Viral Video: ತುಮಕೂರಿನ ಈ ಮಗ್ಗಿಬಾಲೆಗೆ 45ರ ಮಗ್ಗಿಯೂ ನೀರುಕುಡಿದಂತೆ!

Multiplication Tables : ನಗರದ ಮಕ್ಕಳಿಗೆ ನೂರೆಂಟು ಕಲಿಕಾ ವಿಧಾನಗಳು. ಗ್ರಾಮೀಣ ಮಕ್ಕಳಿಗೆ ಬೆರಳೆಣಿಕೆಯಷ್ಟು. ಆದರೂ ದೊರೆತ ಅವಕಾಶದಲ್ಲಿಯೇ ತಮ್ಮ ಆಸಕ್ತಿಯನ್ನು ಕೌಶಲವನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸುತ್ತವೆ. ಈ ವಿಡಿಯೋ ನೋಡಿ.

Viral Video: ತುಮಕೂರಿನ ಈ ಮಗ್ಗಿಬಾಲೆಗೆ 45ರ ಮಗ್ಗಿಯೂ ನೀರುಕುಡಿದಂತೆ!
ತುಮಕೂರಿನ ಬೆತ್ತಲೂರು ಶಾಲೆಯ ವಿದ್ಯಾರ್ಥಿನಿ ಎಚ್. ಎಸ್. ಹೇಮಶ್ರೀ
Follow us
ಶ್ರೀದೇವಿ ಕಳಸದ
|

Updated on:Jul 27, 2023 | 5:28 PM

Tumkur : ಚಿಕ್ಕಂದಿನಲ್ಲಿ ಮಗ್ಗಿ ಹೇಳು ಎಂದರೆ ಕಣ್ಣುಗಳು ಸೂರನ್ನು ನೋಡುತ್ತಿದ್ದವು ಇಲ್ಲವೆ ಗೋಡೆಯನ್ನು. ಹೇಳು ಎಂದವರ ಕಣ್ಣನ್ನು ನೋಡಲು ಧೈರ್ಯ ಬೇಕಲ್ಲ! ನಿದ್ದೆಯೋ, ತಲೆನೋವೋ ಹೊಟ್ಟೆನೋವೋ ಹೀಗೆ ಏನೋ ಒಂದು ಆವರಿಸಿದಂತಾಗಿ ಬೀಸುವ ಕಲ್ಲಿನಿಂದ ತಪ್ಪಿಸಿಕೊಂಡರೆ ಸಾಕಪ್ಪಾ ಎನ್ನಿಸುತ್ತಿತ್ತು. ಆದರೆ ಎಷ್ಟು ದಿನವಂತ? ಕೊನೆಗೂ ಕಣ್ಣಲ್ಲಿ ನೀರು ಸುರಿಸಿಕೊಂಡು ಹಠಕ್ಕೆ ಬಿದ್ದು ಒಂದೊಂದು ಮಗ್ಗಿಯನ್ನು (Multiplication Tables) ಬಾಯಿಪಾಠ ಮಾಡಿ ಒಪ್ಪಿಸಿಬಿಟ್ಟರೆ ಜಗತ್ತನ್ನೇ ಗೆದ್ದಂಥ ಬೀಗು! ಇದೀಗ ಈ ಮಗ್ಗಿ ಎಂಬ ಕಡಲೆಯನ್ನು ಸರಳವಾಗಿ ಹೇಳಿದ್ದಾಳೆ ತುಮಕೂರಿನ ಬೆತ್ತಲೂರಿನಲ್ಲಿರುವ ಜಿಎಲ್​ಪಿಎಸ್​ ಶಾಲೆಯಯಲ್ಲಿ 4ನೇ ತರಗತಿ ಓದುತ್ತಿರುವ ಎಚ್. ಎಸ್​. ಹೇಮಶ್ರೀ.

ಈ ವಯಸ್ಸಿಗೆ 20ರ ತನಕ ಮಗ್ಗಿ ಗೊತ್ತಿದ್ದರೆ ಸಾಕು. ಆದರೆ ಈ ವಿಡಿಯೋದಲ್ಲಿ ಹೇಮಶ್ರೀ 36 ಮಗ್ಗಿಯನ್ನು ಹೇಳಿದ್ದಾಳೆ. ಈತನಕ ಆಕೆಗೆ 45ರ ತನಕ ಮಗ್ಗಿ ಹೇಳುವುದು ಈಕೆಗೆ ಕರಗತವಾಗಿದೆ. ಈಕೆಯ ಶಿಕ್ಷಕರು ಈಕೆಯ ಆಸಕ್ತಿಯನ್ನು ಪ್ರೋತ್ಸಾಹಿಸಿ ಈ ವಿಡಿಯೋ ಮಾಡಿದ್ದಾರೆ.

ಮಗ್ಗಿಯೋ ಮತ್ತೊಂದೋ ಒಟ್ಟಿನಲ್ಲಿ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇರುತ್ತದೆಯೋ ಅದಕ್ಕೆ ಬಾಲ್ಯದಿಂದಲೇ ನೀರೆರೆಯುವುದು ಪೋಷಕರ ಮತ್ತು ಶಿಕ್ಷಕರ ಕರ್ತವ್ಯ. ಮಕ್ಕಳ ಆಸಕ್ತಿಯನ್ನು ಪೋಷಿಸಿದರೆ ಕ್ರಮೇಣ ಅವರಿಗೆ ಶಾಲಾಪಠ್ಯದಲ್ಲಿ ಮತ್ತು ಇನ್ನಿತರೇ ಕಲೆ, ಸಂಗತಿಗಳಲ್ಲಿ ಚುರುಕಿನಿಂದ ತೊಡಗಿಕೊಳ್ಳಲು ಉತ್ಸಾಹ ಹೊಮ್ಮುತ್ತದೆ. ಇದೇ ಅವರಲ್ಲಿ ಕ್ರಮೇಣ ಅಧ್ಯಯನ ಮನೋಭಾವವನ್ನೂ ಮತ್ತು ಶಿಸ್ತನ್ನೂ ಕಲಿಸುತ್ತದೆ.

ಇದನ್ನೂ ಓದಿ : Viral Video: ಕೈಲಾಸ ಪರ್ವತದಲ್ಲಿ ಶಿವ; ‘ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ’

ಗಣಿತ ಅಥವಾ ಇನ್ನ್ಯಾವುದೋ ವಿಷಯಕ್ಕೆ ಸಂಬಂಧಿಸಿ ಈಗಂತೂ ನಾನಾ ನಮೂನೆಯ ವಿಧಾನಗಳು, ಪರಿಕಲ್ಪನೆಗಳು ಮಕ್ಕಳ ಕಲಿಕೆಗೆ ಲಭ್ಯ. ಅವೇನಿದ್ದರೂ ನಗರದ ಮಕ್ಕಳಿಗೆ ಮಾತ್ರ. ಗ್ರಾಮೀಣ ಶಾಲೆಯ ಮಕ್ಕಳು ಮಾತ್ರ ಸಾಂಪ್ರದಾಯಿಕ ಕ್ರಮವನ್ನೇ ಅನುಸರಿಸುತ್ತಿವೆ. ಇರಲಿ, ಯಾವ ಕ್ರಮವಾದರೇನು? ಒಟ್ಟಿನಲ್ಲಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡು ತಮಗೆ ಬೇಕಾದ ವಿಷಯದಲ್ಲಿ ಪರಿಣತಿ ಸಾಧಿಸುವುದು ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾವಲಂಬಿಯಾಗಿ ಆತ್ಮವಿಶ್ವಾಸದಿಂದ ಬದುಕುವುದು ಮುಖ್ಯ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:25 pm, Thu, 27 July 23