Viral Video : ನಿನ್ನೆಯಷ್ಟೇ ಕಾನ್ಪುರದ ಬಾಬಾ ಆನಂದೇಶ್ವರ ದೇವಸ್ಥಾನದ ಆರತಿಯ ವೇಳೆ ಮೇಕೆಯೊಂದು ಮೊಣಕಾಲೂರಿ ಪ್ರಾರ್ಥಿಸುತ್ತಿರುವ ವಿಡಿಯೋ ನೋಡಿದಿರಿ. ಕೆಲ ದಿನಗಳ ಹಿಂದೆ ಪಂಜಾಬಿನ ಎಮ್ಮೆಯೊಂದು ತನ್ನ ಪೋಷಕಿ ನರ್ತಿಸಿ ತೋರಿಸಿದಾಗ ತಾನೂ ಆಕೆಯಂತೆಯೇ ಭಾಂಗ್ರಾ ನೃತ್ಯ ಮಾಡಿತ್ತು, ಆ ವಿಡಿಯೋ ಕೂಡ ನೋಡಿದಿರಿ. ಇನ್ನು ಬೆಕ್ಕುಗಳನ್ನಂತೂ ಅವುಗಳ ಪೋಷಕರು ತಮ್ಮ ಖುಷಿಗಾಗಿ ಮನಬಂದಂತೆ ದಿನವೂ ಕುಣಿಸುತ್ತಲೇ ಇರುತ್ತಾರೆ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಇದು ಮನ ಕಲಕದೇ ಇರಲಾರದು. ಅಲಂಕರಿಸಿಕೊಂಡ ಮರಿಯಾನೆಯೊಂದು ತುಂಬಾ ಉತ್ಸಾಹದಿಂದ ರಸ್ತೆಯಲ್ಲಿ ನರ್ತಿಸುತ್ತಾ ಸಾಗಿದೆ. ಹೀಗದು ಕುಣಿಯುತ್ತಿದೆ ಎಂದರೆ ಈತನಕ ಅದು ಅದೆಷ್ಟು ಸಾವಿರಸಲ ಅಂಕುಶದ ತಿವಿತಕ್ಕೆ ಒಳಗಾಗಿರಬಹುದು ಯೋಚಿಸಿ.
ನಮ್ಮೆಲ್ಲರ ಕಲ್ಪನೆಯಲ್ಲಿ ಮತ್ತು ವಾಸ್ತವದಲ್ಲಿ ಗಜಗಂಭೀರವೇ. ಆ ಗಂಭಿರತೆಯಲ್ಲಿರುವ ಸೌಂದರ್ಯ, ಸೂಕ್ಷ್ಮತೆ, ತಿಳಿವಳಿಕೆಯನ್ನೇ ಶತಮಾನಗಳಿಂದ ಆರಾಧಿಸಿಕೊಂಡು, ಪ್ರೀತಿಸಿಕೊಂಡು ಬಂದವರು ನಾವು. ಆದರೆ ಈ ಆನೆಮರಿ ಹೀಗೆ ನರ್ತಿಸುವುದನ್ನು ನೋಡುತ್ತಿದ್ದರೆ ಮನಸ್ಸು ಮ್ಲಾನವಾಗುತ್ತಿದೆ. ಇದೇನು ಆ್ಯನಿಮೇಟೆಡ್ ಆನೆಯೇ ಎಂದು ಅನುಮಾನ ಬರುವಷ್ಟು ಚುರುಕಿನಿಂದ ನರ್ತಿಸಿದೆ ಮರಿಯಾನೆ. ಇದು ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ವಿಡಿಯೋ ಅನ್ನು 2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.
ಕೆಲ ನೆಟ್ಟಿಗರಿಗೆ ಮಾತ್ರ ಈ ವಿಡಿಯೋ ಇಷ್ಟವಾಗಿದೆ. ಆದರೆ ಬಹುಪಾಲು ಸಂವೇದನಾಶೀಲ ನೆಟ್ಟಿಗರಿಗೆ ಇದರ ತರಬೇತುದಾರ ಅಥವಾ ಮಾವುತನ ಮೇಲೆ ಕೋಪ ಉಕ್ಕುಕ್ಕಿ ಬರುತ್ತಿದೆ. ದಯವಿಟ್ಟು ಪ್ರಾಣಿಹಿಂಸೆಯನ್ನು ನಿಲ್ಲಿಸಿ, ಇದು ಅನಾರೋಗ್ಯಕರ ಬೆಳವಣಿಗೆ, ಮನಸಿಗೆ ಹಿಂಸೆಯಾಗುತ್ತಿದೆ ಎಂದು ಒಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈ ನೃತ್ಯ ಕಲಿಯಲು, ಪ್ರದರ್ಶಿಸಲು ಇದು ಅದೆಷ್ಟು ಹಿಂಸೆ ಅನುಭವಿಸಿದೆಯೋ ದೇವರಿಗೇ ಗೊತ್ತು ಎಂದು ಮತ್ತೊಬ್ಬರು ಅಭಿಪ್ರಾಯಿಸಿದ್ದಾರೆ. ಪ್ರಾಣಿಗಳು ಅವುಗಳ ಸ್ವಭಾವಕ್ಕೆ ತಕ್ಕಂತೆ ಸಹಜವಾಗಿ ಬದುಕಲಿ ಹೀಗೆಲ್ಲ ಪಳಗಿಸಲು ಹೋಗಿ ಅವುಗಳನ್ನು ಹಿಂಸೆಗೆ ದೂಡಬೇಡಿ ಎಂದು ಮಗದೊಬ್ಬರು ವಿನಂತಿಸಿಕೊಂಡಿದ್ದಾರೆ. ಇದು ಅತ್ಯುತ್ತಮ ವಿಡಿಯೋ ಎಂದು ನೀವು ತಿಳಿದೊಂಡಿದ್ದರೆ ತಪ್ಪು. ಮಾವುತ ತನ್ನ ಕೈಯಲ್ಲಿ ಚೂಪಾದ ಅಂಕುಶದಿಂದ ಅದನ್ನು ತಿವಿದು ತಿವಿದು ನರ್ತಿಸುವಂತೆ ಮಾಡುತ್ತಿರುವುದು ನಿಮಗೆ ಕಾಣುತ್ತಿಲ್ಲವೆ? ಪ್ರಾಣಿಪ್ರಿಯರೊಬ್ಬರು ಸಂಕಟದಿಂದ ಪ್ರತಿಕ್ರಿಯಿಸಿದ್ದಾರೆ.
ಇಷ್ಟೆಲ್ಲ ಓದಿದ ನಿಮಗೆ ಏನೆನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:52 am, Tue, 11 October 22