Video: ಮನೆಯಲ್ಲಿ ಕರೆಂಟ್ ಇಲ್ಲ, ಸೆಕೆ ತಡೆಯಲಾಗದೆ ಎಟಿಎಂ ಎಸಿಗೆ ಬಂದು ಕುಳಿತ ಕುಟುಂಬ
ಕೆಲವೆಡೆ ವರುಣನ ಆರ್ಭಟ ಜೋರಾಗಿದ್ದರೂ, ಇನ್ನು ಕೆಲವು ಕಡೆಗಳಲ್ಲಿ ಜನರು ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಬೇಗೆಯ ನಡುವೆ ಪದೇ ಪದೇ ವಿದ್ಯುತ್ ಕಡಿತವಾದರೆ ಆ ಪರಿಸ್ಥಿತಿಯಂತೂ ಕೇಳುವುದೇ ಬೇಡ. ವಿದ್ಯುತ್ ಕಡಿತ ಹಾಗೂ ಬಿಸಿಲಿನ ತಾಪದಿಂದ ಬೇಸೆತ್ತ ಕುಟುಂಬವೊಂದು ಎಟಿಎಂ ಬೂತ್ ನ್ನೇ ಆಶ್ರಯ ತಾಣವನ್ನಾಗಿಸಿಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಉತ್ತರ ಪ್ರದೇಶ, ಮೇ 22 : ಸಾಮಾನ್ಯವಾಗಿ ಭಾರೀ ಮಳೆ, ಗಾಳಿಗೆ ವಿದ್ಯುತ್ ವ್ಯತ್ಯಯ (Power Cut) ಆಗೋದೆನೋ ಸಹಜ. ಆದರೆ ಸುಡು ಬಿಸಿಲಿನ ನಡುವೆ ಪದೇ ಪದೇ ವಿದ್ಯುತ್ ಕಡಿತವಾದರೆ ಜನರ ಪರಿಸ್ಥಿತಿ ಹೇಗಿರಬಹುದು ಒಮ್ಮೆ ಊಹಿಸಿ. ಆದರೆ ಉತ್ತರ ಪ್ರದೇಶದ ಝಾನ್ಸಿ (Jhansi of Uttar Pradesh) ಯ ಜನರು ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಕಡಿತದಿಂದ ಹೈರಾಣಾಗಿ ಹೋಗಿದ್ದಾರೆ. ವಿದ್ಯುತ್ ಕಡಿತದ ವಿರುದ್ಧ ಜನರು ಪ್ರತಿಭಟನೆ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ. ಇದೀಗ ಕುಟುಂಬವೊಂದು ಈ ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಎಟಿಎಂ (ATM) ಬೂತ್ ನಲ್ಲೇ ಆಶ್ರಯ ಪಡೆದುಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿದ್ಯುತ್ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
@IndianTechGuide ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕುಟುಂಬವೊಂದು ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಇಲ್ಲಿ ಇಬ್ಬರೂ ಮಹಿಳೆಯರು ತನ್ನ ಇಬ್ಬರೂ ಮಕ್ಕಳೊಂದಿಗೆ ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಅದಲ್ಲದೇ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆ, ನಾವು ಇರುವ ಪ್ರದೇಶದಲ್ಲಿ ಒಂದು ತಿಂಗಳಿನಿಂದ ವಿದ್ಯುತ್ ಕಡಿತವಾಗುತ್ತಿದೆ. ಹೀಗಾಗಿ ನಾವು ಎಟಿಎಂ ನಲ್ಲಿ ಆಶ್ರಯ ಪಡೆದುಕೊಂಡಿದ್ದೇವೆ. ನಾವು ಇಲ್ಲಿರುವುದಕ್ಕೆ ಯಾರು ಕೂಡ ಏನು ಹೇಳಿಲ್ಲ. ಯಾರಾದ್ರೂ ಬಂದು ನಮ್ಮನ್ನು ಇಲ್ಲಿ ಇರಬೇಡಿ ಎಂದರೆ ರಸ್ತೆಯ ಮೇಲೆಯೇ ನಾವು ಮಲಗಬೇಕು ಎಂದಿದ್ದಾರೆ.
ಇದನ್ನೂ ಓದಿ : ಬೈಕ್ ಓಡಿಸುತ್ತಿದ್ದ ಗಂಡನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಹೆಂಡತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
🚨 Locals struggling with power cuts have now sought refuge at an ATM in Jhansi, Uttar Pradesh.
(📹 –@Benarasiyaa) pic.twitter.com/69hA6U1ofS
— Indian Tech & Infra (@IndianTechGuide) May 21, 2025
ಮೇ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋವು ಈಗಾಗಲೇ ನಾಲ್ಕೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ವಿದ್ಯುತ್ ಇಲಾಖೆಯ ವಿರುದ್ಧ ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, ಉತ್ತರ ಪ್ರದೇಶದಲ್ಲಿ ಭ್ರಷ್ಟ ಇಲಾಖೆ ಯಾವುದಾದರೂ ಇದ್ದರೆ ಅದುವೇ ವಿದ್ಯುತ್ ಇಲಾಖೆ, ಇದನ್ನು ತಕ್ಷಣವೇ ಖಾಸಗಿಕರಣಗೊಳಿಸಬೇಕು ಎಂದಿದ್ದಾರೆ. ಇನ್ನೊಬ್ಬರು, ಇದರಲ್ಲಿ ಯಾವುದೇ ತಪ್ಪಿಲ್ಲ, ಅಧಿಕಾರಿಗಳು ಮೂಲಭೂತ ಸೌಕಾರ್ಯ ಒದಗಿಸಲು ಸಾಧ್ಯವಾಗದಿದ್ದಾಗ, ಜನಸಾಮಾನ್ಯರು ಇಂತಹ ವಿಧಾನಗಳನ್ನು ಅನುಸರಿಸಬಹುದು. ನಾವು ಜನರನ್ನು ದೂಷಿಸಬಾರದು ಹಾಗೂ ಪ್ರಶ್ನಿಸಬಾರದು ಎಂದಿದ್ದಾರೆ. ಮತ್ತೊಬ್ಬರು, ಇದು ನಮ್ಮ ದೇಶದ ಸ್ಥಿತಿ, ಹೆಸರಿಗಷ್ಟೇ ಅಭಿವೃದ್ಧಿ,ಆದರೆ ಜನರು ಒದ್ದಾಡುತ್ತಿರುವುದು ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








