
ಆನೆಗಳು ತುಂಬಾನೇ ಸಾದು ಪ್ರಾಣಿಗಳು . ಅವುಗಳು ಅಷ್ಟಾಗಿ ಯಾರಿಗೂ ತೊಂದರೆ ಕೊಡಲು ಹೋಗುವುದಿಲ್ಲ. ಅವುಗಳು ತಮ್ಮ ಪಾಡಿಗೆ ಇದ್ದು ಬಿಡುತ್ತವೆ. ಒಂದು ವೇಳೆ ಇವುಗಳಿಗೆ ಏನಾದ್ರೂ ಸಿಟ್ಟು ಬಂದರೆ, ಮದವೇರಿದರೆ ಮಾತ್ರ ಮನುಷ್ಯರನ್ನು ಮಾತ್ರವಲ್ಲ , ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಎಸೆದು ರಂಪಾಟ ನಡೆಸುತ್ತವೆ. ಹೀಗೆ ಮದವೇರಿದ ಆನೆಯ ರಂಪಾಟದಿಂದಾಗಿ ಅಪಾಯಕ್ಕೆ ಸಿಲುಕಿದಂತವರ ಕೆಲವಾರು ಸುದ್ದಿಗಳು ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಕಾಡು ದಾರಿಯಲ್ಲಿ ಫೋಟೋ ಕ್ಲಿಕ್ಕಿಸಲೆಂದು ಕಾರಿನಿಂದ ಕೆಳಗಿಳಿದಂತಹ ವ್ಯಕ್ತಿಗಳಿಬ್ಬರನ್ನು ಮದವೇರಿದ ಕಾಡಾನೆಯೊಂದು ಅಟ್ಟಾಡಿಸಿಕೊಂಡು ಹೋಗಿದೆ. ಈ ಭಯಾನಕ ದೃಶ್ಯಾವಳಿಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇರಲಾರದೆ ಇರುವೆ ಬಿಟ್ಟುಕೊಂಡರು ಎಂಬ ಮಾತಿಗೆ ಈ ಘಟನೆ ಉದಾಹರಣೆಯಂತಿದೆ. ಕುಟುಂಬವೊಂದು ಊಟಿಗೆ ತೆರಳುತ್ತಿರುವ ಸಂದರ್ಭದಲ್ಲಿ ವಯನಾಡಿನ ಮುತಂಗ ಅರಣ್ಯ ಪ್ರದೇಶದ ಬಳಿ ಕಾರ್ ನಿಲ್ಲಿಸಿ, ಅದರಲ್ಲಿದ್ದ ವ್ಯಕ್ತಿಗಳಿಬ್ಬರು ಕಾರಿನಿಂದ ಇಳಿದು ಸೆಲ್ಫಿ ಕ್ಲಿಕ್ಕಿಸಲೆಂದು ಬರುತ್ತಾರೆ. ಅಷ್ಟರಲ್ಲಿ ಮದವೇರಿದ ಆನೆಯೊಂದು ಅವರನ್ನು ಅಟ್ಟಾಡಿಸಿಕೊಂಡು ಬಂದಿದೆ. ಅದೃಷ್ಟವಶಾತ್ ಆ ಇಬ್ಬರೂ ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ವೈರಲ್ ವಿಡಿಯೋವನ್ನು @wayanadgram ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಕ್ತಿಗಳಿಬ್ಬರನ್ನು ಕಾಡಾನೆಯೊಂದು ಅಟ್ಟಾಡಿಸಿಕೊಂಡು ಬರುವಂತಹ ಭಯಾನಕ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೋದಲ್ಲಿ ವಯನಾಡಿನ ಮುತಂಗ ಅರಣ್ಯ ಪ್ರದೇಶದ ಮಧ್ಯೆಯಿರುವ ರಸ್ತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಲೆಂದು ಕಾರಿಂದ ಕೆಳಗಿಳಿದು ಬಂದಂತಹ ವ್ಯಕ್ತಿಗಳಿಬ್ಬರನ್ನು ಅಲ್ಲೇ ಕಾಡಿನ ಅಕ್ಕ ಪಕ್ಕ ಸಂಚರಿಸುತ್ತಿದ್ದ ಮದವೇರಿದ ಆನೆಯೊಂದು ಅಟ್ಟಾಡಿಸಿಕೊಂಡು ಬಂದಿದೆ. ಆನೆ ನಮ್ಮನ್ನು ಕೊಂದೇ ಬಿಡುತ್ತೆ ಅಂತ ಭಯ ಪಟ್ಟುಕೊಂಡ ಆ ಇಬ್ಬರೂ ಪ್ರಾಣ ಉಳಿಸಿಕೊಂಡರೆ ಸಾಕೆಂದು ವೇಗವಾಗಿ ಓಡುತ್ತಾ ಬರುತ್ತಾರೆ. ಮದವೇರಿದ ಆನೆಯು ಅವರನ್ನು ಅಟ್ಟಾಡಿಸಿಕೊಂಡು ಬರುತ್ತದೆ. ಅಷ್ಟರಲ್ಲಿ ಅದರಲ್ಲಿ ಒಬ್ಬಾತ ಕಾಲು ಸ್ಲಿಪ್ ಆಗಿ ಕೆಳಗೆ ಬೀಳುತ್ತಾನೆ. ಆ ಸಂದರ್ಭದಲ್ಲಿ ಉಗ್ರ ರೂಪ ತಾಳಿದ್ದ ಗಜರಾಜ ಆತನಿಗೆ ಕಾಲಿನಿಂದ ತುಲಿಯಲು ಪ್ರಯತ್ನಿಸುತ್ತದೆ. ಕೂದಲೆಳೆಯುವ ಅಂತರದಲ್ಲಿ ಆನೆಯ ತುಳಿತದಿಂದ ಆ ವ್ಯಕ್ತಿ ತಪ್ಪಿಸಿಕೊಳ್ಳುತ್ತಾನೆ. ಇಷ್ಟೆಲ್ಲಾ ರಂಪ ರಾಮಯಣದ ನಂತರ ಅದೇನಾಯ್ತೋ ಗೊತ್ತಿಲ್ಲ ಕಾಡಾನೆ ಶಾಂತ ರೂಪ ತಾಳಿ ಯಾರಿಗೂ ತೊಂದರೆ ಕೊಡದೆ ಹಿಂತಿರುಗಿ ಹೋಗುತ್ತೆ, ಇವರಿಬ್ಬರು ಬದುಕಿತು ಬಡಜೀವ ಎನ್ನುತ್ತಾ, ಕಾರಿನೊಳಗೆ ಬಂದು ಕೂರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರಿನ ಡೆಂಟಲ್ ಕ್ಲಿನಿಕ್ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು; 2 ಲಕ್ಷ ರೂ. ಪರಿಹಾರ ಧನ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 16 ಸಾವಿರಕ್ಕೂ ಹೆಚ್ಚು ಲೈಕ್ಸ್ಗನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಪ್ರಜ್ಞಾವಂತ ನಾಗರಿಕರಾಗಿ ಅವರುಗಳು ಕಾಡು ದಾರಿಗಳಲ್ಲಿ ಇಂತಹ ಬೇಜವಬ್ದಾರಿತನದ ವರ್ತನೆ ತೋರುವುದು ಸರಿಯೇ?ʼ ಅಂತ ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವ್ಯಕ್ತಿಗಳಿಬ್ಬರ ನಸೀಬು ಬಹಳ ಚೆನ್ನಾಗಿತ್ತುʼ ಅಂತ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರಾಣಿಗಳು ಓಡಾಡುವಂತಹ ಕಾಡು ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸಬಾದರೆಂದು ಗೊತ್ತಿದ್ದರೂ ವಾಹನ ನಿಲ್ಲಿಸುವವರಿಗೆ ಇದೊಂದು ತಕ್ಕ ಪಾಠʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ