Viral News : ಎರಡು ಮಹಾಯುದ್ಧಗಳಿಗೆ ಸಾಕ್ಷಿಯಾಗಿದ್ದ, ಜಗತ್ತಿನ ಅತೀ ಹಿರಿಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದ ಫ್ರೆಂಚ್ನ ನನ್ ಲ್ಯೂಸೈಲ್ ರ್ಯಾಂಡನ್ (Lucile Randon) ನಿಧನ ಹೊಂದಿದ್ದಾರೆ. ಸಿಸ್ಟರ್ ಆ್ಯಂಡ್ರೆ (Sister Andre) ಎಂಬ ಹೆಸರಿನಿಂದ ಖ್ಯಾತರಾಗಿದ್ದ ಅವರಿಗೆ 118 ವಯಸ್ಸಾಗಿತ್ತು. ಇವರು ದಕ್ಷಿಣ ಆಫ್ರಿಕಾದಲ್ಲಿ 1904ರ ಫೆ. 11ರಂದು ಜನಿಸಿದ್ದರು. ‘ನಿನ್ನೆ ರಾತ್ರಿ ಮಲಗಿದಲ್ಲಿಯೇ ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ ಅವರ ಪ್ರೀತಿಯ ಸಹೋದರನನ್ನು ಸೇರುವ ಇಚ್ಛೆಯಾಗಿತ್ತು. ಈಗದು ಈಡೇರಿದೆ’ ಎಂದು ಸೇಂಟ್ ಕ್ಯಾಥರೀನ್ ಲೇಬರ್ ನರ್ಸಿಂಗ್ ಹೋಂನ ಡೇವಿಡ್ ತವೆಲ್ಲಾ ತಿಳಿಸಿದ್ಧಾರೆ.
ಕಳೆದ ವರ್ಷ ತೀರಿದ ಜಪಾನಿನ 119 ವರ್ಷದ ಕೇನ್ ತನಕಾ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದರು. ಆನಂತರ ಸಿಸ್ಟರ್ ಆ್ಯಂಡ್ರೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2022ರ ಏಪ್ರಿಲ್ನಲ್ಲಿ ಗಿನ್ನೀಸ್ ವಿಶ್ವದಾಖಲೆ ಪಟ್ಟಿಯಲ್ಲಿ ಇವರ ಹೆಸರು ಸೇರಿತು.
ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್ಗೆ ಹೆಸರಾದವರು ಯಾರು ಗೊತ್ತಾ?
ಸಿಸ್ಟರ್ ಆ್ಯಂಡ್ರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಮಕ್ಕಳಿಗೆ ಶಿಕ್ಷಕಿಯಾಗಿ ಪಾಠ ಹೇಳಿಕೊಟ್ಟಿದ್ದರು. ಜೊತೆಗೆ ಶೈಕ್ಷಣಿಕ ಆಡಳಿತ ಉಸ್ತುವಾರಿಯನ್ನೂ ನಿಭಾಯಿಸಿದ್ದರು. ಯುದ್ಧದ ಬಳಿಕ ಸುಮಾರು ಮೂವತ್ತು ವರ್ಷಗಳ ಕಾಲ ಹಿರಿಯನಾಗರಿಕರು ಮತ್ತು ಅನಾಥರ ಏಳಿಗೆಗಾಗಿ ಕೆಲಸ ಮಾಡಿದರು. ಕ್ಯಾಥೊಲಿಕ್ ಸನ್ಯಾಸಿನಿಯಾಗುವ ಮೊದಲು ಮೂವತ್ತು ವರ್ಷಗಳ ಕಾಲ ಫ್ರಾನ್ಸ್ನ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರು.
ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ವೈದ್ಯ ಹೊವಾರ್ಡ್ ಟಕರ್ 100ನೇ ವಯಸ್ಸಿನಲ್ಲಿಯೂ ವೃತ್ತಿನಿರತ
ಇವರು ಬದುಕುಳಿದದ್ದು ಪವಾಡವೇ. ಇವರು ಎರಡು ಮಹಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೂ ಪಾರಾಗಿದ್ದರು. ಒಂದು, 1918ರಲ್ಲಿ ಸ್ಪ್ಯಾನಿಷ್ ಫ್ಲ್ಯೂ ಎಂಬ ಸಾಂಕ್ರಾಮಿಕ ರೋಗ. ಇನ್ನೊಂದು ಕೊವಿಡ್, 2021ರ ಜನವರಿ 16ರಂದು ಕೊರೊನಾ ಪಾಸಿಟಿವ್ಗೆ ಈಡಾಗಿದ್ದರು. ಆದರೆ ಆನಂತರವೂ ಚೇತರಿಸಿಕೊಂಡಿದ್ದರು. ಆದರೆ ವಿಧಿ ಈಗ ಅವರನ್ನು ಕರೆದುಕೊಂಡಿತು.
ಈ ಹಿರಿಯ ಜೀವಕ್ಕೆ ವಿಶ್ವದ ಅನೇಕ ಗಣ್ಯವ್ಯಕ್ತಿಗಳು ಕಂಬನಿ ಮಿಡಿದಿದ್ದಾರೆ.
ಇನ್ನಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:24 am, Wed, 18 January 23