Viral Video: ಕುಡುಕರಿಗೇ ಪೈಪೋಟಿ!; ವಿಸ್ಕಿ ಬಾಟಲ್ ಓಪನ್ ಮಾಡಿ ಗಟಗಟನೆ ಕುಡಿದ ಕೋತಿಯ ವಿಡಿಯೋ ವೈರಲ್
ಅಂಗಡಿಯ ಕ್ಯಾಷಿಂಗ್ ಕೌಂಟರ್ ಬಳಿ ಜೋಡಿಸಿಟ್ಟಿದ್ದ ಮದ್ಯದ ಬಾಟಲಿಯನ್ನು ಹಿಡಿದುಕೊಂಡು ಮುಚ್ಚಳ ಓಪನ್ ಮಾಡಿದ ಕೋತಿ ಅದನ್ನು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಾಂಡ್ಲಾ: ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಎಂಬುದು ಹಳೇ ಗಾದೆ. ಮಂಗನ ಕೈಗೆ ಮದ್ಯ ಸಿಕ್ಕಿದಂತೆ ಎಂಬುದು ಹೊಸ ಗಾದೆ. ಅರೆ! ಇದೇನಿದು ವಿಚಿತ್ರ? ಎಂದು ಹುಬ್ಬೇರಿಸಬೇಡಿ. ಮಧ್ಯಪ್ರದೇಶದ ಮಾಂಡ್ಲಾ ಬಳಿ ಕೋತಿಯೊಂದು ಮದ್ಯದಂಗಡಿಗೆ ನುಗ್ಗಿ ಲಿಕ್ಕರ್ ಕುಡಿದಿರುವ ವಿಡಿಯೋವೊಂದು ಭಾರೀ ವೈರಲ್ (Viral Video) ಆಗಿದೆ.
ಮಾಂಡ್ಲಾ ಬಳಿಯ ಮದ್ಯದಂಗಡಿಗೆ ನುಗ್ಗಿದ ಕೋತಿ ಅಲ್ಲಿದ್ದ ಪೇಪರ್, ಪುಸ್ತಕಗಳನ್ನು ಎತ್ತಿಕೊಂಡು ಅದರೊಂದಿಗೆ ಆಟವಾಡಿದೆ. ನಂತರ ಅಂಗಡಿಯ ಕ್ಯಾಷಿಂಗ್ ಕೌಂಟರ್ ಬಳಿ ಜೋಡಿಸಿಟ್ಟಿದ್ದ ಮದ್ಯದ ಬಾಟಲಿಯನ್ನು ಹಿಡಿದುಕೊಂಡು ಮುಚ್ಚಳ ಓಪನ್ ಮಾಡಲು ಪ್ರಯತ್ನಿಸಿದೆ. ಸುಮಾರು 2-3 ನಿಮಿಷಗಳ ಕಾಲ ಬಾಟಲಿಯ ಕ್ಯಾಪ್ ತೆಗೆಯಲು ಒದ್ದಾಡಿದ ಕೋತಿಗೆ ಅಲ್ಲೇ ಪಕ್ಕದ ಟೇಬಲಿನಲ್ಲಿ ಕುಳಿತಿದ್ದವರು ಬಿಸ್ಕೆಟ್, ಬಾಳೆಹಣ್ಣುಗಳನ್ನು ನೀಡಿದ್ದಾರೆ.
ಆದರೆ, ಆ ಬಿಸ್ಕೆಟ್ನತ್ತ ಕಣ್ಣೆತ್ತಿಯೂ ನೋಡದ ಕಪಿರಾಯ ಬಾಟಲಿಯ ಮುಚ್ಚಳ ತೆಗೆಯುವುದರಲ್ಲಿ ಮಗ್ನವಾಗಿದೆ. ಕೊನೆಗೂ ಸತತ ಪ್ರಯತ್ನದ ನಂತರ ಆ ಬಾಟಲಿ ಓಪನ್ ಆಗಿದೆ. ಆ ಬಾಟಲಿಯನ್ನು ಮೇಲೆತ್ತಿ ಗಟಗಟನೆ ವಿಸ್ಕಿ ಕುಡಿದ ಮಂಗನ ಅವಸ್ಥೆಯನ್ನು ಅಲ್ಲಿದವರು ವಿಡಿಯೋ ಮಾಡಿಕೊಂಡಿದ್ದಾರೆ. ಹೆಂಡ ಕುಡಿದ ಕೋತಿ ತೂರಾಡುತ್ತಾ ಆ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡೇ ಅಂಗಡಿಯಿಂದ ಹೊರಗೆ ಹೋಗಿದೆ.
ಅಷ್ಟಕ್ಕೂ ಕೋತಿಗೂ, ಆಲ್ಕೋಹಾಲ್ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯೋಚನೆ ಮಾಡುತ್ತಿದ್ದೀರಾ? ಇದಕ್ಕೂ ಮೊದಲು ಆ ಅಂಗಡಿಯ ಬಳಿಯಿದ್ದ ಮರದಲ್ಲೇ ಓಡಾಡಿಕೊಂಡಿದ್ದ ಕೋತಿ ಆ ಮದ್ಯದಂಗಡಿಯ ಹೊರಗೆ ಬಿಸಾಡುತ್ತಿದ್ದ ಬಾಟಲಿಗಳಲ್ಲಿ ಅಳಿದುಳಿದ ಚೂರು ಆಲ್ಕೋಹಾಲ್ ಕುಡಿಯುತ್ತಿತ್ತಂತೆ. ಅದರ ರುಚಿ ತಿಳಿದಿದ್ದ ಕಾರಣಕ್ಕೆ ಒಂದು ಬಾಟಲಿ ಹೆಂಡವನ್ನು ಹೊಟ್ಟೆಗಿಳಿಸಿದೆ.
ವಿಚಿತ್ರವೆಂದರೆ, ಕೋತಿಯೊಂದು ಹೀಗೆ ಮದ್ಯದ ಬಾಟಲಿಯನ್ನು ಓಪನ್ ಮಾಡಿ ಕುಡಿಯುತ್ತಿದ್ದರೂ ಅಲ್ಲಿದ್ದವರು ಯಾರೂ ಅದನ್ನು ತಡೆಯಲು ಪ್ರಯತ್ನಿಸಿಲ್ಲ. ಈ ರೀತಿ ಕುಡಿದರೆ ಅದರ ಜೀವಕ್ಕೆ ಏನಾದರೂ ಅಪಾಯವಾಗಬಹುದು ಎಂಬುದನ್ನು ಕೂಡ ಯೋಚಿಸದೆ ಅಲ್ಲಿದ್ದವರು ಮಜಾ ತೆಗೆದುಕೊಂಡಿದ್ದಾರೆ. ಬುದ್ಧ ಇರುವ ಮನುಷ್ಯರಿಗೇ ಕುಡಿತ ಕೆಟ್ಟದು ಎಂದು ಹೇಳಿದರೂ ಕೇಳದೆ ಕುಡಿದು ತೂರಾಡುತ್ತಿರುತ್ತಾರೆ. ಅಂಥದ್ದರಲ್ಲಿ ಅಮಾಯಕ ಕೋತಿಗೇನು ಗೊತ್ತು ಅದು ಕೆಟ್ಟದ್ದು ಅಂತ! ಎಲ್ಲವೂ ಮದ್ಯದ ಮಹಾತ್ಮೆ!
ಇದನ್ನೂ ಓದಿ: Viral Video: ಅಚ್ಚರಿಯಾದರೂ ಸತ್ಯ; ವಕೀಲನ ಮೇಲೆ ದಾಳಿ ಮಾಡಿದ 2 ನಾಯಿಗಳಿಗೆ ಮರಣದಂಡನೆ ಶಿಕ್ಷೆ!
ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?
(Viral Video Monkey opens liquor bottle with mouth drinks like a boss in Madhya Pradesh)