ವಯಸ್ಸು 80, ಮೈಗೆ ಸೀರೆ, ಕೈಗೆ ರಾಷ್ಟ್ರಧ್ವಜ, ಕಾಲಿಗೆ ಸ್ನೀಕರ್ಸ್, 4.2 ಕಿ.ಮೀ ಮ್ಯಾರಥಾನ್
Marathon : ಅಸ್ತವ್ಯಸ್ತ ದಿನಚರಿ ನೇರ ಆರೋಗ್ಯದ ಬೇರಿಗೇ ಕೈಹಾಕುತ್ತಿದೆ. ಇಂಥ ಸಮಯದಲ್ಲಿ ಈ ಅಜ್ಜಿಗಿಂತ ಸ್ಫೂರ್ತಿ ಬೇಕೆ? ಐದನೇ ಸಲ ಈಕೆ ಮ್ಯಾರಥಾನ್ನಲ್ಲಿ ಓಡಿದ್ದಾರೆ. ಇನ್ನೂ ಸುಮ್ಮನಿದ್ದೀರೇ ನೀವು? ಗೆಟ್ ಸೆಟ್ ರೆಡಿ ಗೋ...

Viral Video : ಮುಂಬೈನ ಮ್ಯಾರಥಾನ್ ಒಂದರಲ್ಲಿ ಓಡಿದ 80 ವರ್ಷದ ಈ ಹಿರಿಯ ಮಹಿಳೆಯನ್ನು ನೆಟ್ಮಂದಿ ಕಣ್ಣು ಬಿಟ್ಟು ನೋಡುತ್ತಿದೆ. ನಿಮಗೆ ನೀವೇ ಸಾಟಿ ಅಜ್ಜಿ ಎಂದು ಅಚ್ಚರಿಗೆ ಒಳಗಾಗಿದೆ. ನಿಮಗಿರುವ ಶಕ್ತಿಯಲ್ಲಿ ಕಾಲುಭಾಗವಾದರೂ ನಮಗಿದ್ದಿದ್ದರೆ ಎಂದು ಮುಖ ಜೋತು ಹಾಕಿ ಕುಳಿತಿದೆ. ಆದರೂ ಗಟ್ಟಿ ಮನಸ್ಸು ಮಾಡಿ, ನೀವೇ ನಮಗೆ ಸ್ಫೂರ್ತಿ ನಾಳೆಯಿಂದ ನಾವು ಓಡಲು ಶುರು ಮಾಡುತ್ತೇವೆ ಎಂದು ಮೊಬೈಲ್ನಲ್ಲಿ ಅಲರಾಂ ಸೆಟ್ ಮಾಡಿಕೊಳ್ಳುತ್ತಿದೆ.
ಭಾರತಿ ಎಂಬ ಈ ಹಿರಿಯ ಮಹಿಳೆ ಸೀರೆಯುಟ್ಟುಕೊಂಡು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು, ಕಾಲಲ್ಲಿ ಸ್ನೀಕರ್ಸ್ ಹಾಕಿಕೊಂಡು ಒಟ್ಟು 4.2 ಕಿ.ಮೀ ಓಡಿದ್ದಾರೆ! 80ರ ವಯಸ್ಸಿನಲ್ಲಿ ಇದು ಅಗಾಧ ಸಾಧನೆಯಲ್ಲದೆ ಇನ್ನೇನು? ಫಿಟ್ನೆಸ್, ಇಂದು ಮಕ್ಕಳಿಂದ ಹಿಡಿದು ಮುಪ್ಪಾನುಮುದುಕರವರೆಗೂ ಅತ್ಯವಶ್ಯವಾಗಿ ಕಾಪಾಡಿಕೊಳ್ಳಬೇಕಾಗಿರುವಂಥದ್ದು. ಅಷ್ಟೊಂದು ಅಸ್ತವ್ಯಸ್ತ ದಿನಚರಿ, ಜೀವನಶೈಲಿ ನಮ್ಮದಾಗಿದೆ. ಇದು ನೇರ ನಮ್ಮ ಆರೋಗ್ಯದ ಬೇರಿಗೇ ಕೈಹಾಕುತ್ತಿದೆ.
ಇದನ್ನೂ ಓದಿ : ‘ಆಪ್ತತೆ’ ಎಂಬ ಅಮೂಲ್ಯ ರತ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ
ಈ ವಿಡಿಯೋ ಅನ್ನು ಭಾರತಿಯವರ ಮೊಮ್ಮಗಳು ಡಿಂಪಲ್ ಮೆಹ್ತಾ ಫರ್ನಾಂಡಿಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ಧಾರೆ. ಭಾರತಿಯವರು 4.2 ಕಿ.ಮೀ ದೂರವನ್ನು 51 ನಿಮಿಷದಲ್ಲಿ ಕ್ರಮಿಸಿದ್ದಾರೆ. ‘ಪ್ರತೀ ದಿನ ನನಗೆ ಓಡುವ ಅಭ್ಯಾಸವಿದೆ. ಇಂಥ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದು 5ನೇ ಬಾರಿ. ನಾನು ಭಾರತೀಯಳಾಗಿದ್ದಕ್ಕೆ ಹೆಮ್ಮೆ ಇದೆ. ಅದು ನನ್ನ ಅಸ್ತಿತ್ವ ಕೂಡ, ಹಾಗಾಗಿ ರಾಷ್ಟ್ರಧ್ವಜ ಹಿಡಿದುಕೊಂಡಿದ್ದೇನೆ’ ಎಂದಿದ್ಧಾರೆ. ಯುವಜನತೆ ಸದೃಢ ಆರೋಗ್ಯಕ್ಕಾಗಿ ಓಡುವುದನ್ನು ರೂಢಿಸಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ ಭಾರತಿ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:13 pm, Thu, 19 January 23








