ಪರೀಕ್ಷೆಯಲ್ಲಿ ಭೋಜಪುರಿ ಸಿನೆಮಾ ಹಾಡು ಬರೆದ ವಿದ್ಯಾರ್ಥಿ; ಕೋಪಗೊಂಡ ಶಿಕ್ಷಕ

| Updated By: ಶ್ರೀದೇವಿ ಕಳಸದ

Updated on: Oct 21, 2022 | 1:08 PM

Bihar : ಪರೀಕ್ಷೆಯಲ್ಲಿ ಸಿನೆಮಾ ಹಾಡನ್ನು ಬರೆದಿದ್ದಾನೆ ಈ ವಿದ್ಯಾರ್ಥಿ. ಕೋಪಗೊಂಡ ಶಿಕ್ಷಕರು ಫೋನ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಹಾರದ ಶೈಕ್ಷಣಿಕ ಸ್ಥಿತಿ ನೋಡಿ ನೆಟ್ಟಿಗರು ಕಳವಳಗೊಂಡಿದ್ದಾರೆ. ನೋಡಿ ವಿಡಿಯೋ.

ಪರೀಕ್ಷೆಯಲ್ಲಿ ಭೋಜಪುರಿ ಸಿನೆಮಾ ಹಾಡು ಬರೆದ ವಿದ್ಯಾರ್ಥಿ; ಕೋಪಗೊಂಡ ಶಿಕ್ಷಕ
Bihar Student Writes Lyrics of Bhojpuri Song in Exam Paper Angry Teacher Scolds Him
Follow us on

Viral Video : ಒಟ್ಟಿನಲ್ಲಿ ಪಾಸ್​ ಆಗಬೇಕು. ಪಾಸಾಗಲೇಬೇಕೆಂದರೆ ಪರೀಕ್ಷೆ ಬರೆಯಬೇಕು. ಅದಕ್ಕಾಗಿ ಕೆಲವರು ಶಿಕ್ಷಕರಿಗೆ ಲಂಚ ಕೊಡುತ್ತಾರೆ. ಇನ್ನೂ ಕೆಲವರು ನಕಲು ಮಾಡುತ್ತಾರೆ. ಇನ್ನೂ ಹಲವರು ಒಟ್ಟು ಪೇಪರ್ ತುಂಬಿಸಲು ತಮಗೆ ಏನೆಲ್ಲ ನೆನಪಿದೆಯೋ ಅದನ್ನೆಲ್ಲ ಬರೆದು ತುಂಬಿಸಿಬಿಡುತ್ತಾರೆ. ಏನಾಗುತ್ತದೋ ಆಗಲಿ ಒಟ್ಟು ಪೇಪರ್ ತುಂಬಲಿ. ಪಾಸು ಮಾಡುವುದಾದರೆ ಮಾಡಲಿ ಎನ್ನುವ ಧೋರಣೆ. ಬಿಹಾರದ ಈ ವಿದ್ಯಾರ್ಥಿ ಪರೀಕ್ಷೆಯಲ್ಲಿ ಭೋಜಪುರಿ ಸಿನೆಮಾದ ಹಾಡುಗಳನ್ನು ಬರೆದಿದ್ದು, ಕೋಪಗೊಂಡ ಶಿಕ್ಷಕರು ಆತನನ್ನು ಫೋನಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಬಿಹಾರದ ಛಾಪ್ರಾದಲ್ಲಿ ಈ ಘಟನೆ ನಡೆದಿದೆ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿ ಭೋಜಪುರಿ ಸಿನೆಮಾದ ಹಾಡುಗಳನ್ನು ಬರೆದಿದ್ದಾನೆ. ಯಾವ ಶಿಕ್ಷಕರಿಗೆ ಕೋಪ ಬಾರದೆ ಇರುತ್ತದೆ? ತಕ್ಷಣವೇ ವಿದ್ಯಾರ್ಥಿಗೆ ಫೋನ್ ಮಾಡಿ ಬಯ್ದಿದ್ದಾರೆ. ನಿನ್ನ ತಂದೆಯನ್ನು ಕಾಲೇಜಿಗೆ ಕರೆದುಕೊಂಡು ಬರಬೇಕು ಎಂದು ಶಿಕ್ಷಕರು ಹೇಳಿದಾಗ, ಅವರು ಮನೆಯಲ್ಲಿಲ್ಲ ಎಂದಿದ್ದಾನೆ. ಹಾಗಿದ್ದರೆ ನಿನ್ನ ತಂದೆಯ ಫೋನ್​ ನಂಬರ್ ಕೊಡು ಎಂದು ಅವರು ಹೇಳಿದಾಗ, ತಪ್ಪಾಯಿತು ಇನ್ನೊಮ್ಮೆ ಹೀಗಾಗದಂತೆ ನಡೆದುಕೊಳ್ಳುತ್ತೇನೆ ಎಂದು ಕ್ಷಮಾಪಣೆ ಕೇಳಿದ್ದಾನೆ.

ಆದರೆ ಇದೆಲ್ಲವನ್ನೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು ಪೂರ್ವನಿಯೋಜಿತವೇ ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ. ಬಿಹಾರದ ಶಿಕ್ಷಣದ ಗುಣಮಟ್ಟ ಮತ್ತು ಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು. ‘ಇಂಥ ಜನರಿಂದಾಗಿಯೇ ಬಿಹಾರದ ಶಿಕ್ಷಣ ಸ್ಥಿತಿ ಹೀಗಾಗಿರುವುದು, ಬಿಹಾರದಿಂದ ಪಡೆದ ಶೈಕ್ಷಣಿಕ ಪ್ರಮಾಣ ಪತ್ರವನ್ನು ಯಾರೂ ಮಾನ್ಯ ಮಾಡುತ್ತಿಲ್ಲ’ ಎಂದು ಒಬ್ಬರು ಹೇಳಿದ್ದಾರೆ. ‘ಇದೆಲ್ಲ ಬಹಳ ಸಹಜ ಬಿಹಾರದಲ್ಲಿ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಇದು ಸ್ಕ್ರಿಪ್ಟೆಡ್​ ವಿಡಿಯೋ’ ಎಂದು ಕೆಲವರು ಹೇಳಿದ್ದಾರೆ. ‘ನಾಚಿಕೆಯಾಗುವುದಿಲ್ಲವಾ ಈತನಿಗೆ ಹೀಗೆ ಪರೀಕ್ಷೆಯಲ್ಲಿ ಬರೆಯಲು?’ ಎಂದಿದ್ದಾರೆ ಇನ್ನೂ ಒಬ್ಬರು.

ಹೀಗಾದರೆ ವಿದ್ಯಾರ್ಥಿಗಳ ಭವಿಷ್ಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:00 pm, Fri, 21 October 22