್ತೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಒಂದು ದಿನದ ಮಟ್ಟಿಗೆ ಬಿಟ್ಟು ಬಂದಿದ್ದರು. ಮತ್ತು ನಾಯಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತೇವೆ ಎಂದು ವೈದ್ಯರಾದ ಸುರೇಂದರ್‌ ಮತ್ತು ಗೋಪಿಕಾ ಹೇಳಿದ್ದರು. ಜೊತೆಗೆ ಶರ್‌ 1200 ರೂಪಾಯಿ ಶುಲ್ಕವನ್ನು ಕೂಡಾ ಪಾವತಿಸಿದ್ದರು.

ಅದೇ ದಿನ ಸಂಜೆ ಶರತ್‌ ಅವರಿಗೆ ನಾಯಿಗೆ ಹುಷಾರಿಲ್ಲ ಎಂದು ಆಸ್ಪತ್ರೆಯಿಂದ ಫೋನ್‌ ಬಂದಿದ್ದು, ಕುಟುಂಬಸ್ಥರೆಲ್ಲರೂ ಆಸ್ಪತ್ರೆಗೆ ಹೋದಾಗ 11 ವರ್ಷಗಳಿಂದ ಮುದ್ದಾಗಿ ಸಾಕಿದ್ದ ಸಾಕು ನಾಯಿ ಶವವಾಗಿ ಆಸ್ಪತ್ರೆಯ ಬೆಡ್‌ ಅಲ್ಲಿ ಪತ್ತೆಯಾಗಿತ್ತು. ಈ ದೃಶ್ಯವನ್ನು ಕಂಡು ಆಘಾತಕ್ಕೊಳಗಾದ ಶರತ್‌ ಕುಟುಂಬ ಮುದ್ದಿನ ಶ್ವಾನವನ್ನು ಕಳೆದುಕೊಂಡ ದುಃಖದಲ್ಲಿ ಜೋರಾಗಿ ಅಳುತ್ತಾ, ಅಷ್ಟು ಆರೋಗ್ಯಕರವಾಗಿದ್ದ ಶ್ವಾನ ಇದ್ದಕ್ಕಿದ್ದಂತೆ ಸಾವನ್ನಪ್ಪಲು ಹೇಗೆ ಸಾಧ್ಯ ಎಂದು ಆಸ್ಪತ್ರೆಯವರ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ: ಡೀಪ್‌ ಫ್ರೈಡ್‌ ಫ್ರಾಗ್; ವಿಶಿಷ್ಟವಾದ ಕಪ್ಪೆ ಪಿಜ್ಜಾವನ್ನು ಪರಿಚಯಿಸಿದ ಪಿಜ್ಜಾ ಹಟ್‌

ಶ್ವಾನ ಹೇಗೆ ಸಾವನ್ನಪ್ಪಿತ್ತು ಎಂಬ ಬಗ್ಗೆ ಪಶು ಆಸ್ಪತ್ರೆಯವರು ಯಾವುದೇ ಮಾಹಿತಿಯನ್ನು ನೀಡದ ಕಾರಣ ಶರತ್‌ ಕುಟುಂಬಸ್ಥರು ಕೊಯಮತ್ತೂರಿನ ಸಾಯಿಬಾಬಾ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ಆಸ್ಪತ್ರೆಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ದೂರಿನ ಅಧಾರ ಮೇರೆಗೆ ನಾಯಿಯ ಸಾವಿಗೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

thatsTamil ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಶ್ವಾನವನ್ನು ಬಿಗಿದಪ್ಪಿ ಜೋರಾಗಿ ಅಳುತ್ತಿರುವ ಹಾಗೂ ನಮ್ಮ ಮಗು ಹೇಗೆ ಸಾವನ್ನಪ್ಪಲು ಸಾಧ್ಯ, ನಮಗೆ ನಮ್ಮ ಮಗು ಬೇಕು ಅಷ್ಟೇ ಎಂದು ಕುಟುಂಬಸ್ಥರು ಆಸ್ಪತ್ರೆಯವರ ವಿರುದ್ಧ ಕಿಡಿ ಕಾರಿದಂತಹ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us