ಮದ್ಯದ ಬಾಟಲಿಗಳಿಗೆ ಆರತಿ ಎತ್ತಿ, ಪೂಜೆ ಸಲ್ಲಿಸಿ, ನಮಸ್ಕರಿಸಿ, ಮುತ್ತನಿಟ್ಟು ಸಂಭ್ರಮಿಸಿದ ಮದ್ಯಪ್ರಿಯ; ವಿಡಿಯೋ ವೈರಲ್
ಮೊದಲಿಗೆ ಆರತಿಯೊಂದನ್ನು ಹಚ್ಚಿ ಅಂಗಡಿ ಮುಂದಿಟ್ಟ ಆತ, ಮದ್ಯ ಖರೀದಿಸಿ ಬಾಟಲಿಗಳಿಗೆ ಮುತ್ತು ಕೊಟ್ಟಿದ್ದಾನೆ. ಆಮೇಲೆ, ಅವುಗಳನ್ನು ಅಲ್ಲಿಯೇ ಮದ್ಯದಂಗಡಿ ಮುಂದೆ ಇಟ್ಟು ಶ್ರದ್ಧಾಪೂರ್ವಕವಾಗಿ ನಮಸ್ಕರಿಸಿ, ದೇವರನ್ನು ಆರಾಧಿಸುವಂತೆಯೇ ಆರಾಧಿಸಿದ್ದಾನೆ.
ಚೆನ್ನೈ: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ತಮಿಳುನಾಡು ರಾಜ್ಯದಲ್ಲಿ ಹೇರಲಾಗಿದ್ದ ಲಾಕ್ಡೌನ್ ಜೂನ್ 21ರತನಕ ವಿಸ್ತರಣೆಯಾಗಿದೆ. ಆದರೆ, ಕೆಲವೊಂದಷ್ಟು ನಿಯಮಾವಳಿಗಳನ್ನು ಸಡಿಲಿಸಲಾಗಿದ್ದು, 27 ಜಿಲ್ಲೆಗಳಲ್ಲಿ ಮದ್ಯಪ್ರಿಯರಿಗಾಗಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಬಾರ್, ವೈನ್ ಶಾಪ್ಗಳನ್ನು (TASMAC) ನಿಗದಿತ ಅವಧಿಯಲ್ಲಿ ತೆರೆಯಲು ಮುಖ್ಯಮಂತ್ರಿ ಸ್ಟಾಲಿನ್ ಸಮ್ಮತಿ ಸೂಚಿಸಿದ್ದಾರೆ. ಇದಕ್ಕಾಗಿ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆಯಾದರೂ ಮದ್ಯಪ್ರಿಯರು ಮಾತ್ರ ಸಂತುಷ್ಟಗೊಂಡಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಮದ್ಯದ ಬಾಟಲಿಗೆ ಚುಂಬಿಸಿ, ನಂತರ ಆರತಿ ಬೆಳಗಿ ನಮಸ್ಕರಿಸಿ ಪೂಜೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆಯು ತಮಿಳುನಾಡಿನ ಮದುರೈ ಪಟ್ಟಣದಲ್ಲಿ ನಡೆದಿದೆ ಎನ್ನಲಾಗಿದ್ದು, ಮದ್ಯದ ಮಳಿಗೆ ತೆರೆದಿರುವುದನ್ನು ಕಂಡು ಸಂತಸಗೊಂಡ ವ್ಯಕ್ತಿ ತನ್ನ ಖುಷಿಯನ್ನು ಹೀಗೆ ವ್ಯಕ್ತಪಡಿಸಿದ್ದಾನೆ. ಮೊದಲಿಗೆ ಆರತಿಯೊಂದನ್ನು ಹಚ್ಚಿ ಅಂಗಡಿ ಮುಂದಿಟ್ಟ ಆತ, ಮದ್ಯ ಖರೀದಿಸಿ ಬಾಟಲಿಗಳಿಗೆ ಮುತ್ತು ಕೊಟ್ಟಿದ್ದಾನೆ. ಆಮೇಲೆ, ಅವುಗಳನ್ನು ಅಲ್ಲಿಯೇ ಮದ್ಯದಂಗಡಿ ಮುಂದೆ ಇಟ್ಟು ಶ್ರದ್ಧಾಪೂರ್ವಕವಾಗಿ ನಮಸ್ಕರಿಸಿ, ದೇವರನ್ನು ಆರಾಧಿಸುವಂತೆಯೇ ಆರಾಧಿಸಿದ್ದಾನೆ.
ಆತ ಮದ್ಯದ ಬಾಟಲಿಗಳಿಗೆ ಆರತಿ ಬೆಳಗಿ ಪೂಜಿಸುವುದನ್ನು ನೋಡಿ ಇನ್ನೋರ್ವ ವ್ಯಕ್ತಿಯೂ ನಡುವಲ್ಲಿ ಬಂದು ತಾನು ಖರೀದಿಸಿದ ಬಾಟಲಿಯನ್ನು ಪಕ್ಕಕ್ಕಿಟ್ಟು ನಮಸ್ಕರಿಸಿ ತೆರಳಿದ್ದಾನೆ. ಈ ವ್ಯಕ್ತಿ ಮಾತ್ರ ಅದ್ಯಾವುದರ ಪರಿವೇ ಇಲ್ಲವೆಂಬಂತೆ ಎರಡೂ ಕೈಗಳಿಂದ ಬಾಟಲಿಗಳನ್ನು ಎತ್ತಿ ಹಿಡಿದು, ನೆರೆದವರಿಗೆಲ್ಲರಿಗೂ ತೋರಿಸಿ ಬಳಿಕ ಕೆಳಗಿಟ್ಟು, ನಾಲ್ಕೈದು ಬಾರಿ ನಮಸ್ಕಾರ ಮಾಡಿದ್ದಾನೆ.
#WATCH | A local in Madurai worships bottles of liquor after Tamil Nadu govt permits the reopening of liquor shops in the state pic.twitter.com/sIp9LUR0GM
— ANI (@ANI) June 14, 2021
ಈ ಘಟನೆಯ ದೃಶ್ಯಾವಳಿಗಳೆಲ್ಲವೂ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲವರು ಈ ವ್ಯಕ್ತಿ ಯಾವ ಮಟ್ಟಿಗೆ ಮದ್ಯದ ದಾಸನಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನೂ ಹಲವರು ಆತನ ಸಂತಸ ಕಂಡು ಖುಷಿಪಟ್ಟಿದ್ದಾರೆ. ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟು ಮದ್ಯದಂಗಡಿ ಮುಂದೆಯೇ ಬಾಟಲಿಗಳಿಗೆ ಪೂಜೆ ಸಲ್ಲಿಸಿರುವ ಈ ವ್ಯಕ್ತಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯನಾಗುತ್ತಿದ್ದು, ಇದನ್ನೊಂದು ಹಾಸ್ಯದ ವಸ್ತುವಾಗಿ ಅನೇಕರು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನನ್ನ ಮನೆಯಲ್ಲಿ ಕೊರೊನಾ ಔಷಧಿ ಐತಿ ಬಾ ಕೊಡ್ತೀನಿ ಎಂದ ಕುಂದಾನಗರಿ ಮದ್ಯಪ್ರಿಯ!
ರಾಮನಗರದಲ್ಲಿ ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಸಂಬಂಧಿಕರು; ವಿಡಿಯೋ ವೈರಲ್
Published On - 11:17 am, Tue, 15 June 21