Viral : ಹೊರಗೆ ಕಾಲಿಟ್ಟರೆ ಉರಿಉರಿ ಬಿಸಿಲಷ್ಟೇ ಅಲ್ಲ, ಉಷ್ಣಗಾಳಿ ಕೂಡ. ಅದರಲ್ಲೂ ಉತ್ತರ ಭಾರತದ ಭಾಗಗಳಲ್ಲಿ ಈ ಹಾವಳಿ ಹೇಳತೀರದು. ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯ 77 ವರ್ಷದ ಲಲ್ಲೂರಾಮ್ ಈ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂದು ಹೊಸ ಐಡಿಯಾ ಕಂಡುಕೊಂಡಿದ್ದು ಇದೀಗ ವೈರಲ್ ಆಗಿದೆ. ನೆಟ್ಟಿಗರು ಇವರ ಈ ಚಾತುರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ಧಾರೆ. ಲಲ್ಲೂರಾಮ್ ಪ್ಲಾಸ್ಟಿಕ್ ಹೆಲ್ಮೆಟ್ ಧರಿಸಿ, ಅದಕ್ಕೆ ಸೋಲಾರ್ ಫ್ಯಾನ್ ಜೋಡಿಸಿಕೊಂಡು ರಸ್ತೆಯಲ್ಲಿ ಹೊಂಟರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅವರನ್ನು ಹಿಂಬಾಲಿಸಿ ಸೋಜಿಗದಿಂದ ನೋಡತೊಡಗುತ್ತಿದ್ದಾರೆ.
ಈ ವ್ಯಕ್ತಿಗೆ ಇಂಥ ಐಡಿಯಾ ಹೇಗೆ ಬಂದಿತು? ಲಲ್ಲೂರಾಮ್ ಒಬ್ಬ ಹೂ ವ್ಯಾಪಾರಿ. ಮನೆಮನೆಗಳಿಗೆ ಹೋಗಿ ಹೂ ಮಾರುವುದು ಇವರ ನಿತ್ಯದ ಕಾಯಕ. ವಯಸ್ಸು ಮತ್ತು ಬಿಸಿಲು ಇವರನ್ನು ಸುಸ್ತು ಮಾಡುತ್ತ ಹೋಯಿತು. ಆರೋಗ್ಯ ಕೈಕೊಟ್ಟು ಕೆಲಸವನ್ನು ನಿಭಾಯಿಸಲು ಕಷ್ಟವಾಗತೊಡಗಿತು. ಹೀಗಾದಾಗೆಲ್ಲ ಅವರ ಸರಕು ನಷ್ಟವಾಗತೊಡಗಿತು, ಹೇಳಿಕೇಳಿ ಹೂ, ಅರ್ಧ ದಿನದಲ್ಲಿ ಬಾಡಿಹೋಗುವಂಥ ಕೋಮಲತೆ. ಬಹುಮುಖ್ಯವಾಗಿ ಸಂಸಾರಜೀವನ ನಡೆಸುವವರಾರು? ಕೊನೆಗೆ ಈ ಬಿಸಿಲಿನಿಂದ ಹೇಗೆ ರಕ್ಷಿಸಿಕೊಳ್ಳುವುದು ಎಂದು ಯೋಚಿಸುತ್ತ ಪುಟ್ಟ ಟೇಬಲ್ ಫ್ಯಾನ್ ಅನ್ನು ಹೆಲ್ಮೆಟ್ಗೆ ಜೋಡಿಸಿಕೊಂಡರು. ಅದು ಸೌರಶಕ್ತಿಯ ಸಹಾಯದಿಂದ ಚಲಿಸುವಂತೆ ವ್ಯವಸ್ಥೆ ಮಾಡಿಕೊಂಡರು.
ಇದನ್ನು ರೂಪಿಸಲು ಅಗತ್ಯವಿರುವ ವಸ್ತುಗಳನ್ನು ಪರಿಚಿತ ಜನರಿಂದ ಕಡ ಪಡೆದುಕೊಂಡರು. ಕಾರಣ, ಲಲ್ಲೂರಾಮ್ ಅವರ ಅನಾರೋಗ್ಯದಿಂದ ವ್ಯಾಪಾರ ಕುಸಿದಿತ್ತಾದ್ದರಿಂದ ಅವರ ಬಳಿ ಹೊಸ ವಸ್ತುಗಳನ್ನು ಕೊಂಡುಕೊಳ್ಳಲು ಹಣವಿರಲಿಲ್ಲ. ಏಕೆಂದರೆ ನಿತ್ಯ ಮನೆಮನೆಗೆ ಹೋಗಿ ಹೂಮಾರಿದರಷ್ಟೇ ಕುಟುಂಬದವರ ಹೊಟ್ಟೆ ತುಂಬುವಂಥ ಪರಿಸ್ಥಿತಿ.
ಕಷ್ಟದಲ್ಲೇ ಹೊಸ ಆಲೋಚನೆಗಳು ಹುಟ್ಟುತ್ತವೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?
ಮತ್ತಷ್ಟು ವೈರಲ್ ನ್ಯೂಸ್ ಗಾಗಿ ಕ್ಲಿಕ್ ಮಾಡಿ
Published On - 12:11 pm, Wed, 21 September 22