ಈ ಮೂವರು ಬಾಲಕಿಯರು ಕೃಷ್ಣಾ ಎಂದಾಗಲೇ ದುಃಖ ಉಮ್ಮಳಿಸುವುದು ಏಕೆ?
Music : ಮೊದಲ ಮಗು ಕ್ರಿಶ್ಚಿಯನ್, ಎರಡನೇ ಮಗು ಮುಸಲ್ಮಾನ್, ಮೂರನೇ ಮಗು ಹಿಂದೂ. ಮೂವರೂ ಕೃಷ್ಣನ ಕುರಿತಾದ ಹಾಡನ್ನು ಬೇರೆ ಬೇರೆ ವಾಹಿನಿಗಳ ರಿಯಾಲಿಟಿ ಷೋನಲ್ಲಿ ಹಾಡಿದ್ದಾರೆ. ವಿಡಿಯೋ ನೋಡಿ.

Viral Video : ದೇವರು ಎಂದರೆ ಕಣ್ಣಿಗೆ ಕಾಣುವ ದೇವರಲ್ಲ. ಅಂತರಂಗದ ದೇವರು. ಆ ದೇವರನ್ನು ಸ್ಪರ್ಶಿಸಲು ಕಲೆಯ ಸಹಾಯ ಬೇಕು. ಅದಕ್ಕಾಗಿ ನಾಲಗೆಯ ಮೇಲೆ ಈಶ್ವರ, ಅಲ್ಲಾಹ್, ಏಸು ಹೀಗೆ ಯಾರ ನಾಮವೂ ನಲಿದಾಡಬಹುದು. ಹಾಗಾಗಿ ಅಮೂರ್ತವಾದುದನ್ನು ಮೂರ್ತರೂಪಗೊಳಿಸಲು ಸಾಹಿತ್ಯದ ಸಹಾಯ ಬೇಕು. ಭಕ್ತಿ ಭಾವದೊಳಗೆ ಅದನ್ನು ಶ್ರುತಿಗೊಳಿಸಿ ಅಂತರಂಗದೊಂದಿಗೆ ತಾದಾತ್ಮ್ಯ ಸಾಧಿಸಲು ಸಂಗೀತ ಬೇಕು. ಯಾವ ಭಾಷೆಯಾದರೇನು, ಯಾವ ದೇಶವಾದರೇನು, ಯಾವ ಧರ್ಮವಾದರೇನು, ಯಾವ ಮತಪಂಥವಾದರೇನು? ಕೇಳುಗರ ಎದೆಯನ್ನು ಮೃದುಗೊಳಿಸಿದರೆ ಅದೇ ಕಲಾವಿದರ, ಕಲೆಯ ಸಾರ್ಥಕತೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮೂವರು ಪುಟಾಣಿಗಳು ಒಂದೇ ಹಾಡನ್ನು ಬೇರೆ ಬೇರೆ ವಾಹಿನಿಯ ರಿಯಾಲಿಟಿ ಷೋಗಳಲ್ಲಿ ಹಾಡಿದ್ದಾರೆ.
ಮೂವರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರು. ಮೊದಲ ಮಗು ಕ್ರಿಶ್ಚಿಯನ್, ಎರಡನೇ ಮಗು ಮುಸಲ್ಮಾನ್, ಮೂರನೇಯ ಮಗು ಹಿಂದೂ. ಮೂವರೂ ಕೃಷ್ಣನ ಕುರಿತಾದ ಹಾಡನ್ನು ಹಾಡಿದ್ದಾರೆ. ಹಾಡುತ್ತ ಹಾಡುತ್ತ ತಾರಕ ಸ್ಥಾಯಿಯಲ್ಲಿ ಕೊನೆಯ ಸ್ವರದ (ಷಡ್ಜದ) ಮೇಲೆ ಕೃಷ್ಣಾ ಎಂದು ವಿರಮಿಸಿದಾಗ ಮೂವರಿಗೂ ದುಃಖ ಉಮ್ಮಳಿಸಿ ಬರುತ್ತದೆ. ಕೇಳಿದ ಯಾರಿಗೂ ಇದು ಭಾವುಕರನ್ನಾಗಿ ಮಾಡದೇ ಇರದು. ಹಾಗೇ ಹಾಡಿದವರಿಗೂ.
ಇದನ್ನೂ ಓದಿ : ಪಾರ್ಕಿನ್ಸನ್ಸ್ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್
ಇಷ್ಟು ಪುಟ್ಟ ವಯಸ್ಸಿನಲ್ಲಿ ಎಲ್ಲ ಸ್ಥಾಯಿಗಳಲ್ಲೂ ಇಷ್ಟೊಂದು ಶ್ರುತಿ, ಲಯ, ಭಾವಪೂರ್ಣವಾಗಿ ಹಾಡುವುದನ್ನು ಕೇಳಿದಾಗ ಮೈನವಿರೇಳದೇ ಇರದು. ಆದರೆ, ತಾಂತ್ರಿಕವಾಗಿ ಗಮನಿಸಿದಾಗ, ಯಾವ ಶ್ರುತಿಯಿಂದ ಹಾಡನ್ನು ಆರಂಭಿಸಿದ್ದರೋ ಅದೇ ಶ್ರುತಿಗೆ ಮರಳುವಲ್ಲಿ ಮೂವರು ಮಕ್ಕಳಿಗೂ ಗೊಂದಲವಾಗಿದೆ, ಶ್ರುತಿ ತಪ್ಪಿದೆ. ಆ ಅಳುಕು, ಆತಂಕ ಬಿಕ್ಕುವಂತೆ ಮಾಡಿದೆ. ಏಕೆಂದರೆ ಇದು ಕಷ್ಟಕರವಾದ ಸಂಯೋಜನೆ. ಆದರೆ ಒಟ್ಟಾರೆಯಾಗಿ ಹಾಡನ್ನು ಕೇಳಿದಾಗ ಎಲ್ಲ ತಾಂತ್ರಿಕಾಂಶಗಳನ್ನು ಬಿಟ್ಟು ಭಾವವೊಂದೇ ಅನುರಣಿಸುತ್ತದೆ. ಈ ಮೂಲಕ ಕೇಳುಗರನ್ನು ಇದು ಹಿಡಿದಿಡುತ್ತದೆ.
ಕಲೆಗೆ ಯಾವ ಧರ್ಮ? ಅದು ಪ್ರತಿಯೊಬ್ಬರನ್ನೂ ಒಳಗೊಳ್ಳಲಿ. ಒಳಗೊಳ್ಳುವಂಥ ಅವಕಾಶಗಳು ಎಲ್ಲರಿಗೂ ಸಿಗಲಿ. ಅಲ್ಲಿ ಖಂಡಿತ ದೇವರು ನೆಲೆಗೊಳ್ಳುತ್ತಾನೆ. ದೇವರು ನೆಲೆಗೊಂಡಲ್ಲಿ ಹೃದಯವೇ ಆದ್ಯ. ಇದಕ್ಕೆ ಈ ಮೂವರು ಮಕ್ಕಳೇ ಸಾಕ್ಷಿ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Mon, 9 January 23