ತನ್ನ ತಲೆಯನ್ನು ತಾನೇ ಬೋಳಿಸಿಕೊಂಡ ಕ್ಷೌರಿಕ; ಕ್ಯಾನ್ಸರ್​ ಪೀಡಿತ ಮಹಿಳೆಗೆ ಭಾವನಾತ್ಮಕ ಸ್ಪಂದನೆ

Cancer : ಸಂಬಂಧಗಳು ಎಂದರೆ ರಕ್ತಸಂಬಂಧವಷ್ಟೇ ಅಲ್ಲ. ಹೀಗೆ ಮನಸಾ ಮಿಡಿಯುವ ಎಲ್ಲರೂ ಪರಸ್ಪರ ಸಂಬಂಧಿಕರೇ. 3.3 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ಧಾರೆ. ಇದನ್ನು ನೋಡಿದ ಮೇಲೆ ನೀವೇನಂತೀರಿ ಎನ್ನುವುದು ನಮಗೆ ಮುಖ್ಯ.

ತನ್ನ ತಲೆಯನ್ನು ತಾನೇ ಬೋಳಿಸಿಕೊಂಡ ಕ್ಷೌರಿಕ; ಕ್ಯಾನ್ಸರ್​ ಪೀಡಿತ ಮಹಿಳೆಗೆ ಭಾವನಾತ್ಮಕ ಸ್ಪಂದನೆ
ಕ್ಯಾನ್ಸರ್​ಗೆ ಒಳಗಾದ ಮಹಿಳೆಯೊಂದಿಗೆ ತಾನೂ ತಲೆ ಬೋಳಿಸಿಕೊಂಡ ಕ್ಷೌರಿಕ
Updated By: ಶ್ರೀದೇವಿ ಕಳಸದ

Updated on: Jan 16, 2023 | 2:25 PM

Viral Video : ಕೆಲ ತಿಂಗಳುಗಳ ಹಿಂದೆ ಅಣ್ಣನೊಬ್ಬ ತಂಗಿಯ ತಲೆಗೂದಲನ್ನು ಬೋಳಿಸುತ್ತ, ಇದ್ದಕ್ಕಿದ್ದಂತೆ ತನ್ನ ಕೂದಲನ್ನೂ ಬೋಳಿಸಿಕೊಂಡ ವಿಡಿಯೋ ವೈರಲ್ ಆಗಿದ್ದನ್ನು ನೀವು ಗಮನಿಸಿರಬಹುದು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ತಂಗಿಗೆ ಸಾಂತ್ವನ, ಭಾವನಾತ್ಮಕ ಆಸರೆ ನೀಡಲು ಅಣ್ಣ ಹೀಗೆ ಮಾಡಿದ್ದ. ಇದೀಗ ವೈರಲ್ ಆಗಿರುವ ಈ ವಿಡಿಯೋ ಕೂಡ ಇದೇ ಎಳೆಗೇ ಸಂಬಂಧಿಸಿದ್ದು.

ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು ತಲೆ ಬೋಳಿಸಿಕೊಳ್ಳಲು ಸಲೂನಿಗೆ ಬಂದಿದ್ದಾರೆ. ತಲೆಯನ್ನು ಬೋಳಿಸುತ್ತಿರುವಂತೆ ಆಕೆಗೆ ದುಃಖ ಉಮ್ಮಳಿಸಿ ಬಂದಿದೆ. ಕ್ಷೌರಿಕನೂ ಭಾವುಕನಾಗಿ ತನ್ನ ತಲೆಯನ್ನೂ ಸ್ವತಃ ಬೋಳಿಸಿಕೊಂಡಿದ್ಧಾನೆ. ಇದನ್ನು ನಿರೀಕ್ಷಿಸದ ಆಕೆ ಅಚ್ಚರಿಯಿಂದ ಮತ್ತಷ್ಟು ಭಾವುಕಳಾಗುತ್ತಾಳೆ. ಈ ಹೃದಯಸ್ಪರ್ಶಿಯಾದ ವಿಡಿಯೋ ತುಣುಕನ್ನು ಈ ತನಕ 3.3 ಮಿಲಿಯನ್​ ಜನರು ನೋಡಿದ್ದಾರೆ.

ಇದನ್ನೂ ನೋಡಿ: ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಮದುವೆಯ ದಿನವೇ ತಲೆಗೂದಲನ್ನು ಕತ್ತರಿಸಿದ ವಧು

ಈಗಾಗಲೇ 2,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ಧಾರೆ. ಯಾರೂ ಒಂಟಿಯಲ್ಲ, ಒಬ್ಬರೇ ಎಂದೂ ಹೋರಾಡಲು ಆಗುವುದಿಲ್ಲ. ಯಾರಾದರೂ ಹೀಗೆ ಸಾಥ್ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯನ್ನು ಈ ವಿಡಿಯೋ ಹೆಚ್ಚಿಸುತ್ತದೆ. ಈಕೆ ಬಹುಬೇಗ ಗುಣಮುಖವಾಗಲಿ ಎಂದು ಅನೇಕರು ಹಾರೈಸಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಮಾತುಗಳೇ ಹೊಮ್ಮುತ್ತಿಲ್ಲ ಎಂದಿದ್ಧಾರೆ ಹಲವರು.

ಇನನ್ನೂ ನೋಡಿ : ಸೈಕಲ್​ ಸವಾರಿಯೊಂದಿಗೆ ಅಲ್ಕಾ ಯಾಜ್ಞಿಕ್, ಕುಮಾರ ಸಾನು ಹಾಡಿಗೆ ಅಭಿನಯಿಸಿದ ಯುವತಿಯ ವಿಡಿಯೋ ವೈರಲ್

ರೋಗ ಎಂದಾಕ್ಷಣ ಎಷ್ಟೋ ಮನೆಗಳಲ್ಲಿ ಮನೆಮಂದಿಯೇ ಮೊದಲು ಮುಖ ತಿರುವುತ್ತಾರೆ. ಅಂಥದ್ದರಲ್ಲಿ ಹೀಗೆ ಅಪರಿಚಿತ ವ್ಯಕ್ತಿಯು ಭಾವನಾತ್ಮಕವಾಗಿ ಆಸರೆ ಕೊಡುವುದು ಬದುಕಿಗೆ ಎಷ್ಟೋ ಭರವಸೆ ಕೊಡುತ್ತದೆ. ಹಾಗಾಗಿ ಸಂಬಂಧಗಳು ಎಂದರೆ ರಕ್ತಸಂಬಂಧವಷ್ಟೇ ಅಲ್ಲ. ಹೀಗೆ ಮನಸಾ ಮಿಡಿಯುವ ಎಲ್ಲರೂ ಪರಸ್ಪರ ಸಂಬಂಧಿಕರೇ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 2:14 pm, Mon, 16 January 23