Year Ender 2024: ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಹೆಸರು ಯಾರದ್ದು ಗೊತ್ತಾ? ಕ್ರೀಡಾಪಟುಗಳೇ ಮೇಲುಗೈ
2024ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಮೊದಲ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ ಹಾರ್ದಿಕ್ ಪಾಂಡ್ಯ, ಶಶಾಂಕ್ ಸಿಂಗ್, ಅಭಿಷೇಕ್ ಶರ್ಮಾ ಮತ್ತು ಲಕ್ಷ್ಯ ಸೇನ್ ಸೇರಿದಂತೆ ಇತರ ಕ್ರೀಡಾಪಟುಗಳು ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸೆರ್ಚ್ ಆದ ಭಾರತೀಯ ವ್ಯಕ್ತಿಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸಾಕಷ್ಟು ಸಿನಿಮಾ ಸೆಲೆಬ್ರೆಟಿಗಳನ್ನು ಹಿಂದಿಕ್ಕಿ ಕುಸ್ತಿಪಟು ವಿನೇಶ್ ಫೋಗಟ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ, ಶಶಾಂಕ್ ಸಿಂಗ್, ಅಭಿಷೇಕ್ ಶರ್ಮಾ ಮತ್ತು ಲಕ್ಷ್ಯ ಸೇನ್ ಸೇರಿದಂತೆ ಇತರ ನಾಲ್ಕು ಕ್ರೀಡಾಪಟುಗಳು ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ವಿನೇಶ್ ಫೋಗಟ್:
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಸಂಗತಿ ಭಾರೀ ಸದ್ದು ಮಾಡಿತ್ತು. ವಿನೇಶ್ ಫೋಗಟ್ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ಅನರ್ಹಗೊಂಡರು. ಈ ಮೂಲಕ ಭಾರತದ ಮೊದಲ ಮಹಿಳಾ ಒಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವ ಆಕೆಯ ಕನಸು ಪುಡಿಪುಡಿಯಾಯಿತು. ಇದರ ನಂತರ, ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದರು ಮತ್ತು ಬೆಳ್ಳಿ ಪದಕವನ್ನು ನೀಡಬೇಕೆಂದು ಕ್ರೀಡಾ ಮಧ್ಯಸ್ಥಿಕೆ (ಸಿಎಎಸ್) ನಲ್ಲಿ ಪ್ರಕರಣವನ್ನು ದಾಖಲಿಸಿದರು. ಬಳಿಕ ರಾಜಕೀಯಕ್ಕೆ ಪ್ರವೇಶಿಸಿ 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರು. ಅವರು ಜುಲಾನಾದಿಂದ ವಿಧಾನಸಭೆಯ ಸದಸ್ಯರಾಗಿ (MLA) ಚುನಾಯಿತರಾಗುವ ಮೂಲಕ ಜೀವನದಲ್ಲಿ ತಮ್ಮ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. ಈ ಎಲ್ಲಾ ಕಾರಣಗಳಿಂದ ಗೂಗಲ್‌ನ ಸೆರ್ಚ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: ರತನ್ ಟಾಟಾರಿಂದ ಐಪಿಎಲ್ ವರೆಗೆ ಭಾರತೀಯರು ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಟಾಪ್ 10 ವಿಷಯಗಳಿವು
ಸೆರ್ಚ್ ಎಂಜಿನ್ ಗೂಗಲ್ ಬಿಡುಗಡೆ ಮಾಡಿದ ಫಲಿತಾಂಶಗಳ ಪ್ರಕಾರ,ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎರಡನೇ ಸ್ಥಾನ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ ಮತ್ತು ನಟ ಚಿರಾಗ್ ಪಾಸ್ವಾನ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 2024 ರ ಕೇಂದ್ರ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಸಖತ್ ಫೇಮಸ್ ಆಗಿದ್ದ ಚಿರಾಗ್ ಪಾಸ್ವಾನ್.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ (MI) ನಾಯಕರಾಗಿ ಜೊತೆಗೆ ವಿಚ್ಛೇದನದಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದ ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಜೊತೆಗೆ 2024ರಲ್ಲಿ ಆಂಧ್ರಪ್ರದೇಶದ 10 ನೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಟ ಪವನ್ ಕಲ್ಯಾಣ್ 5ಸ್ಥಾನದಲ್ಲಿದ್ದಾರೆ.
ಇದಲ್ಲದೇ ಕ್ರಮವಾಗಿ 6ನೇ ಸ್ಥಾನದಲ್ಲಿ ಕ್ರಿಕೆಟಿಗ ಶಶಾಂಕ್ ಸಿಂಗ್, ನಂತರ 7ನೇ ಸ್ಥಾನದಲ್ಲಿ ನಟಿ ಪೂನಂ ಪಾಂಡೆ, 8ನೇ ಸ್ಥಾನದಲ್ಲಿ ರಾಧಿಕಾ ಮರ್ಚೆಂಟ್ ಹಾಗೂ 9 ಮತ್ತು 10ರಲ್ಲಿ ಕ್ರಿಕೆಟಿಗ ಅಭಿಷೇಕ್ ಶರ್ಮಾ ಮತ್ತು ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ