Dolls : ಊರ ಜಾತ್ರೆಯಲ್ಲಿ ಅಜ್ಜನೋ, ಅಜ್ಜಿಯೋ, ಅಪ್ಪ, ಅಮ್ಮನೋ, ಅತ್ತೆ, ಮಾವನೋ, ಪಕ್ಕದ ಮನೆಯ ಆಂಟಿ ಆಂಕಲ್ ಹೀಗೆ ಯಾರೂ… ಈ ತಿಳಿಗುಲಾಬಿಯ ಪುಟಾಣಿ ಬೊಂಬೆಯನ್ನು ನಿಮ್ಮ ಅಥವಾ ಅಕ್ಕ ತಂಗಿಯರ ಮಡಿಲಿಗೆ ಹಾಕಿದಾಗಿನ ದೃಶ್ಯಸಂಭ್ರಮ ನೆನಪಿದೆಯೇ? ಪಿಳಿಪಿಳಿ ಕಣ್ಣುಬಿಡುತ್ತ ಛಂದಛಂದದ ಬಟ್ಟೆ ತೊಟ್ಟುಕೊಂಡು ಯಾರು ಎಲ್ಲಿ ಕರೆದರೂ ತುಟಿ ಪಿಟಕ್ಕೆನ್ನದೆ ಬಗಲಗೂಸಿನಂತೆ ಇರುವ ಭಾರತೀಯ ಮಕ್ಕಳ ಈ ಬಾರ್ಬಿ ಮಕ್ಕಳಲೋಕದ ದೇವತೆ. ಈ ಪುಟ್ಟದೇವತೆ ಎಲ್ಲಿ ಹೇಗೆ ಮೈದಳೆಯುತ್ತಾಳೆ ಎನ್ನುವುದನ್ನು ಎಂದಾದರೂ ನೋಡಿದ್ದಿದೆಯೇ?
ಇದನ್ನೂ ಓದಿ : Viral Video: ವಾಟ್ ಝುಮ್ಕಾ ದಾದೀಜಿ! 65ರ ಅಜ್ಜಿಯಿಂದ ರಣವೀರ್ ಸಿಂಗ್, ಅಲಿಯಾ ಭಟ್ ಹಾಡಿಗೆ ನೃತ್ಯ
ಯಂತ್ರದೊಳ ಹೊಕ್ಕು ಶ್ರಮಿಕರ ಕೈಯ್ಯೊಳಗಾಡಿ ರೂಪುಗೊಳ್ಳುವ ಈಕೆ ಕೇಶವಿನ್ಯಾಸ, ಅಲಂಕಾರ, ಉಡುಪು ಧರಿಸಿ ಪ್ಲಾಸ್ಟೀಕಿನ ಚೀಲದೊಳಗೆ ಪ್ಯಾಕ್ ಆಗುವಾಗಿನ ತನಕದ ಹಂತಗಳನ್ನು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ನೀವು ಈ ವಿಡಿಯೋ ನೋಡಿದ ಮೇಲೆ ಖಂಡಿತ ಮಕ್ಕಳಿಗೂ ತೋರಿಸುತ್ತೀರಿ! ಅಷ್ಟು ಮುದ್ದಾಗಿದೆ ಈ ವಿಡಿಯೋ.
ಈ ವಿಡಿಯೋ ಅನ್ನು 1.6 ಮಿಲಿಯನ್ ಜನರು ಇಷ್ಟಪಟ್ಟಿದ್ದಾರೆ. ಆದರೆ ಈಕೆ ಬಾರ್ಬಿ ಅಲ್ಲ, ಬಾರ್ಬಿ ಇಂಥ ಚೀಪ್ ಫ್ಯಾಕ್ಟರಿಯಲ್ಲಿ ತಯಾರಾಗಲಾರಳು ಎಂದು ವಾದ ಮಾಡುತ್ತಿದ್ದಾರೆ ನೆಟ್ಟಿಗರು. ಈಕೆ ಬಾರ್ಬಿ ಹೌದು ಆದರೆ ಭಾರತದ ಬಡಕುಟುಂಬದಲ್ಲಿ ಜನಿಸಿದವಳು ಎಂದಿದ್ದಾರೆ ಒಬ್ಬರು. ಈಕೆಯನ್ನು ಬಾರ್ಬಿ ಎನ್ನಲು ಸಾಧ್ಯವೇ ಇಲ್ಲ, ಈಕೆ ಒಂದು ಅಗ್ಗದ ಗೊಂಬೆ ಎಂದಿದ್ದಾರೆ ಮತ್ತೊಬ್ಬರು. ಎಲ್ಲಾ ದುಬಾರಿ ಬ್ರ್ಯಾಂಡ್ಗಳ ಫ್ಯಾಷನ್ ಉತ್ಪನ್ನಗಳನ್ನು ಅಗ್ಗದ ಕಾರ್ಖಾನೆಯಲ್ಲಿಯೇ ತಯಾರಿಸಲಾಗುತ್ತದೆ! ಎಂದು ಇನ್ನೊಬ್ಬರು ಪ್ರತಿಯಾಗಿ ಹೇಳಿದ್ದಾರೆ.
ಸಾವಿರಾರು ಜನರು ಭಾರತದ ಬಡ ಬಾರ್ಬಿಯ ಬಗ್ಗೆ ಸಾಕಷ್ಟು ಪರವಿರೋಧ ಚರ್ಚೆ ನಡೆಸುತ್ತಲೇ ಇದ್ದಾರೆ ಬಾರ್ಬಿ ಕಾರ್ಖಾನೆಯ ವಿಡಿಯೋದಡಿ. ನಾನು ಕಝಕಿಸ್ತಾನದವ, ಇಲ್ಲಿ ಬಾರ್ಬಿ ತುಂಬಾ ದುಬಾರಿ, ಸಣ್ಣ ಕಾರ್ಖಾನೆಯಲ್ಲಿ ತಯಾರಾದರೆ ಅಷ್ಟೇಕೆ ದುಬಾರಿ? ಎಂದು ಪ್ರಶ್ನಿಸಿದ್ಧಾರೆ ಒಬ್ಬರು. ಅಯ್ಯೋ ನೀವೆಲ್ಲ ವೃಥಾ ಚರ್ಚೆ ನಡೆಸುತ್ತಿದ್ದೀರಿ. ಅಷ್ಟಕ್ಕೂ ಇವು ಬೇಬಿ ಡಾಲ್, ಬಾರ್ಬಿ ಡಾಲ್ ಅಲ್ಲ. ಈಗ ಬಾರ್ಬಿ ಸಿನೆಮಾ ಟ್ರೆಂಡ್ನಲ್ಲಿ ಇರುವುದರಿಂದ ವ್ಲಾಗರ್ ಈ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರಷ್ಟೇ ಎಂದಿದ್ದಾರೆ ಇನ್ನೊಬ್ಬರು. ಅದೇನೇ ಇರಲಿ 90 ದಶಕದಲ್ಲಿ ಹುಟ್ಟಿದ ನಮಗೆ ನಮ್ಮೂರಿನ ಜಾತ್ರೆಗಳಲ್ಲಿ ಸಿಗುವ ಇಂಥ ಗೊಂಬೆಗಳೇ ಬಾರ್ಬಿ ಎಂದಿದ್ಧಾರೆ ಒಂದಿಷ್ಟು ಜನ.
ಇದನ್ನೂ ಓದಿ :Viral Video: ಹೊಸ ಸ್ಪ್ಯಾನಿಷ್ ಟೀಚರ್ ಬಂದಿದಾರೆ ಎಲ್ಲ ಆನ್ಲೈನ್ ಕ್ಲಾಸಿಗೆ ಬನ್ನಿ
ಭಾರತದ ಬಾರ್ಬಿಯ ಬಗ್ಗೆ ನೀವೆಲ್ಲ ಅದೆಷ್ಟು ಹಗೂರವಾಗಿ ಮಾತನಾಡಿದಿರಲ್ಲ, ಒಮ್ಮೆ ಬಂದು ನೋಡಿ, ಕೆಳವರ್ಗ ಮತ್ತು ಮಧ್ಯಮ ವರ್ಗದ ಮನೆಗಳ ಮಕ್ಕಳ ಕೈಗೆ ಇಂಥ ಬಾರ್ಬಿಯನ್ನು ಕೈಗಿಟ್ಟರೆ ಅವರ ಮುಖದ ಮೇಲೆ ಅರಳುವ ನಗೆಗೆ ನೀವೆಂದೂ ಬೆಲೆ ಕಟ್ಟಲಾರಿರಿ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ನೀವೇನಂತೀರಿ ಭಾರತೀಯ ಬಾರ್ಬಿಯ ಬಗ್ಗೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:44 am, Wed, 16 August 23